Tuesday, January 28, 2025
Homeರಾಜ್ಯಗಣರಾಜ್ಯೋತ್ಸವ ಭಾಷಣದಲ್ಲಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ಗಣರಾಜ್ಯೋತ್ಸವ ಭಾಷಣದಲ್ಲಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

Kharge lashes out at Modi in Republic Day speech

ಬೆಂಗಳೂರು,ಜ.26- ಕೇಂದ್ರ ಸರ್ಕಾರ ದೇಶದ ಪ್ರಜೆಗಳನ್ನು ಹೀನಾಯವಾಗಿ ಕಾಣುತ್ತಿದ್ದು, ಬಡವರನ್ನು ಕಡೆಗಣಿಸಿ ಶ್ರೀಮಂತರಿಗೆ, ಪ್ರಭಾವಿಗಳಿಗೆ ಹೆಚ್ಚಿನ ಸೌಲಭ್ಯ ನೀಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

76ನೇ ಗಣರಾಜ್ಯೋತ್ಸವದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ದೇಶದಲ್ಲಿಂದು ಸಂವಿಧಾನ ರಕ್ಷಣೆ ಮಾಡುವ ಮತ್ತು ಅದನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಸಂವಿಧಾನದ ಎಲ್ಲಾ ಮೌಲ್ಯಗಳನ್ನು ಮೂಲೆಗುಂಪು ಮಾಡುತ್ತಿದೆ. ದೇಶದ ನಾಗರಿಕರಿಗೆ ಸಿಗುವ ಹಕ್ಕುಗಳು, ಹೆಣ್ಣುಮಕ್ಕಳ ಸ್ವಾತಂತ್ರ್ಯ ಎಲ್ಲವೂ ಮೊಟಕುಗೊಳ್ಳುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಸಂವಿಧಾನ ಅಸ್ತಿತ್ವಕ್ಕೆ ಬಂದ ಮೇಲೆ ದೇಶದ ಎಲ್ಲರಿಗೂ ಹಕ್ಕುಗಳು ದೊರೆಯುತ್ತಿವೆ. ಇಲ್ಲದೆ ಹೋಗಿದ್ದರೆ ಜನಸಾಮಾನ್ಯರನ್ನು ಕೇಳುವವರಿಲ್ಲದಂತಾಗುತ್ತಿತ್ತು. ಪ್ರತಿ ಚುನಾವಣೆಯಲ್ಲೂ ಜನರ ಮನೆಬಾಗಿಲಿಗೆ ಬಂದು ಮತ ಕೇಳುವ ಪರಿಸ್ಥಿತಿಯನ್ನು ಸಂವಿಧಾನ ನಿರ್ಮಿಸಿದೆ ಎಂದರು.

ಕಾಂಗ್ರೆಸ್‌‍ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಲ್ಲದೆ ಸಂವಿಧಾನದ ಮೌಲ್ಯಗಳನ್ನು ಕಾಪಾಡುತ್ತಿದೆ. ಇತ್ತೀಚಿನ ದೌರ್ಭಾಗ್ಯ ಎಂದರೆ ದೇಶದ ಪ್ರಮುಖ ನಾಯಕರು ಅದರಲ್ಲೂ ಅಮಿತ್‌ ಷಾ ರಂತವರು ಸಂವಿಧಾನ ಮತ್ತು ಅದರ ರಚನಾಕಾರರನ್ನು ಟೀಕೆ ಟಿಪ್ಪಣೆ ಮಾಡಿ ಅಗೌರವ ತೋರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭೆಯಲ್ಲಿ ಅಮಿತ್‌ ಷಾ ಪ್ರತಿ ಮಾತಿಗೂ ಅಂಬೇಡ್ಕರ್‌, ಅಂಬೇಡ್ಕರ್‌ ಎಂದು ಹೇಳುತ್ತಿದ್ದೀರ, ಅದೇ ರೀತಿ ದೇವರ ