Monday, January 26, 2026
Homeರಾಜ್ಯನಾನಾ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ 400 ಕೋಟಿ ದರೋಡೆ ಪ್ರಕರಣ

ನಾನಾ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ 400 ಕೋಟಿ ದರೋಡೆ ಪ್ರಕರಣ

400 crore robbery case raises various doubts

ಬೆಂಗಳೂರು, ಜ.26- ಬೆಳಗಾವಿಯ ಖಾನಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ಹಣ ದರೋಡೆ ಪ್ರಕರಣ ನಾನಾ ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಗೋವಾದಿಂದ ಮಹಾರಾಷ್ಟ್ರಕ್ಕೆ ಎರಡು ಕಂಟೈನರ್‌ಗಳಲ್ಲಿ ಸಾಗಿಸಲಾಗುತ್ತಿದ್ದ 400 ಕೋಟಿ ರೂ. ಹಣ ನಿಜವಾಗಿಯೂ ದರೋಡೆಯಾಗಿದೆಯೇ ಅಥವಾ ಹಣ ಸಾಗಿಸುತ್ತಿದ್ದ ವ್ಯಕ್ತಿ ಮಾಲೀಕರ ದಾರಿ ತಪ್ಪಿಸಲು ದರೋಡೆ ನಾಟಕವಾಡಿರಬಹುದೇ ಎಂಬ ಅನುಮಾನ ಪೊಲೀಸರನ್ನು ಕಾಡತೊಡಗಿದೆ.

ಅದರಲ್ಲೂ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವ್ಯಾಪ್ತಿಯಲ್ಲಿರುವ ಖಾನಾಪುರ ಠಾಣಾ ವ್ಯಾಪ್ತಿಯ ಚೋರ್ಲಾ ಘಾಟ್‌ ಬಳಿ 400 ಕೋಟಿ ರೂ.ಗಳ ದರೋಡೆ ಪ್ರಕರಣ ಸೃಷ್ಟಿಯಾಗಿರುವುದು ಹಲವಾರು ಅಂತೆ ಕಂತೆಗಳಿಗೆ ಕಾರಣವಾಗಿದೆ.

ಒಂದು ವೇಳೆ ದರೋಡೆ ನಡೆದಿದ್ದೆ ಆದರೆ, ಅಷ್ಟೊಂದು ಹಣ ಸಾಗಿಸುತ್ತಿದ್ದು ಎಲ್ಲಿಗೆ ಎಂಬ ಅನುಮಾನ ಮೂಡತೊಡಗಿದೆ. ಮೂಲಗಳ ಪ್ರಕಾರ ಗೋವಾದಿಂದ ಎರಡು ಕಂಟೈನರ್‌ಗಳಲ್ಲಿ 400 ಕೋಟಿ ರೂ. ಹಣವನ್ನು ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದ್ದರೂ ಅದಿನ್ನು ಖಚಿತಪಟ್ಟಿಲ್ಲ.

ಗುಜರಾತ್‌ನಿಂದ 400 ಕೋಟಿ ಹಣವನ್ನು ತರಿಸಿಕೊಂಡು ಅದನ್ನು ಗೋವಾ ಮೂಲಕ ಮಹಾರಾಷ್ಟ್ರದಲ್ಲಿ ಇತ್ತಿಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲಿ ಬಳಕೆ ಮಾಡಿಕೊಳ್ಳಲು ಸಾಗಿಸಲಾಗುತ್ತಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಮತ್ತೊಂದು ಕೋನದಲ್ಲಿ ನೋಡುವುದಾದರೆ ಮುಂಬರುವ ದಿನಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪಾಂಡಿಚೇರಿ ಚುನಾವಣೆಯಲ್ಲಿ ಬಳಕೆ ಮಾಡಲು ಸಾಗಿಸಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಆದರೆ, ಬಲ್ಲ ಮೂಲಗಳು ದೇಶದಲ್ಲಿ ನಿಷೇಧಗೊಂಡಿರುವ ಎರಡು ಸಾವಿರ ನೋಟುಗಳನ್ನು ಬದಲಾವಣೆ ಮಾಡಲು 400 ಕೋಟಿ ರೂ. ಹಣವನ್ನು ಅಕ್ರಮವಾಗಿ ತಿರುಪತಿಗೆ ಸಾಗಿಸಿರುವ ಸಾಧ್ಯತೆಗಳಿರಬಹುದು ಎಂದು ಅಂದಾಜಿಸಿವೆ.

