Saturday, January 25, 2025
Homeರಾಜಕೀಯ | Politicsಆಪ್ತಮಿತ್ರರೆಂತಿದ್ದ ರೆಡ್ಡಿ-ರಾಮುಲು ನಡುವೆ ಅಂಥದ್ದೇನಾಯ್ತು..?

ಆಪ್ತಮಿತ್ರರೆಂತಿದ್ದ ರೆಡ್ಡಿ-ರಾಮುಲು ನಡುವೆ ಅಂಥದ್ದೇನಾಯ್ತು..?

What happened between Reddy and Ramulu

ಬೆಂಗಳೂರು,ಜ.24– ಬಿಜೆಪಿಯಲ್ಲಿ ರಾಮ-ಲಕ್ಷ್ಮಣ ಎಂದೇ ಗುರುತಿಸಿಕೊಂಡಿದ್ದ ಶಾಸಕ ಜಿ.ಜನಾರ್ದನರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಮಧ್ಯದ ಅಸಮಾಧಾನ, ವೈಮನಸ್ಸು, ಅವರಿಬ್ಬರ ಬೆಂಬಲಿಗರು ಸೇರಿ ಸ್ಥಳೀಯ ಬಿಜೆಪಿಯಲ್ಲಿ ದಿಗಿಲು ಸೃಷ್ಟಿಯಾಗಿದೆ. ಮೂರು ದಶಕಗಳ ತಮ ಸ್ನೇಹದಿಂದಲೇ ರಾಷ್ಟ್ರ, ರಾಜ್ಯ ಮಟ್ಟದ ರಾಜಕೀಯದಲ್ಲಿ ಗಮನಸೆಳೆದಿದ್ದ ಈ ಜೋಡಿ ಗಾಲಿಗಳ ಬಂಡಿ ಒಗ್ಗಾಲಿಯಾಗಿದೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಆಗಿನ 9 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಮೊದಲ ಬಾರಿ ಅಧಿಕಾರಕ್ಕೆ ತರುವಲ್ಲಿ ಉಭಯ ಮುಖಂಡರು ಪ್ರಮುಖ ಪಾತ್ರವಹಿಸಿದ್ದರು.ಸದ್ಯ ಬಿಜೆಪಿಯಲ್ಲಿ ರಾಜ್ಯ, ಜಿಲ್ಲಾ, ಮಂಡಲ, ಬೂತ್‌ ಮಟ್ಟದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬಿರುಸಿನಿಂದ ಕೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಜಿ.ಜನಾರ್ದನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ನಡುವಿನ ಅಸಮಾಧಾನದ ಹೊಗೆ ಜಿಲ್ಲಾ ಬಿಜೆಪಿಯಲ್ಲಿ ತಲ್ಲಣ ಉಂಟು ಮಾಡುತ್ತಿದೆ.

ಜಿಲ್ಲೆಯಲ್ಲಿ ಉಭಯ ನಾಯಕರು ತಮದೇ ಆದ ಬೆಂಬಲಿಗರು, ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಇದೀಗ ಇವರಿಬ್ಬರಲ್ಲಿ ಯಾರ ಪರ ನಿಲ್ಲಬೇಕು ಎಂಬ ತ್ರಿಶಂಕು ಸ್ಥಿತಿ ಎದುರಾಗಿದೆ.
ಸಾಮಾಜಿಕ ಜಾಲತಾಣದಲ್ಲೂ ಉಭಯ ನಾಯಕರ ಬೆಂಬಲಿಗರು ಪರ-ವಿರೋಧ ಚರ್ಚೆಗಿಳಿದಿದ್ದಾರೆ. ವಾಲೀಕಿ ಸಮುದಾಯದ ಪ್ರಭಾವಿ ನಾಯಕ ಬಿ.ಶ್ರೀರಾಮುಲು ಪರ ಹಲವು ಬೆಂಬಲಿಗರು, ಸಮುದಾಯದ ಕೆಲವರು ಸಂದೇಶಗಳ ಮೂಲಕ ಆತಸ್ಥೈರ್ಯ ತುಂಬುವ, ಬೆಂಬಲಕ್ಕೆ ನಿಲ್ಲುವ ಪೋಸ್ಟ್‌ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೊಂದೆಡೆ ರೆಡ್ಡಿ ಬೆಂಬಲಿಗರು ಸಹ ಅವರ ಬೆನ್ನೆಗೆ ನಿಂತಿದ್ದಾರೆ.

