ಬೆಂಗಳೂರು, ಜ.24- ವಸೂಲಿ ನೆಪದಲ್ಲಿ ಸಾಲಗಾರರನ್ನು ಕಾಡಿ ಕಂಗೆಡಿಸಿ, ಪ್ರಾಣ ಕಂಠಕವಾಗಿ ಪರಿಣಮಿಸುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಕಾನೂನು ತಿದ್ದುಪಡಿಗೆ ತುರ್ತಾಗಿ ಸುಗ್ರೀವಾಜ್ಞೆ ರೂಪಿಸಲು ಮುಂದಾಗಿದೆ. ಇಂದು ನಡೆಯುತ್ತಿರುವ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಪ್ರಸ್ತಾಪವಾಗಿದೆ.
ಜನವರಿ 30ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕರಡು ಮಸೂದೆಯನ್ನು ಮಂಡಿಸಿ ಕೆಲ ತಿದ್ದುಪಡಿಗಳಿಗೆ ಸುಗ್ರೀವಾಜ್ಞೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾನೂನು ಇಲಾಖೆ ಕರಡು ಮಸೂದೆ ರಚನೆಗೆ ಕೆಲ ಸಭೆಗಳನ್ನು ನಡೆಸಿ ಚರ್ಚಿಸಿದೆ.
ಹಣಕಾಸು ವಿಷಯ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಲಿದ್ದು, ಮೈಕ್ರೋ ಫೈನಾನ್ಸ್ ಕಂಪೆನಿಗಳು ಆರ್‌ಬಿಐ ಮತ್ತು ಕೇಂದ್ರ ಹಣಕಾಸು ಇಲಾಖೆಯ ಕಾರ್ಪೋರೇಟ್ ವ್ಯವಹಾರಗಳ ಇಲಾಖೆಯಲ್ಲಿ ನೋಂದಣಿಯಾಗಿರುತ್ತವೆ. ಅವುಗಳ ಮೇಲೆ ನೇರವಾಗಿ ಕಡಿವಾಣ ಹಾಕಲು ರಾಜ್ಯ ಸರ್ಕಾರಕ್ಕೆ ಅವಕಾಶ ಇಲ್ಲ ಎಂಬ ವಾದ ನಡೆಯುತ್ತಿದೆ.
ಸಾಲ ವಸೂಲಿಯ ವೇಳೆ ಅನುಸರಿಸಬೇಕಾದ ಪ್ರಮಾಣಿಕ ಕಾರ್ಯಸೂಚಿಗಳನ್ನು ಉಲ್ಲಂಘಿಸಲಾಗುತ್ತಿದ್ದು, ಇದು ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದೆ. ಕೆಲವು ಕಂಪೆನಿಗಳ ವಸೂಲಿ ಏಜೆಂಟ್‌ಗಳು ಮಧ್ಯ ರಾತ್ರಿ ಸಾಲ ಪಡೆದವರ ಮನೆ ಬಾಗಿಲು ಬಡಿಯುತ್ತಿದ್ದಾರೆ. ವಸೂಲಿಗಾರರಿಗೆ ಅಂಜಿ ಸಾಲಗಾರರು ಮನೆಯ ಮೂಲೆಗಳಲ್ಲಿ ಅಡಗಿ ಕುಳಿತಿರುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಲೈವ್ ಮಾಡಿ ಮರ್ಯಾದೆ ಕಳೆಯುತ್ತಿದ್ದಾರೆ.
ಇನ್ನೂ ಕೆಲವು ಕಡೆ ಹಗಲಿನ ವೇಳೆ ಮನೆ ಬಾಗಿಲಿಗೆ ಹೋಗಿ ಜೋರು ಗಲಾಟೆ ಮಾಡಿ ನೆರೆಹೊರೆಯವರ ಮುಂದೆ ಮರ್ಯಾದೆ ತೆಗೆಯಲಾಗುತ್ತಿದೆ. ಮದುವೆ ಹಾಗೂ ಇತರ ಸಂದರ್ಭಗಳಲ್ಲೂ ಮನೆಗೆ ನುಗ್ಗಿ ಸಾಲ ವಸೂಲಿಗೆ ಯತ್ನಿಸಿರುವುದು ಕಂಡುಬಂದಿದೆ.
ಸಬ್ಸಿಡಿ ಸಾಲ ಎಂದು ಆಸೆ ಹುಟ್ಟಿಸಿ ಹಲವು ಕಡೆ ಮೇಲೆ ಬಿದ್ದು ಹಣ ನೀಡಿದ ಕಂಪನಿಗಳು ವಸೂಲಿಯ ವೇಳೆ ಯಮಕಿಂಕರರಂತೆ ಕಾಡುತ್ತಿದ್ದಾರೆ ಎಂಬ ದೂರುಗಳಿವೆ. ಅದರಲ್ಲೂ ರಾಯಚೂರು, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ಚಿಕ್ಕಮಂಗಳೂರು, ಹಾಸನ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೈಕ್ರೊ ಫೈನಾನ್‌್ಸ ಸಾಲಗಾರರ ಹಾವಳಿ ತೀವ್ರವಾಗಿದ್ದು, ಹಲವಾರು ಮಂದಿ ಆತಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಈ ರೀತಿಯ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವರದಿಯಾಗಿವೆ. ಸಾಲ ಪಡೆದವರು ತಪ್ಪಿಸಿಕೊಳ್ಳುತ್ತಿರುವುದನ್ನು ವಿಡಿಯೋ ಮಾಡಿ ಹಂಚಿಕೊಳ್ಳುವ ಮೂಲಕ ಮೈಕ್ರೋ ಫೈನಾನ್ಸ್ ಕಂಪನಿಗಳು ವಿಕೃತಿ ಮೆರೆದಿವೆ.
