Tuesday, January 28, 2025
Homeರಾಜ್ಯ76ನೇ ಗಣರಾಜ್ಯೋತ್ಸವ ದಿನಾಚರಣೆ : ಇಲ್ಲಿದೆ ರಾಜ್ಯಪಾಲರ ಭಾಷಣದ ಹೈಲೈಟ್ಸ್

76ನೇ ಗಣರಾಜ್ಯೋತ್ಸವ ದಿನಾಚರಣೆ : ಇಲ್ಲಿದೆ ರಾಜ್ಯಪಾಲರ ಭಾಷಣದ ಹೈಲೈಟ್ಸ್

76th Republic Day Celebrations: Here are the highlights of the Governor's speech

ಬೆಂಗಳೂರು,ಜ.26- ರಾಜ್ಯಸರ್ಕಾರ 2024-25ನೇ ಸಾಲಿನಲ್ಲಿ ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಶೇ.13ರಷ್ಟು ಬೆಳವಣಿಗೆಯನ್ನು ಸಾಧಿಸಿಕೊಂಡು ಬಂದಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಇಂದಿಲ್ಲಿ ತಿಳಿಸಿದರು.

ನಗರದ ಮಾಣಿಕ್‌ಷಾ ಪೆರೇಡ್‌ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಡಿಸೆಂಬರ್‌ ಅಂತ್ಯದ ವೇಳೆಗೆ ಆದಾಯ ಸಂಗ್ರಹವು 1,81,908 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ ಎಂದರು.

ರಾಜ್ಯಗಳು ಸಂಗ್ರಹಿಸಿದ ಒಟ್ಟು ಜಿಎಸ್‌‍ಟಿ ಆದಾಯದಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಆರೋಗ್ಯ, ವಿದ್ಯುತ್‌, ಶಿಕ್ಷಣ, ರಸ್ತೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರಲ್ಲಿಯೂ ರಾಜ್ಯ ಸರ್ಕಾರ ಮುಂದಿದೆ ಎಂದು ಹೇಳಿದರು.

ರಾಜ್ಯಸರ್ಕಾರ ಜಾರಿಗೆ ತಂದ 5 ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿದೆ. ಆರ್ಥಿಕ ಬಿಕ್ಕಟ್ಟು ಉಂಟಾಗಿ ಅಭಿವೃದ್ಧಿ ಕುಂಠಿತವಾದೀತು ಎಂಬ ನಿರಾಶವಾದಿ ಭವಿಷ್ಯ ಸುಳ್ಳಾಗಿದೆ. ರಾಜ್ಯವು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಸಮಾನವಾಗಿ ನಿಭಾಯಿಸುತ್ತಾ ದೇಶದಲ್ಲೇ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತರಲಾದ ಗೃಹಲಕ್ಷ್ಮಿ ಯೋಜನೆಯಡಿ 35,180.20 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಗೃಹಜ್ಯೊತಿ ಯೋಜನೆಯ ಪ್ರಯೋಜನವನ್ನು 1.62 ಕೋಟಿ ಗ್ರಾಹಕರು ಪಡೆಯುತ್ತಿದ್ದು, ವಿದ್ಯುತ್‌ ಸರಬರಾಜು ಕಂಪನಿಗಳಿಗೆ 13,409 ಕೋಟಿ ಸಬ್ಸಿಡಿ ಬಿಡುಗಡೆ ಮಾಡಲಾಗಿದೆ.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿದ್ದು ಒಟ್ಟು 373.27 ಕೋಟಿ ಟ್ರಿಪ್‌ಗಳಲ್ಲಿ ಶಕ್ತಿ ಯೋಜನೆಯ ಪ್ರಯೋಜನ ಪಡೆದಿದ್ದು, 9,051 ಕೋಟಿ ರೂ. ವಿನಿಯೋಗಿಸಲಾಗಿದೆ. ಯುವನಿಧಿ ಯೋಜನೆಯಡಿ 2,18,114 ಅಭ್ಯರ್ಥಿಗಳನ್ನು ನೊಂದಾಯಿಸಿದ್ದು, ಅರ್ಹರಾದ 1,24,176 ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ಯುವನಿಧಿ + ಉಪಕ್ರಮದಡಿ 25 ಸಾವಿರ ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಸೆಪ್ಟೆಂಬರ್‌ ವೇಳೆಗೆ 4,48,12,382 ಫಲಾನುಭವಿಗಳ ಖಾತೆಗಳಿಗೆ 9775.51 ಕೋಟಿ ವರ್ಗಾವಣೆ ಮಾಡುವುದಾಗಿ ತಿಳಿಸಿದರು.

ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ :
ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ಸರ್ವ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಖಾಲಿ ಇರುವ ಬೋಧಕ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಕಳೆದ ಒಂದೂವರೆ ವರ್ಷಗಳಲ್ಲಿ 13 ಸಾವಿರಕ್ಕೂ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ 2024ರ ಏಪ್ರಿಲ್‌ನಿಂದ ಸೆಪ್ಟರಂಬರ್‌ ಅಂತ್ಯದವರೆಗೆ 88,853 ಮಿಲಿಯನ್‌ ಯುಎಸ್‌‍ ಡಾಲರ್‌ ಮೌಲ್ಯದಷ್ಟು ರಫ್ತು ಮಾಡುವ ಮೂಲಕ ರಾಜ್ಯವು ಒಟ್ಟಾರೆ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ರಫ್ತಿನಲ್ಲಿ ಶೇ.11.17 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ ಎಂದು ರಾಜ್ಯಪಾಲರು ಹೇಳಿದರು.

ರಾಜ್ಯಗಳನ್ನು ಸಶಕ್ತಗೊಳಿಸುವ ಮೂಲಕ ಸದೃಢ ಭಾರತವನ್ನು ನಿರ್ಮಿಸಬೇಕೆಂಬುದು ನಮ ಸಂವಿಧಾನ ನಿರ್ಮಾತೃಗಳ ಕನಸಾಗಿತ್ತು. ಅವರ ಆ ಕನಸಿಗೆ ಕುಂದುಂಟಾಗದಂತೆ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮೆಲ್ಲರ ಮೇಲಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಒಕ್ಕೂಟ ಸಿದ್ದಾಂತಗಳ ರೀತಿ ರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಕರ್ನಾಟಕ ಶ್ರಮಿಸಿದೆ.

ಒಕ್ಕೂಟ ಧರ್ಮಕ್ಕೆ ಚ್ಯುತಿಯಾದಾಗ ತನ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿಯೆತ್ತಿದೆ. ಗಣರಾಜ್ಯೋತ್ಸವದ ಈ ದಿನದಂದು ನಾವೆಲ್ಲರೂ ಒಟ್ಟಾಗಿ ಸಂವಿಧಾನ ಹಾಗೂ ಸಹಕಾರಿ ಒಕ್ಕೂಟ ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಪುನರುಚ್ಚರಿಸೋಣ ಎಂದು ರಾಜ್ಯಪಾಲರು ಕರೆ ನೀಡಿದರು.

ಇಂದು ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಸಹೋದರತೆಯನ್ನು ಎತ್ತಿಹಿಡಿಯುವ ದೇಶದ ಸರ್ವೋಚ್ಛ ಕಾನೂನಾದ ಸಂವಿಧಾನವನ್ನು ಅಳವಡಿಸಿಕೊಂಡ ದಿನ. ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮನ್ನು ರಕ್ಷಿಸುತ್ತದೆ ಎಂಬ ಅರಿವನ್ನು ಜನರಲ್ಲಿ ಮೂಡಿಸಬೇಕಾಗಿದೆ. ಗಣತಂತ್ರ ದಿನದ ಈ ವಿಶೇಷ ಸಂದರ್ಭದಲ್ಲಿ ನಾವೆಲ್ಲರೂ ನಮ ಘನ ಸಂವಿಧಾನದ ಮೂಲಕ ದೇಶ ಸಾಧಿಸಿರುವ ಪ್ರಗತಿಯನ್ನು ಗೌರವಿಸೋಣ. ಸಂವಿಧಾನವನ್ನು ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ನೇತೃತ್ವದಲ್ಲಿ ರಚಿಸಲು ಕಾರಣರಾದ ಎಲ್ಲಾ ಮಹನೀಯರಿಗೂ ಮನಸಾ ನಮಿಸೋಣ ಎಂದು ಹೇಳಿದರು.

