ಬೆಂಗಳೂರು,ಜ.23- ಈ ಬಾರಿಯ ದೆಹಲಿಯ ಗಣರಾಜ್ಯೋತ್ಸವಪಥಸಂಚಲನದಲ್ಲಿ ಲಕ್ಕುಂಡಿಯ ಶಿಲ್ಪಕಲಾ ವೈಭವ ರಾರಾಜಿಸಲಿದೆ. ಜ.26ರಂದು ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲು ಸರ್ವಸನ್ನದ್ಧವಾಗಿದೆ.
ಈ ಸ್ತಬ್ಧಚಿತ್ರವನ್ನು ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ್ದು ಇದು ರಾಜ್ಯದ ಸಹಜೀವನ, ಸರ್ವಧರ್ಮ ಸಹಿಷ್ಣುತೆ ಮತ್ತು ಪ್ರೌಢಿಮೆಯ ಪ್ರತಿಬಿಂಬವಾಗಿದೆ.
ಈ ಸಲ ವಾರ್ತಾ ಇಲಾಖೆಯು ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು, ಕರ್ನಾಟಕದ ಸಮೃದ್ಧಿಯ ಆಚರಣೆಗಳು, ಮೆಕ್ಕೆಕಟ್ಟು: ಮರಕೆತ್ತನೆಯ ದೈವನಿಧಿ, ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು ಎಂಬ ನಾಲ್ಕು ಪರಿಕಲ್ಪನೆಗಳನ್ನು ಸ್ತಬ್ಧಚಿತ್ರಕ್ಕಾಗಿ ರಕ್ಷಣಾ ಇಲಾಖೆಗೆ ಸಲ್ಲಿಸಿತ್ತು.
ಅವುಗಳ ಪೈಕಿ ಡಿಸೆಂಬರ್ ಕೊನೆಯ ವಾರದಲ್ಲಿ ರಕ್ಷಣಾ ಇಲಾಖೆ ಲಕ್ಕುಂಡಿ ಸ್ತಬ್ಧಚಿತ್ರಕ್ಕೆ ಸಮತಿ ನೀಡಿತ್ತು. ಈಗ ಸ್ತಬ್ಧಚಿತ್ರ ನಿರ್ಮಾಣಗೊಂಡಿದ್ದು ಪ್ರದರ್ಶನಕ್ಕೆ ಸಜ್ಜಾಗಿದೆ.ಸ್ತಬ್ಧಚಿತ್ರವು ಮುಂಭಾಗದಲ್ಲಿ ಬ್ರಹಜಿನಾಲಯದ ಬ್ರಹನ ಪ್ರತಿಮೆ, ಬಳಿಕ ಈ ದೇಗುಲದ ತೆರೆದ ಕಂಬದ ಮಂಟಪ, ಪ್ರಧಾನ ಭಾಗದಲ್ಲಿ ಸಾಲಂಕೃತ, ವೈಭವೋಪೇತ ಕಾಶಿ ವಿಶ್ವೇಶ್ವರ ದೇವಾಲಯ, ಈಶ್ವರನಿಗೆ ಮುಡಿಪಾದ ನನ್ನೇಶ್ವರ ದೇವಸ್ಥಾನದ ಪ್ರತಿಕೃತಿಗಳನ್ನು ಹೊಂದಿರುತ್ತದೆ ಎಂದು ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಅವರು ತಿಳಿಸಿದ್ದಾರೆ.