ಬೆಂಗಳೂರು,ಜ.25– ಬಾಂಗ್ಲಾ ಮಹಿಳೆಯ ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.ಎರಡು ತಂಡ ಹೊರರಾಜ್ಯಗಳಾದ ಪಶ್ಚಿಮಬಂಗಾಳ ಹಾಗೂ ಉತ್ತರ ಪ್ರದೇಶಕ್ಕೆ ಹೋಗಿ ಶೋಧ ಕಾರ್ಯ ಕೈಗೊಂಡರೆ, ಒಂದು ತಂಡ ನಗರದಲ್ಲಿ ಕಾರ್ಯಾಚರಣೆ ಕೈಗೊಂಡಿದೆ.
ಕೃತ್ಯ ನಡೆದ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳ ಪುಟೇಜ್ಗಳನ್ನು ಸಂಗ್ರಹಿಸಿ ಅದರಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಕೆಲವು ಶಂಕಿತರನ್ನು ಕರೆತಂದು ವಿಚಾರಣೆ ನಡೆಸಿದ್ದು, ಇದುವರೆಗೂ ಆರೋಪಿಗಳ ಸುಳಿವು ಸಿಕ್ಕಿಲ್ಲ.ಬಾಂಗ್ಲಾ ಮೂಲದ ಮಹಿಳೆ ನಾಜಾ ಅವರ ಪತಿ ಹಾಗೂ ಸಹೋದರ ವಿಚಾರಣೆ ವೇಳೆ ಅವರುಗಳು ನೀಡಿದ ಮಾಹಿತಿ ಆಧರಿಸಿ ರಾಮಮುರ್ತಿನಗರ ಠಾಣೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಫ್ಲಾಟ್ವೊಂದರಲ್ಲಿ ಮನೆಗೆಲಸ ಮಾಡುತ್ತಿದ್ದ ಈ ಮಹಿಳೆ ಮೇಲೆ ದುರುಳರು ಅತ್ಯಾಚಾರವೆಸಗಿ, ಕೊಲೆ ಮಾಡಿರುವುದು ವಿಷಾದಕರ.ಮೊನ್ನೆ ಮಧ್ಯಾಹ್ನ ಮನೆಗೆಲಸಕ್ಕೆ ಹೋಗಿದ್ದ ಪತ್ನಿ ಮನೆಗೆ ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ನಾಜಾ ಅವರ ಪತಿ ಸುಮನ್ ಅವರು ಅಂದು ಸಂಜೆ ಆತಂಕಕ್ಕೀಡಾಗಿ ರಾತ್ರಿ ರಾಮಮುರ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಡವಾಗಿ ಮನೆಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಮನೆಯವರಿಗೆ ಬೆಳಗಾಗುವಷ್ಟರಲ್ಲಿ ಈ ಘಟನೆಯಿಂದ ಆಘಾತ ಉಂಟಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅಲ್ಲದೆ ಘಟನಾ ಸ್ಥಳದಲ್ಲಿ ದೊರೆತಿರುವ ಕೆಲವು ವಸ್ತುಗಳನ್ನು ಬೆರಳಚ್ಚು ತಜ್ಞರು ಪಡೆದು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ.
ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ನಾಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ನೀಡಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ.