ಬೆಂಗಳೂರು,ಜ.26- ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿಂದು ಆಯೋಜಿಸಿದ್ದ 77 ನೇ ಗಣರಾಜ್ಯೋತ್ಸವ ಸಮಾರಂಭದ ಅಂಗವಾಗಿ ನಡೆದ ಸಂಕ್ರಾಂತಿ ಸಂಭ್ರಮ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.
ರಾಜ್ಯಪಾಲರ ಸಂದೇಶದ ನಂತರ ನಾಡಗೀತೆ, ರೈತಗೀತೆಗಳನ್ನು ಸುಶ್ರಾವ್ಯವಾಗಿ ಹಾಡಲಾಯಿತು. ಬಳಿಕ ಹೇರೋಹಳ್ಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 650 ಮಕ್ಕಳು ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ವರ್ಣರಂಜಿತ ವೇಷಭೂಷಣದೊಂದಿಗೆ ಮೈದಾನಕ್ಕಿಳಿದ ಮಕ್ಕಳು ಕಬ್ಬು, ಚಕ್ರ, ಕುಂಟೆಬಿಲ್ಲೆ ಸೇರಿದಂತೆ ಗ್ರಾಮೀಣ ಭಾಗದ ಸಾಂಪ್ರದಾಯಿಕ ಆಟಗಳ ನೆನಪನ್ನು ಮಾಡಿಕೊಟ್ಟರು. ಗ್ರಾಮೀಣ ಬದುಕನ್ನು ಅನಾವರಣಗೊಳಿಸುವ ಹುಲ್ಲಿನ ಹೊರೆ, ಹುಲ್ಲಿನ ಮನೆ, ಸೌದೆಯ ಹೊರೆ, ಕಂಕುಳಲ್ಲಿ ಬಿಂದಿಗೆ ಹೀಗೆ ದೈನಂದಿನ ಗ್ರಾಮೀಣ ಬದುಕಿನ ಪರಿಚಯವಾಗಯಿತು. ಆಕರ್ಷಕ ಗಾಳಿಪಟಗಳು ಹಾರಾಡಿದವು.
ಮಕರ ಸಂಕ್ರಾಂತಿ ಹಬ್ಬವು ವಿವಿಧ ಧರ್ಮಗಳ ನಡುವಿನ ವೈಷಮ್ಯಗಳನ್ನು ಮರೆತು ಹೊಸ ಸ್ನೇಹ ಮತ್ತು ಸಹಬಾಳ್ವೆಯನ್ನು ಬೆಳೆಸುವ ಸಂದೇಶ ನೀಡುತ್ತದೆ. ಅದರಂತೆ ಶಾಲಾ ಮಕ್ಕಳು ಸಂಕ್ರಾಂತಿ ಸುಗ್ಗಿಯ ಸೊಬಗನ್ನು ತಂದುಕೊಟ್ಟರು.






























ಬಾಗಲಗುಂಟೆ ಸರ್ಕಾರಿ ಪ್ರೌಢಶಾಲೆಯ 750 ಮಕ್ಕಳು ನಡೆಸಿಕೊಟ್ಟ ಭಾರತದ ಏಕೀಕರಣ ಮತ್ತು ನವಭಾರತ ಕಾರ್ಯಕ್ರಮವು ಭಾರತದ ಏಕೀಕರಣದ ನೆನಪನ್ನು ತಂದುಕೊಟ್ಟಿತು. ಮಹಾತಗಾಂಧೀಜಿ ಸೇರಿದಂತೆ ಭಾರತದ ಏಕತೆಗೆ ಸಂಬಂಧಿಸಿದ ಮಹನೀಯರ ಭಾವಚಿತ್ರ ಹಿಡಿದು ಮೈದಾನದಲ್ಲಿ ತಮ ಕಲಾಪ್ರದರ್ಶನ ನೀಡಿದರು. ವಿವಿಧ ವೇಷಭೂಷಣಗಳೊಂದಿಗೆ ನಡೆಸಿಕೊಟ್ಟ ಕಾರ್ಯಕ್ರಮ ಸ್ವಾತಂತ್ರ್ಯ ಹೋರಾಟದ ನಂತರ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗಿದ್ದು ಹಾಗೂ ನವಭಾರತದ ಅನಾವರಣ ಮಾಡಿದ್ದಲ್ಲದೆ ರಾಜ್ಯಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಬೆಳಕು ಚೆಲ್ಲಲಾಯಿತು.
