ಬೆಂಗಳೂರು,ಜ.23– ಬಿಜೆಪಿಯಲ್ಲಿನ ಒಡಕಿನ ಲಾಭ ಪಡೆದು ಪ್ರಭಾವಿ ನಾಯಕರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಸ್ಟರ್ಪ್ಲಾನ್ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಗ್ರಾಮಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯುತ್ತಿರುವುದರಿಂದ ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿ ಕಾಂಗ್ರೆಸ್ನ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಡಿ.ಕೆ.ಶಿವಕುಮಾರ್ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಮತ್ತೊಂದು ಸುತ್ತಿನ ಆಪರೇಷನ್ ಹಸ್ತಕ್ಕೆ ಕೈ ಇಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದಾಗಿನಿಂದಲೂ ಡಿ.ಕೆ.ಶಿವಕುಮಾರ್ ಪಕ್ಷದ ಕಾರ್ಯಕರ್ತರನ್ನು ಸಬಲಗೊಳಿಸುವ ಜೊತೆಗೆ ಬೇರೆ ಪಕ್ಷಗಳಲ್ಲಿರುವ ಪ್ರಭಾವಿಗಳನ್ನು ಸೆಳೆದು ನಿರಂತರ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಅದರ ಭಾಗವಾಗಿ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.ಅನಂತರ ವಿಧಾನಸಭೆಯ ಚುನಾವಣಾ ಸಂದರ್ಭದಲ್ಲಿ ಹಲವು ನಾಯಕರು ಕಾಂಗ್ರೆಸ್ ಅಂಗಳಕ್ಕೆ ಜಿಗಿಯುವಂತಾಗಿತ್ತು. ಕೆಲವು ಸಂದರ್ಭಗಳಲ್ಲಿ ನಾಯಕರು ಬಂದು ಹೋಗುವುದು ಸಾಮಾನ್ಯವಾಗಿದೆ.
ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಕಾರ್ಯಾಚರಣೆಯನ್ನು ನಡೆಸುವುದರಿಂದ ಒಂದಿಷ್ಟು ಹವಾ ಸೃಷ್ಟಿಯಾಗುತ್ತಿದ್ದು, ಅದು ಕಾಂಗ್ರೆಸ್ಗೆ ಅನುಕೂಲವನ್ನುಂಟು ಮಾಡಿಕೊಟ್ಟಿದೆ.
ವಿಧಾನಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತಂದಿದ್ದರು. ಅದರ ಪರಿಣಾಮವಾಗಿ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ದಿಗ್ವಿಜಯ ಸಾಧಿಸಿತ್ತು.
ಈಗ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸವಾಲು ಕಾಂಗ್ರೆಸ್ ಮುಂದಿದೆ. ತಳಹಂತದಲ್ಲಿ ಪಕ್ಷಸಂಘಟನೆಯನ್ನು ಬಲಗೊಳಿಸುವುದು, ಕೇಡರ್ ಬೇಸ್ ಪಕ್ಷವನ್ನಾಗಿ ಪರಿವರ್ತಿಸಲು ಈ ಚುನಾವಣೆ ಬಹುಮುಖ್ಯ ಪಾತ್ರ ವಹಿಸುತ್ತದೆ.ಹೀಗಾಗಿ ಡಿ.ಕೆ.ಶಿವಕುಮಾರ್ ಮತ್ತೊಂದು ಸುತ್ತಿನ ಆಪರೇಷನ್ ಹಸ್ತಕ್ಕೆ ಕೈ ಹಾಕಿ ತಮೆಲ್ಲಾ ಶಕ್ತಿಯನ್ನೂ ಕ್ರೋಡೀಕರಿಸುತ್ತಿದ್ದಾರೆ.
ಪ್ರಸ್ತುತ ಬಿಜೆಪಿಯಲ್ಲಿ ಬಣ ರಾಜಕೀಯಗಳು ತೀವ್ರವಾಗಿವೆ. ಬಸನಗೌಡ ಪಾಟೀಲ್ ಯತ್ನಾಳ್ರಂತಹ ನಾಯಕರು ಸೈದ್ಧಾಂತಿಕವಾಗಿ ಕಾಂಗ್ರೆಸ್ಗೆ ಕಡುವಿರೋಧಿಗಳು. ಜೊತೆಗೆ ಡಿ.ಕೆ.ಶಿವಕುಮಾರ್ ಅವರ ವಿರುದ್ಧವೂ ವೈಯಕ್ತಿಕ ಸಂಘರ್ಷಕ್ಕೆ ಇಳಿದಿದ್ದಾರೆ.ಉಳಿದಂತೆ ಜನಾದರ್ನರೆಡ್ಡಿಯವರ ಜೊತೆ ಮುನಿಸಿಕೊಂಡು ಸಂಘರ್ಷಕ್ಕಿಳಿದಿರುವ ಶ್ರೀರಾಮಲು ಹಾಗೂ ಅದೇ ರೀತಿಯ ಮೃದು ಹಿಂದುತ್ವವಾದಿಗಳನ್ನು ಕಾಂಗ್ರೆಸ್ನತ್ತ ಸೆಳೆಯಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಮೂಲ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಅಧಿಕಾರ ನೀಡಲು ಸಾಧ್ಯವಾಗದಿದ್ದಾಗ ವಲಸಿಗ ನಾಯಕರಿಗೆ ಮಣೆ ಹಾಕುತ್ತಿರುವುದು ಎಷ್ಟು ಸರಿ ಎಂದು ಪಕ್ಷದ ಒಳವಲಯದಲ್ಲೇ ಆಕ್ಷೇಪಗಳು ಕೇಳಿಬರುತ್ತಿವೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಡಿ.ಕೆ.ಶಿವಕುಮಾರ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.