ರಾಜ್ಯಸರ್ಕಾರದ ಸಾಧನೆಗಳನ್ನು ತಮ ಸಂದೇಶದಲ್ಲಿ ಬಣ್ಣಿಸಿದ ರಾಜ್ಯಪಾಲರು ಭೌತಿಕ ಆಹಾರ ಯೋಜನೆಯಡಿಯಲ್ಲಿ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುವ 12 ಪರಿಶಿಷ್ಟ ಪಂಗಡ ಸಮುದಾಯಗಳ 47,859 ಕುಟುಂಬಗಳಿಗೆ 120 ಕೋಟಿ ರೂ. ವೆಚ್ಚದಲ್ಲಿ ಪೌಷ್ಠಿಕ ಆಹಾರವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ರಾಷ್ಟ್ರದ ಏಕತೆ, ಸಮಾನತೆ, ಸಮೃದ್ಧಿಯನ್ನು ಸಾಧಿಸುವಲ್ಲಿ ಪ್ರಜಾಪ್ರಭುತ್ವದ ಆದರ್ಶಗಳು ನಮ ಹಾದಿಗೆ ಮಾರ್ಗದರ್ಶನ ನೀಡುತ್ತಲೇ ಇರಲಿ. ದೇಶಭಕ್ತಿ ಹಾಗೂ ಏಕತೆಯ ಮನೋಭಾವವು ರಾಷ್ಟ್ರದ ಒಳಿತಿಗೆ ಕೊಡುಗೆ ನೀಡಲಿ. ಸುಭದ್ರ, ಸೌಹಾರ್ದ ಹಾಗೂ ಸಮೃದ್ಧ ಕರ್ನಾಟಕ ಮತ್ತು ಭಾರತವನ್ನು ನಿರ್ಮಿಸಲು ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ಮುನ್ನಡೆಯೋಣ. ಮಾದರಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಗೊಳಿಸೋಣ ಎಂದು ಅವರು ಕರೆ ನೀಡಿದರು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಮತ್ತು ದೇಶಸೇವೆ ಹಾಗೂ ಸುಧಾರಣೆಗಾಗಿ ಸಿದ್ಧರಾಗೋಣ ಎಂದು ರಾಜ್ಯಪಲಾರು ಕರೆ ನೀಡಿದರು.

34 ಸ್ಥಳಗಳಲ್ಲಿ ವಸತಿ ಸಂಕೀರ್ಣ ನಿರ್ಮಾಣ :
ಬೆಂಗಳೂರು,ಜ.26- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದಾದ್ಯಂತ 34 ಸ್ಥಳಗಳಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸುವ ಮೂಲಕ ಸುಮಾರು 30 ಸಾವಿರ ವಸತಿ ಘಟಕಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ತಿಳಿಸಿದರು.
ನಗರದ ಮಾಣಿಕ್‌ಷಾ ಪೆರೇಡ್‌ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ 25 ಯೋಜನೆಗಳಲ್ಲಿ ಒಟ್ಟು 14,980 ಫ್ಲಾಟ್‌ಗಳ ನಿರ್ಮಾಣವನ್ನು ಆರಂಭಿಸಲಾಗಿದೆ. 10,615 ಫ್ಲಾಟ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದರು.

ಡಾ.ಕೆ.ಶಿವರಾಮ ಕಾರಂತ (ಹಂತ 1) ಬಡಾವಣೆಯ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ನಿವೇಶನ ಹಂಚಿಕೆ ಕಾರ್ಯವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು ಮೆಟ್ರೋ ಯೋಜನೆಯ ಹಂತ 2 ಎ ರಲ್ಲಿ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಕೃಷ್ಣರಾಜಪುರದವರೆಗೆ ಮತ್ತು ಹಂತ 2 ಬಿ ಯಲ್ಲಿ ಕೆ.ಆರ್‌.ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದವರೆಗೆ 14,788 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಹಂತ 3ರಲ್ಲಿ ಕಾರಿಡಾರ್‌ 1 ರ ಕೆಂಪಾಪುರದಿಂದ ಜೆ.ಪಿ.ನಗರ 4ನೇ ಹಂತದವರೆಗೆ, ಕಾರಿಡಾರ್‌ 2 ರಲ್ಲಿ ಹೊಸಹಳ್ಳಿಯಿಂದ ಕಡಬಗೆರೆವರೆಗೆ 15,611 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಯೋಜನೆ 2029 ರ ಡಿಸೆಂಬರ್‌ ವೇಳೆಗೆ ಅಂತ್ಯಗೊಳಿಸಲು ಯೋಜಿಸಲಾಗಿದೆ ಎಂದರು.