ಗ್ರಾಮೀಣ ಭಾಗದಲ್ಲಿರುವ ಮಹಿಳೆ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರನ್ನು ಒಗ್ಗೂಡಿಸಿ ರಿಯಾಯ್ತಿ ವೈಯಕ್ತಿಕ ಸಾಲಗಳನ್ನು ನೀಡಿ ನಂತರ ಕಂತು ಪಾವತಿ ವಿಳಂಬವನ್ನೇ ನೆಪ ಮಾಡಿಕೊಂಡು ಬಡ್ಡಿ, ಸುಸ್ತಿ ಬಡ್ಡಿ, ಚಕ್ರ ಬಡ್ಡಿ ಹಾಕಿ ಅಸಲು ಮೊತ್ತಕ್ಕಿಂತಲೂ ನಾಲ್ಕುಪಟ್ಟು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ.
ಪೊಲೀಸರಿಗೆ ಈ ವಿಚಾರವಾಗಿ ದೂರು ನೀಡಲು ಹೋದರೆ ಪಡೆದ ಸಾಲವನ್ನು ತೀರಿಸಿ, ಸಾಲ ಪಡೆಯುವಾಗ ಪರಿಜ್ಞಾನ ಇರಲಿಲ್ಲವೇ ಎಂಬ ಸಬೂಬುಗಳು ಕೇಳಿಬರುತ್ತಿವೆ. ಇದರಿಂದ ಅಸಹಾಯಕರಾಗಿ ಹಲವಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಮರ್ಯಾದೆಗೆ ಅಂಜಿ, ಆತಹತ್ಯೆಗೆ ಯತ್ನಿಸಿ ಅನಾರೋಗ್ಯ ಪೀಡಿತರಾಗಿದ್ದಾರೆ.
ಸಾಲ ಕೊಟ್ಟ ನೆಪದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ನೀಡುತ್ತಿರುವ ಕಿರುಕುಳ ಜನಸಾಮಾನ್ಯರನ್ನು ಕಂಗೆಡಿಸಿದೆ. ರಾಜ್ಯ ಸರ್ಕಾರ, ರಾಷ್ಟ್ರೀಯ ಬ್ಯಾಂಕ್ ಮತ್ತು ಸಹಕಾರ ಸಂಘಗಳ ಸಾಲ ವಸೂಲಾತಿ ಪ್ರಕ್ರಿಯೆಗಳ ಮೇಲೆ ತೀವ್ರ ನಿಗಾ ವಹಿಸಿತ್ತು.
ಇತ್ತ ಮೈಕ್ರೋ ಫೈನಾನ್ಸ್ ಕಂಪನಿಗಳು ಏಜೆನ್ಸಿಗಳ ಮೂಲಕ ಭೀಕರ ಹಾವಳಿಯನ್ನು ಸೃಷ್ಟಿಸಿವೆ. ಹೀಗಾಗಿ ಸರಣಿ ಅನಾಹುತಗಳು ವರದಿಯಾಗಿವೆ. ಕೊನೆಗೂ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮೈಕ್ರೊ ಫೈನಾನ್ಸ್ ಕಂಪನಿಗಳನ್ನು ನಿರ್ಬಂಧಿಸುವ ಪ್ರಯತ್ನಕ್ಕೆ ಮುಂದಾಗಿದೆ. ಅದಕ್ಕೂ ಮುನ್ನ ಸಾಲ ವಸೂಲಾತಿ ಹೆಸರಿನಲ್ಲಿ ನಿಯಮ ಬಾಹಿರವಾಗಿ ಕಿರುಕುಳ ನೀಡಿದರೆ ಅಂಥವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲು ಚಿಂತನೆ ನಡೆಸಿದೆ.
ಹೊಸ ವರ್ಷದ ಅಧಿವೇಶನಕ್ಕೆ ಇನ್ನೂ ದಿನಾಂಕ ನಿಗದಿಯಾಗದೆ ಇರುವುದರಿಂದಾಗಿ ತುರ್ತಾಗಿ ಈ ತಿಂಗಳಿನಲ್ಲೇ ಸುಗ್ರೀವಾಜ್ಞೆಯ ಕರಡು ಮಸೂದೆಯನ್ನು ಸಂಪುಟದಲ್ಲಿ ಮಂಡಿಸಿ ಅಂಗೀಕಾರ ಪಡೆದು ರಾಜ್ಯಪಾಲರಿಗೆ ರವಾನಿಸುವ ತಯಾರಿಗಳಾಗಿವೆ.