Monday, January 26, 2026
Homeರಾಜ್ಯನೆಲಹಾಳ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : ಮೂವರು ಟೆಕ್ಕಿಗಳ ದುರ್ಮರಣ

ನೆಲಹಾಳ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : ಮೂವರು ಟೆಕ್ಕಿಗಳ ದುರ್ಮರಣ

Terrible accident on National Highway near Nelahal: Three techies killed

ತುಮಕೂರು,ಜ.26- ಕಾರು ಮತ್ತು ಲಾರಿ ನಡುವೆ ರಾಷ್ಟ್ರೀಯ ಹೆದ್ದಾರಿ 48 ರ ನೆಲಹಾಳ್‌ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಟೆಕ್ಕಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೃತರನ್ನು ಅವಿತೇಜ್‌,ಅಬೀರ್‌ ಮತ್ತು ಸನುಕುಕ್ತಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ಸಾಫ್ಟ್ ವೇರ್‌ ಕಂಪನಿಯ ಉದ್ಯೋಗಿಗಳು. ಆರು ಮಂದಿ ಸ್ನೇಹಿತರು ಮಾರುತಿ ಎರಿಟಿಗಾ ಕಾರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗೋಕರ್ಣ, ಮುರುಡೇಶ್ವರ, ಉಡುಪಿ ಸೇರಿದಂತೆ ಹಲವೆಡೆ ಪ್ರವಾಸ ಮುಗಿಸಿಕೊಂಡು ವಾಪಸ್‌‍ ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಇಂದು ಬೆಳಿಗ್ಗೆ 6.30ರ ಸುಮಾರಿನಲ್ಲಿ ನೆಲಹಾಳ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬರುತ್ತಿದ್ದಾಗ ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಾರು ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ನೇಹಿತರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೋರಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಾರಿನೊಳಗೆ ಸಿಕ್ಕಿಕೊಂಡು ಮೂವರು ಗಾಯಗೊಂಡಿದ್ದು,ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಗಾಯಗೊಂಡಿರುವ ಸಂದೀಪ್‌,ಸಿದ್ದಾರ್ಥ್‌ ,ವಿರೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್‌ ಕೆ.ವಿ ಅವರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕೋರಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News