ತೀವ್ರಗೊಂಡ ಶೋಧ; ಕಂಟೈನರ್‌ಗಳಲ್ಲಿ ಸಾಗಿಸಲಾಗುತ್ತಿದ್ದ 400 ಕೋಟಿ ರೂ. ಹಣ ದರೋಡೆ ಪ್ರಕರಣದ ಬೆನ್ನು ಬಿದ್ದಿರುವ ಮಹಾರಾಷ್ಟ್ರ ಪೊಲೀಸರು ವಿವಿಧ ಕೋನಗಳಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಪೊಲೀಸರ ಕಾರ್ಯಚರಣೆಗೆ ರಾಜ್ಯದ ಕೆಲ ಪೊಲೀಸರು ಸಾಥ್‌ ನೀಡುತ್ತಿದ್ದಾರೆ. ಪ್ರಕರಣವನ್ನು ವಿವಿಧ ಕೋನಗಳಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಈಗಾಗಲೇ ಮಹಾರಾಷ್ಟ್ರ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಅದರಲ್ಲೂ ಪ್ರಕರಣದ ಕಿಂಗ್‌ಪಿನ್‌ ಎನ್ನಲಾದ ಕಿಶೋರ್‌ ಸೇಠ್‌ ಎಂಬಾತನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಆತ ನೀಡಿರುವ ಕೆಲ ಮಾಹಿತಿ ಪ್ರಕಾರ ವಿಚಾರಣೆ ನಡೆಸಲಾಗುತ್ತಿದೆ.

ದರೋಡೆ ನಡೆದ ಪ್ರದೇಶ ಮೂರು ರಾಜ್ಯಗಳ ಗಡಿಯಲ್ಲಿ ಬರುವುದರಿಂದ ಅಲ್ಲಿ ಯಾವುದೇ ಮೊಬೈಲ್‌ ನೆಟ್‌ವರ್ಕ್‌ ಸಿಗದೆ ಇರುವುದನ್ನು ನೋಡಿಕೊಂಡೇ ದರೋಡೆ ನಡೆಸಿರುವುದರ ಹಿಂದೆ ರಾಜಕೀಯ ಷಡ್ಯಂತ್ರವೂ ಇರುವ ಸಾಧ್ಯತೆಗಳಿವೆ ಎಂದು ಪೊಲೀಸ್‌‍ ಉನ್ನತ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ.

ಒಟ್ಟಾರೆ, 400 ಕೋಟಿ ರೂ.ಗಳ ದರೋಡೆ ನಡೆದಿದೆಯೇ ಅಥವಾ ದರೋಡೆ ನಾಟಕದ ಮೂಲಕ 400 ಕೋಟಿ ಗುಳುಂ ಮಾಡುವ ಹುನ್ನಾರವಿದೆಯೋ ಅಥವಾ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಈ ದರೋಡೆ ಪ್ರಕರಣದ ಹಿಂದೆ ದೇಶದ ಘಟಾನುಘಟಿ ರಾಜಕಾರಣಿಗಳ ಕೈವಾಡವಿದೆಯೋ ಇಲ್ಲವೋ ಎನ್ನುವುದು ಪೊಲೀಸರ ತನಿಖೆ ನಂತರವಷ್ಟೇ ಬಹಿರಂಗಗೊಳ್ಳಬೇಕಿದೆ.

RELATED ARTICLES

Latest News