ರಾಜ್ಯ ಪೊಲೀಸ್ ವತಿಯಿಂದ ನಡೆಸಿಕೊಟ್ಟ ಸಾಮೂಹಿಕ ವಾದ್ಯಮೇಳವು ಸುಶ್ರಾವ್ಯವಾಗಿತ್ತು. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಜೋಗದ ಸಿರಿ ಬೆಳಕಿನಲ್ಲಿ, ಲೋಲಿತ ಟ್ಯಾಂಗೋ, ರಘುಪತಿ ರಾಘವ ರಾಜಾರಾಂ, ಬ್ಯಾಗ್‌ಪೈಪ್ ಬ್ಯಾಂಡ್ ಶೋ, ಸಾರೆ ಜಾಹಾ ಸೇ ಅಚ್ಚ ಗೀತೆಗಳನ್ನು ವಿವಿಧ ವಾದ್ಯತಂಡಗಳು ನುಡಿಸಿದವು.
ನಂತರ ರಾಜ್ಯಪಾಲರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಐಜಿ ಮತ್ತು ಡಿಜಿಪಿ ಸಲೀಂ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರರಾವ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ನಗರದ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಸಮಾರಂಭದ ಆರಂಭದಲ್ಲಿ ರಾಜ್ಯಪಾಲರು ತೆರೆದ ಜೀಪ್‌ನಲ್ಲಿ ಪೆರೇಡ್ ವೀಕ್ಷಣೆ ಮಾಡಿ ಗೌರವರಕ್ಷೆ ಸ್ವೀಕಾರ ಮಾಡಿದರು.
ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಶಾಲಾ ಮಕ್ಕಳು, ಗೃಹರಕ್ಷಕ ದಳ, ನಾಗರಿಕ ಸೇನೆ, ವಾಯುಸೇನೆ, ಸಿಆರ್‌ಪಿಎಫ್, ಎನ್‌ಸಿಸಿ, ಕೆಎಸ್‌ಆರ್‌ಪಿ, ಸಿಎಆರ್ ಸೇರಿದಂತೆ ವಿವಿಧ ತಂಡಗಳು ಆಕರ್ಷಕ ಕವಾಯತಿನ ಪಥಸಂಚಲನವನ್ನು ನಡೆಸಿಕೊಟ್ಟವು.
ಬಂಧಿಗಳು ತಯಾರಿಸಿದ ತಿಂಡಿ ವಿತರಣೆ :
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಬಂಧಿಗಳೇ ತಯಾರಿಸಿದ ತಿಂಡಿಯನ್ನು ಸಮಾರಂಭಕ್ಕೆ ಆಗಮಿಸಿದ ಗಣ್ಯರು ಹಾಗೂ ಪ್ರೇಕ್ಷಕರಿಗೆ ವಿತರಿಸಲಾಯಿತು. ಬಂಧಿಗಳು ತಯಾರಿಸಿದ ತಿಂಡಿಯ ಪಟ್ಟಣದ ಮೇಲೆ ನವ ಸಂಕಲ್ಪ ನವ ಜೀವನಕ್ಕೆ ಒಂದು ಅವಕಾಶ ಎಂದು ಮುದ್ರಿಸಲಾಗಿದೆ.ಎಚ್‌ಸಿಎಲ್ ಪ್ರತಿಷ್ಠಾನದಿಂದ ತಿಂಡಿ ತಯಾರಿಕೆ ಬಗ್ಗೆ ತರಬೇತಿ ನೀಡಲಾಗಿದೆ.
