Friday, January 24, 2025
Homeರಾಜ್ಯದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಅರಾಜಕತೆಯತ್ತ ಕರ್ನಾಟಕ : ವಿಜಯೇಂದ್ರ ಕೆಂಡ

ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಅರಾಜಕತೆಯತ್ತ ಕರ್ನಾಟಕ : ವಿಜಯೇಂದ್ರ ಕೆಂಡ

BY Vijayendra on Congress government's administrative failure

ಬೆಂಗಳೂರು,ಜ.23– ಕರ್ನಾಟಕ ಅರಾಜಕತೆಯತ್ತ ಸಾಗುತ್ತಿದೆ, ಈ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ, ಯಾವುದೇ ಪ್ರತಿಭಟನೆಗಳು, ಜನರ ಆಕ್ರಂದನದ ಬಿಸಿ ತಟ್ಟುತ್ತಿಲ್ಲ. ಈ ಕ್ಷಣದಿಂದಲಾದರೂ ಜನರ ರಕ್ಷಣೆಗೆ ಧಾವಿಸದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಒಂದು ಕಡೆ ಜನರ ಮಾನ, ಪ್ರಾಣ, ಆಸ್ತಿಗಳಿಗೆ ರಕ್ಷಣೆ ಸಿಗದೆ ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರಗಳು ತಾಂಡವವಾಡುತ್ತಿದ್ದರೆ, ಮತ್ತೊಂದು ಕಡೆ ಚಕ್ರಬಡ್ಡಿ ವಸೂಲಿ, ಠೇವಣಿ ವಂಚನೆ ನಿರಂತರವಾಗಿ ನಡೆಯುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಗಳಿಗಾಗಿ ಮೀಸಲಾಗಿದ್ದ ಹಣವನ್ನು ದುರುಪಯೋಗಿಸಿಕೊಂಡು ಪರಿಶಿಷ್ಟರನ್ನು ವಂಚಿಸಿದ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದಾಗಿನಿಂದಲೂ ಈ ಸಮುದಾಯಗಳ ನೋವು, ಸಂಕಷ್ಟ, ದುಃಖ- ದುಮಾನಗಳನ್ನು ತೋಡಿಕೊಳ್ಳಲು ಆಗದ ಪರಿಸ್ಥಿತಿಗೂ ಕಾರಣವಾಗಿದೆ ಎಂದು ದೂರಿದರು.

ಸರ್ಕಾರ ಈ ವರೆವಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಅಧ್ಯಕ್ಷರ ನೇಮಕ ಮಾಡುವ ಕಾಳಜಿ ಪ್ರದರ್ಶಿಸದೆ ಆಯೋಗವು ನಿಷ್ಕ್ರೀಯಗೊಳ್ಳುವಂತೆ ಮಾಡಿದೆ. ಆಯೋಗಗಳ ಅಧ್ಯಕ್ಷರ ನೇಮಕ ನೆನೆಗುದಿಗೆ ಬಿದ್ದಿರುವುದನ್ನು ಪ್ರಶ್ನಿಸಿ ಸದ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಘನ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಸರ್ಕಾರ ಬಂದಾಗಿನಿಂದ ಶೋಷಿತರ ದನಿಯಾಗಿ ಪರಿಶಿಷ್ಟ ಸಮುದಾಯಗಳ ರಕ್ಷಣೆಗೆ ಹಾಗೂ ಪರಿಶಿಷ್ಟ ಕಲ್ಯಾಣದ ಕುರಿತು ವರದಿ ನೀಡಬೇಕಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ನಿಂತ ನೀರಂತಾಗಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದಿದ್ದಾರೆ. ಪರಿಶಿಷ್ಟರ ಬಗ್ಗೆ ಮೊಸಳೆಗಣ್ಣೀರು ಸುರಿಸುವ ಸರ್ಕಾರದ ಅಸಲಿ ಮುಖವಾಡ ಈಗ ಬಯಲಾಗಿದೆ. ಪರಿಶಿಷ್ಟರ ಆಯೋಗಗಳಿಗೆ ಅಧ್ಯಕ್ಷರ ನೇಮಕವಾಗಿಲ್ಲದಿರುವ ವಿಷಯ ನ್ಯಾಯಾಲಯದ ಮೆಟ್ಟಿಲು ಹತ್ತುವ ಪರಿಸ್ಥಿತಿಯವರೆಗೂ ತಲುಪಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.

ನ್ಯಾಯಾಲಯದಿಂದಲೇ ಈ ಸರ್ಕಾರಕ್ಕೆ ಚಾಟಿ ಏಟು ಬೀಳದ ಹೊರತು ಪರಿಶಿಷ್ಟರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಇದೀಗ ಸಾಬೀತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಗ್ಯಾರಂಟಿ ಭಾಗ್ಯಗಳ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ ಸರ್ಕಾರ ಮಹಿಳೆಯರ ಮಾಂಗಲ್ಯ ಭಾಗ್ಯಕ್ಕೆ ಕುತ್ತು ಬಂದಿದ್ದರೂ ಕಣ್ಣು ಮುಚ್ಚಿ ಕುಳಿತಿದೆ. ಈ ನೆಲದ ಹೆಣ್ಣು ತನಗೆ ಯಾವ ಭಾಗ್ಯ ಕೊಡದಿದ್ದರೂ ಚಿಂತೆ ಇಲ್ಲ ಉಸಿರಿರುವ ತನಕ ಮಾಂಗಲ್ಯ ಭಾಗ್ಯ ಉಳಿಸು ಎಂದು ದೇವಾನುದೇವತೆಗಳಲ್ಲಿ ಪ್ರಾರ್ಥಿಸು ತ್ತಾಳೆ.

