ಬೆಂಗಳೂರು,ಜ.24- ಮೈಕ್ರೋ ಫೈನಾನ್ಸ್ ಹಾವಳಿಯಿಂದ ಸರಣಿ ದುರ್ಘಟನೆಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸಭೆ ನಡೆಸಲಿದ್ದಾರೆ. ಗೃಹ ಇಲಾಖೆ ಹಾಗೂ ಹಣಕಾಸು ಇಲಾಖೆಗಳ ಜೊತೆಯಲ್ಲಿ ಅನೌಪಚಾರಿಕವಾಗಿ ಈ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ. ಬೆಳಗಾವಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಸಾಲಗಾರರು ಆತಹತ್ಯೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ.
ಮೈಕ್ರೋ ಫೈನಾನ್ಸ್ ಸಾಲ ನೀಡಿದವರ ಕಿರುಕುಳ ಈಗ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಟೀಕಿಸುತ್ತಿವೆ.
ಇದಕ್ಕೆ ಸಮರ್ಥನೆ ನೀಡುತ್ತಿರುವ ಸಂಪುಟ ಸಚಿವರು ಜನಸಾಮಾನ್ಯರು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳ ಜೊತೆ ಹಣಕಾಸಿನ ವ್ಯವಹಾರ ಮಾಡಬೇಕು. ಹೆಚ್ಚು ದಾಖಲೆಗಳನ್ನು ಕೇಳುವುದಿಲ್ಲ ಎಂಬ ಕಾರಣಕ್ಕಾಗಿ ಖಾಸಗಿ ಮೈಕ್ರೋಫೈನಾನ್ಸ್ ಕಂಪನಿಗಳ ಮೊರೆ ಹೋಗಬಾರದೆಂದು ಕೃಷಿ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.
ಕಂಪನಿಗಳು ಬಡ್ಡಿ, ಸುಸ್ತಿ ಬಡ್ಡಿ ಹಾಕಿ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಮತ್ತು ಸಾಲ ವಸೂಲಿಗೆ ನಿಯಮ ಬಾಹಿರವಾಗಿ ಕಿರುಕುಳ ನೀಡುತ್ತಿರುವುದು ಕಂಡುಬಂದರೆ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ. ಈ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಗೃಹಸಚಿವ ಡಾ.ಜಿ.ಪರಮೇಶ್ವರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಿರುಕುಳದ ಬಗ್ಗೆ ದೂರುಗಳು ಬಂದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಸಾರ್ವಜನಿಕರು ಎಚ್ಚರದಿಂದಿರಬೇಕು. ಖಾಸಗಿ ಕಂಪನಿಗಳಿಂದ ಸಾಲ ಪಡೆಯುವ ಮುನ್ನ ಯೋಚಿಸಬೇಕು ಎಂದು ಹೇಳಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಸಾಕಷ್ಟು ದೂರುಗಳು ಬಂದಿವೆ. ಈ ಕುರಿತು ಶೀಘ್ರವೇ ಕಠಿಣ ಕಾನೂನು ರೂಪಿಸುವುದಾಗಿ ತಿಳಿಸಿದ್ದಾರೆ