ಬೆಂಗಳೂರು,ಜ.25- ರಸ್ತೆಯಲ್ಲಿ ಬಿದ್ದಿದ್ದ ಕೇಬಲ್ ವೈರ್ ಚಲಿಸುತ್ತಿದ್ದ ಸ್ಕೂಟರ್ಗೆ ಸುತ್ತಿಕೊಂಡ ಪರಿಣಾಮ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಟೆಕ್ಕಿ ಮೇಲೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎಚ್ಎಎಲ್ ಹಳೆ ಏರ್ಪೋರ್ಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೊಮನಹಳ್ಳಿಯ ನಿವಾಸಿ ರೋಹಿತ್ ಆರ್ ಪಾಟೀಲ್ (23) ಮೃತಪಟ್ಟ ಸಾಫ್‌್ಟವೇರ್ ಎಂಜಿನಿಯರ್.ನಿನ್ನೆ ಸಂಜೆ 6.30ರ ಸುಮಾರಿನಲ್ಲಿ ರೋಹಿತ್ರವರು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಐಟಿಪಿಎಲ್ ರಸ್ತೆ, ರಾಮೇಶ್ವರ ಕೆಫೆ ಸಮೀಪದ ಪಾಸ್ಪೋರ್ಟ್ ಕಚೇರಿ ಕಾಂಪೌಂಡ್ ಬಳಿ ಕೇಬಲ್ ವೈರ್ ಅವರ ಸ್ಕೂಟರ್ಗೆ ಸುತ್ತಿಕೊಂಡಿದೆ.
ಇದು ರೋಹಿತ್ ಅವರ ಗಮನಕ್ಕೆ ಬಾರದೆ ಸ್ಕೂಟರ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಅದೇ ವೇಳೆಗೆ ಇವರ ಹಿಂದಿನಿಂದ ಬಂದ ಬಿಎಂಟಿಸಿ ಬಸ್ಸು ಅವರ ಮೇಲೆ ಹರಿದ ಪರಿಣಾಮ ದಾರುಣವಾಗಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಎಚ್ಎಎಲ್ ಹಳೆ ಏರ್ಪೋರ್ಟ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಸಿ.ವಿ.ರಾಮನ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷಾ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.