ಬಳ್ಳಾರಿ,ಜ.23- ಸದ್ಯಕ್ಕೆ ನನಗೆ ಪಕ್ಷ ಬಿಡುವ ಆಲೋಚನೆಯಿಲ್ಲ. ಒಂದು ವೇಳೆ ಅಂಥ ಪರಿಸ್ಥಿತಿ ಬಂದರೆ ಕೇಂದ್ರ ವರಿಷ್ಠರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಬುಧವಾರ ನನ್ನನ್ನು ಪಕ್ಷ ಸರಿಯಾಗಿ ನಡೆಸಿಕೊಳ್ಳದಿದ್ದರೆ ನಾನು ಅವಮಾನವನ್ನು ಸಹಿಸಿಕೊಂಡು ಇರುವುದಿಲ್ಲ. ಬೇಕಿದ್ದರೆ ಬಿಜೆಪಿ ತೊರೆಯಲು ಸಿದ್ದ ಎಂದು ಘೋಷಣೆ ಮಾಡಿದ್ದರು.
ಇದಕ್ಕೆ ಇಂದು ಬಳ್ಳಾರಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ ರಾಮುಲು, ಸದ್ಯಕ್ಕೆ ನನಗೆ ಪಕ್ಷ ಬಿಡುವ ಯಾವುದೇ ಆಲೋಚನೆ ಇಲ್ಲ. ಬಿಜೆಪಿ ನನಗೆ ತಾಯಿ ಇದ್ದಂತೆ. ದಶಕಗಳ ಕಾಲ ನನಗೆ ಎಲ್ಲವನ್ನು ಕೊಟ್ಟು ಬೆಳೆಸಿದೆ. ಅಷ್ಟು ಬೇಗನೆ ನಾನು ತಾಯಿ-ಮಗ ಸಂಬಂಧವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು.
ನಮದು ಕೂಡ ರಾಜಕೀಯ ಹಿನ್ನಲೆಯಯುಳ್ಳ ಕುಟುಂಬವೇ. ನಾವೇನು ಹಾದಿಬೀದಿಯಿಂದ ಬಂದವರಲ್ಲ. 40 ವರ್ಷ ರಾಜಕೀಯ ಮಾಡಿಕೊಂಡು ಏಳುಬೀಳುಗಳನ್ನು ಕಂಡಿದ್ದೇನೆ. ಸೋಲುಗೆಲುವು ಹೊಸದೇನಲ್ಲ ಎಂದು ತಮ ಆತೀಯ ಜನಾರ್ಧನ ರೆಡ್ಡಿ ಹೆಸರು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು.
ಬಿ.ಶ್ರೀರಾಮುಲು ಅವರನ್ನು ಬೆಳೆಸಿದ್ದೇ ನಾನು ಎಂಬ ರೆಡ್ಡಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ನಾನು ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ನನ್ನ ಬೆನ್ನಿಗೆ ಕಾರ್ಯಕರ್ತರ ಪಡೆ ಇದೆ. ಗಾಲಿ ಜನಾರ್ಧನ ರೆಡ್ಡಿ ಸುಳ್ಳಿನ ಮೇಲೆ ಕೋಟೆಯನ್ನು ಕಟ್ಟಲು ಹೊರಟಿದ್ದಾರೆ. ಇದನ್ನು ನಂಬುವಷ್ಟು ಜನರು ಮೂರ್ಖರಲ್ಲ ಎಂದರು.
ಯಾರದೋ ಒಬ್ಬರ ಆಶೀರ್ವಾದದಿಂದ ಬಳ್ಳಾರಿ ಅಥವಾ ರಾಜ್ಯದಲ್ಲಿ ಬೆಳೆದು ಬಂದಿಲ್ಲ. ಬಳ್ಳಾರಿಯಲ್ಲಿ ದಬ್ಬಾಳಿಕೆ ಮಾಡುತ್ತಿದ್ದ ಕುಟುಂಬದವರ ವಿರುದ್ಧ ಹಾದಿಬೀದಿಯಲ್ಲಿ ಹೋರಾಟ ನಡೆಸಿ ಬೆಳೆದಿದ್ದೇನೆ. ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ್ದೇನೆ. ಹೀಗಾಗಿಯೇ ಪಕ್ಷ ನನ್ನನ್ನು ಗುರುತಿಸಿತ್ತು ಎಂದು ತಿಳಿಸಿದರು.