ಮಹಿಳೆ ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ನಿರ್ಭಯ ನಿಧಿ ಯೋಜನೆಯಲ್ಲಿ ವಾಹನವಿರುವ ಸ್ಥಳವನ್ನು ಪತ್ತೆ ಹಚ್ಚುವ ಮತ್ತು ತುರ್ತು ಅಪಾಯದ ಗುಂಡಿಗಳನ್ನು ಅಳವಡಿಸುವ ಯೋಜನೆ ಜಾರಿಗೊಳಿಸಲಾಗಿದೆ. ಡಿಸೆಂಬರ್‌ ಅಂತ್ಯಕ್ಕೆ 40,848 ವಾಹನಗಳಿಗೆ ಅಳವಡಿಸಿದ್ದು ಮುಂದಿನ ದಿನಗಳಲ್ಲಿ ಬಾಕಿ ಇರುವ ವಾಹನಗಳಿಗೂ ಈ ಸಾಧನಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಪರಾಧಗಳ ಸಂಖ್ಯೆ ಇಳಿಕೆ :
ರಾಜ್ಯ ಪೊಲೀಸರು ರಾಜ್ಯ ಮತ್ತು ಕಾನೂನು ಸುವ್ಯವಸ್ಥೆ ನಿರ್ವಹಣೆ, ಅಪರಾಧ ಪತ್ತೆ ಮತ್ತು ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಎಲ್ಲಾ ರೀತಿಯ ಅಪರಾಧಗಳನ್ನು, ವಿಶೇಷವಾಗಿ ಗಂಭೀರ ಅಪರಾಧಗಳನ್ನು ಪತ್ತೆ ಹಚ್ಚುವ ಮೂಲಕ ಅಪರಾಧಗಳ ಸಂಖ್ಯೆಯಲ್ಲಿನ ಇಳಿಕೆಯು ಅತ್ಯಂತ ಗಮನಾರ್ಹ ಸಾಧನೆಯಾಗಿದೆ ಎಂದು ಪ್ರಶಂಸಿದರು.

ಸುಗಮ ಸಂಚಾರಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಬೆಂಗಳೂರು ಸಂಚಾರ ಪೊಲೀಸರು ಮುಂಚೂಣಿಯಲ್ಲಿದ್ದಾರೆ. ಸುಗಮ ಸಂಚಾರ ಅರಿವಿನೊಂದಿಗೆ ಆಂಬ್ಯುಲೆನ್‌್ಸನಂತಹ ತುರ್ತು ವಾಹನಗಳಿಗೆ ಸಿಗ್ನಲ್‌ನಲ್ಲಿ ಆದ್ಯತೆ ನೀಡಲಾಗುವುದು. ಸಂಚಾರವನ್ನು ತೆರವುಗೊಳಿಸಲು ತ್ವರಿತ ನಿರ್ಧಾರ ತೆಗೆದುಕೊಳ್ಳಲು ಕೃತಕ ಬುದ್ಧಿಮತ್ತೆ ಆಧಾರಿತ ದತ್ತಾಂಶವು ಸೂಕ್ತ ವೇದಿಕೆಯಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಪರಾಧದ ಹಾವಳಿ ಒಂದು ಆಘಾತಕಾರಿ ವಿಷಯವಾಗಿದೆ. ಒಟ್ಟು ಶೇಕಡಾವಾರು ಅಪರಾಧ ಪ್ರಕರಣಗಳಲ್ಲಿ ಶೇ.10ರಷ್ಟು ಸೈಬರ್‌ ಅಪರಾಧಗಳಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚಲು, ಶಿಕ್ಷಿಸಲು ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಇಂಡಿಯಾ ಸಿಲ್‌್ಕ 24 ರಲ್ಲಿ ಕರ್ನಾಟಕವು 48 ಪದಕಗಳನ್ನು ಗಳಿಸಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಹೆಸರುಘಟ್ಟ ಹುಲ್ಲುಗಾವಲು ಪ್ರದೇಶವನ್ನು ಗ್ರೇಟರ್‌ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸಲು ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ನಗದೇತರ ಸೌಲಭ್ಯ ಒದಗಿಸುತ್ತಿರುವ ಯೋಜನೆಯನ್ನು ನೇರ ನಗದು ವರ್ಗಾವಣೆ ವೇದಿಕೆ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ನೇರ ನಗದು ವರ್ಗಾವಣೆ ವೇದಿಕೆಯ ಎನ್‌ಪಿಸಿಐ ಗೇಟ್‌ ವೇ ಯೊಂದಿಗೆ ಸಂಯೋಜಿಸಿ ಇ-ರುಪಿ ವೋಚರ್‌ ಮೂಲಕ ನಗದೇತರ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ರಾಜ್ಯಪಾಲರು ತಿಳಿಸುವ ಮೂಲಕ ರಾಜ್ಯಸರ್ಕಾರದ ವಿವಿಧ ಕಾರ್ಯಕ್ರಮ ಹಾಗೂ ಯೋಜನೆಗಳ ಸಾಧನೆಯನ್ನು ರಾಜ್ಯಪಾಲರು ತಮ ಸಂದೇಶದಲ್ಲಿ ಶ್ಲಾಘಿಸಿದರು.

RELATED ARTICLES

Latest News