ಚುನಾವಣೆ ಮೇಲೆ ಪರಿಣಾಮ:
ಮುಂದಿನ ಕೆಲವೇ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆ ಎದುರಾಗುವ ಹೊತ್ತಲ್ಲಿ ರೆಡ್ಡಿ-ರಾಮುಲು ಅವರ ನಡುವಿನ ಬಿನ್ನಾಭಿಪ್ರಾಯ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಲಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಾಗಿದ್ದು, ಆ ಸಮುದಾಯದ ಮುಖಂಡ ಶ್ರೀರಾಮುಲು ಮುನಿಸಿನಿಂದ ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದೆ ಎಂಬ ಚರ್ಚೆಯೂ ನಡೆದಿದೆ.

ವ್ಯಾವಹಾರಿಕವಾಗಿ, ರಾಜಕೀಯವಾಗಿ, ಉಭಯ ನಾಯಕರ ಬೆಂಬಲಿಗರ ಗುಂಪುಗಾರಿಕೆ, ಏಕಪಕ್ಷೀಯ ನಿರ್ಧಾರ, ಇತ್ತೀಚೆಗೆ ನಡೆದ ಸಂಡೂರು ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆ ಬೆಂಬಲದ ಬಗ್ಗೆ ಸೇರಿ ನಾನಾ ವಿಚಾರಗಳಿಂದಾಗಿ ರೆಡ್ಡಿ-ರಾಮುಲು ಮಧ್ಯೆ ವೈಮನಸ್ಸು ಮೂಡಿದೆ ಎಂದೇ ತಿಳಿಯಲಾಗಿದೆ.

ಸಂಡೂರು ಉಪಚುನಾವಣೆಯ ಸೋಲಿನ ಕುರಿತ ಚರ್ಚೆಯಿಂದ ಆರಂಭವಾದ ರೆಡ್ಡಿ ಹಾಗೂ ರಾಮುಲು ಅವರ ನಡುವಿನ ಅಸಮಾಧಾನ ಈಗ ವೈಯಕ್ತಿಕ ವಿಚಾರಗಳತ್ತ ತಿರುಗಿದೆ. ನಾಲ್ಕು ದಶಕಗಳಿಂದ ಅಣ್ಣತಮಂದಿರಂತಿದ್ದ ಇವರು, ಇದೀಗ ತಮ ಜೀವನದಲ್ಲಿ ಹಿಂದೆ ನಡೆದ ಘಟನೆ, ಪ್ರಕರಣಗಳು, ಸನ್ನಿವೇಶಗಳ ಬಹಿರಂಗಕ್ಕೆ ಸವಾಲೊಡ್ಡುವ ಹಂತ ತಲುಪಿದ್ದಾರೆ. ರಾಜಕೀಯವಾಗಿ ಅಸ್ತಿತ್ವ ಸಾಧಿಸಲು ಉಭಯ ನಾಯಕರು ವೈಯಕ್ತಿಕವಾಗಿ ಒಬ್ಬರ ಮೇಲೆ ಒಬ್ಬರು ಕೆಸರೆರಚಾಟಕ್ಕೆ ಸಜ್ಜಾಗಿದ್ದು ಬೆಂಬಲಿಗರು ಹಾಗೂ ಕಾರ್ಯಕರ್ತರನ್ನು ದಂಗುಬಡಿಸಿದೆ.

RELATED ARTICLES

Latest News