ಒಬ್ಬ ಸಾಮಾನ್ಯನಾಗಿದ್ದ ನನ್ನನ್ನು ಬಿಜೆಪಿಯು ಗುರುತಿಸಿ ಬೆಳೆಸಿದೆ. ಏನೂ ಇಲ್ಲದಿದ್ದರೆ ನನಗೇಕೆ ಏಕಕಾಲದಲ್ಲಿ ಮೊಳಕಾಲೂರು ಮತ್ತು ಬಾದಾಮಿಯಲ್ಲಿ ಟಿಕೆಟ್ ನೀಡುತ್ತಿತ್ತು. ರಾಮುಲು ಶಕ್ತಿ ಏನೆಂಬುದು ಬಿಜೆಪಿಗೆ ಗೊತ್ತಿದೆ. ನನಗೆ ಪ್ರಧಾನಿ ನರೇಂದ್ರಮೋದಿ , ಅಮಿತ್ ಷಾ ಅವರಿಂದಲೂ ಸಂಪರ್ಕವಿದೆ. ನಾನು ಗೆಲ್ಲಲು ಜನಾರ್ಧನ ರೆಡ್ಡಿ ಮ್ಯಾಜಿಕ್ ಮಾಡಿದ್ದರೇ? ಎಂದು ಪ್ರಶ್ನಿಸಿದರು.
ನಾನು ಈವರೆಗೂ ಜನಾರ್ಧನ ರೆಡ್ಡಿಯಿಂದ ಬೆಳದು ಬಂದಿಲ್ಲ. ಒಂದು ತಳ ಸಮುದಾಯದಿಂದ ಬಂದ ನಾನು ಸ್ವಂತ ಪರಿಶ್ರಮದಿಂದ ಬೆಳೆದಿದ್ದೇನೆ. ರೆಡ್ಡಿ ಆಧಾರ ರಹಿತ ಆರೋಪ ಮಾಡಿದರೆ ಅದನ್ನು ಕೇಳಲು ನಾನೇನು ಚಿಕ್ಕ ಮಗುವಲ್ಲ ಎಂದು ಗುಡುಗಿದರು.
ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನಾನೇ ಕಾರಣ ಎಂದು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಕ್ಕೆ ನಾನು ಸಮಜಾಯಿಷಿ ಉತ್ತರ ಕೊಟ್ಟಿದ್ದೇನೆ ಎಂದರು.
ಸಭೆಯಲ್ಲಿ ನನ್ನ ಪಕ್ಕದಲ್ಲೇ ಕೂತಿದ್ದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಂದೇ ಒಂದೂ ಮಾತನಾಡದೆ ಇದ್ದದ್ದು ನನಗೆ ತುಂಬಾ ಬೇಸರ ಉಂಟು ಮಾಡಿತ್ತು. ಶ್ರೀರಾಮುಲು ಎಂದೂ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಲ್ಲ ಎಂದು ನನ್ನ ಪರವಾಗಿ ಹೇಳಲು ಏನಾಗಿತ್ತು ಎಂದು ಪ್ರಶ್ನಿಸಿದರು.
ನನ್ನ ಪರವಾಗಿ ಸಭೆಯಲ್ಲಿದ್ದ ಡಿ.ವಿ.ಸದಾನಂದಗೌಡ ಬಿಟ್ಟರೆ ಯಾರೂ ಮಾತನಾಡಲಿಲ್ಲ. ಶ್ರೀರಾಮುಲು ಟಿಕೆಟ್ ಸಿಗಲಿ ಬಿಡಲಿ ಪಕ್ಷ ವಿರೋಧಿ ಚಟುವಟಿಕೆ ಅಥವಾ ಅಭ್ಯರ್ಥಿ ಸೋಲಿಗೆ ಷಡ್ಯಂತ್ರ ನಡೆಸುವ ಜಾಯಮಾನದವನಲ್ಲ. ಅದನ್ನು ನಾನು ಬೆಳೆಸಿಕೊಂಡು ಬಂದಿಲ್ಲ. ಈಗಲಾದರೂ ಜನಾರ್ಧನ ರೆಡ್ಡಿ ಸುಳ್ಳು ಹೇಳುವುದನ್ನು ಬಿಡಲಿ ಎಂದು ಮನವಿ ಮಾಡಿದರು.
ನನ್ನಿಂದಲೇ ಶ್ರೀರಾಮುಲು ಬೆಳೆದಿದ್ದು ಎಂದು ಹೇಳುವುದು ಸರಿಯಲ್ಲ.
ಪ್ರತಿಯೊಬ್ಬ ರಾಜಕಾರಣಿಗೂ ಅವರದೇ ಆದ ಕಾರ್ಯಕರ್ತರು, ಅಭಿಮಾನಿಗಳು ಇರುತ್ತಾರೆ. ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದ ನಾನಾ ಕಡೆ ಪಕ್ಷವನ್ನು ಸಂಘಟಿಸಲು ಶ್ರಮ ಹಾಕಿದ್ದೇನೆ. ಏನೇನೂ ಇಲ್ಲದ ಬಳ್ಳಾರಿಯಲ್ಲೂ ಬಿಜೆಪಿ ಒಂದು ಕಾಲಕ್ಕೆ 9 ಕ್ಷೇತ್ರದಲ್ಲಿ 8 ಕಡೆ ಗೆಲ್ಲಲ್ಲು ನನ್ನ ಪರಿಶ್ರಮವಿದೆ. ಇದನ್ನೆಲ್ಲ ಮರೆತು ರೆಡ್ಡಿ ನನ್ನ ಬಗ್ಗೆ ಮಾತನಾಡಿದರೆ ನಾನು ಕೂಡ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.