ಅನಾದಿಕಾಲ ದಿಂದಲೂ ತನ್ನ ಮಾಂಗಲ್ಯ ರಕ್ಷಣೆಗಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ನಿದರ್ಶನಗಳನ್ನು ಕೇಳಿದ್ದೇವೆ, ಪುರಾಣ ಪುಣ್ಯದ ಕಥೆಗಳಲ್ಲೂ ಹೆಣ್ಣಿನ ಮಾಂಗಲ್ಯ ಎಷ್ಟು ಪವಿತ್ರ ಎಂಬ ಉಲ್ಲೇಖವಿದೆ. ಸ್ವತಃ ಸೀತಾಮಾತೆ ತನ್ನ ಮಾಂಗಲ್ಯ ರಕ್ಷಣೆಗಾಗಿ ಭದ್ರಕಾಳಿಯ ಅವತಾರವೆತ್ತಿ ಶ್ರೀರಾಮನ ರಕ್ಷಣೆಗೆ ನಿಲ್ಲುತ್ತಾಳೆ. ಇಂತಹ ಪುಣ್ಯಭೂಮಿಯಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದ ಇಂದು ತನ್ನ ಮಾಂಗಲ್ಯ ಉಳಿಸಿಕೊಳ್ಳಲಾಗದ ಪರಿಸ್ಥಿತಿಗೆ ತಲುಪಿರುವ ಮಹಿಳೆಯರು ಮುಖ್ಯಮಂತ್ರಿಗಳಿಗೆ ಮಾಂಗಲ್ಯ ರವಾನಿಸುತ್ತಿರುವ ವರದಿ ಪರಿಸ್ಥಿತಿಯ ಗಂಭೀರತೆಯನ್ನು ಸಾಕ್ಷೀಕರಿಸುತ್ತಿದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ನಂತರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾಂಗಲ್ಯ ಉಳಿಸಿಕೊಳ್ಳ ಲಾರದ ಧಾರುಣ ಪರಿಸ್ಥಿತಿಯನ್ನು ತಿಳಿಸಲು ಮುಖ್ಯ ಮಂತ್ರಿಗಳಿಗೆ ಮಾಂಗಲ್ಯ ರವಾನಿಸಿರುವುದು ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಘಟನೆ ಯಾಗಿದೆ. ಮೈಕ್ರೋ ಫೈನಾನ್‌್ಸಗಳ ಹಾವಳಿಯಿಂದ ಜನರ ಆಕ್ರಂದನ ಮುಗಿಲು ಮುಟ್ಟಿದೆ, ಗ್ರಾಮಾಂತರ ಪ್ರದೇಶಗಳಲ್ಲಿ ಭೀಕರ ಬರದ ಪರಿಸ್ಥಿತಿ ಎದುರಾದಾಗ ಗುಳೆ ಹೋಗುತ್ತಿದ್ದ ಜನ ಇಂದು ಮೈಕ್ರೋ ಫೈನಾನ್ಸ್ ವ್ಯವಹಾರದ ಕಿರುಕುಳದಿಂದ ಗುಳೆ ಹೋಗುತ್ತಿದ್ದಾರೆ ಎಂದರೆ ಪರಿಸ್ಥಿತಿ ಎಷ್ಟು ಗಂಭೀರತೆಯ ಹಂತ ತಲುಪಿದೆ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ.

ಮೈಕ್ರೋ ಫೈನಾನ್ಸ್ ಗಳಿಂದ ಸಾಲ ತೆಗೆದುಕೊಂಡವರು ಒಂದು ಕಡೆ ಕಿರುಕುಳ ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ತಮ ಪರಿಶ್ರಮದಿಂದ ಕೂಡಿಟ್ಟ ಅಲ್ಪ ಹಣವನ್ನು ಕೆಲವು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಟ್ಟು ಅದನ್ನು ಕಳೆದುಕೊಳ್ಳುತ್ತಿದ್ದಾರೆ. ರಹದಾರಿ ಪಡೆದುಕೊಂಡಿರುವ ಹೆಸರಿನಲ್ಲಿ ಒಂದು ಕಡೆ ವಸೂಲಿ, ಇನ್ನೊಂದು ಕಡೆ ವಂಚನೆ ಇವೆರಡೂ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಬರೋಬ್ಬರಿ 7.80 ಲಕ್ಷ ದೂರು ದಾಖಲಾಗಿದ್ದರೂ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಅದರ ಆಡಳಿತ ವೈಫಲ್ಯವನ್ನು ಎತ್ತಿ ತೋರುತ್ತದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

RELATED ARTICLES

Latest News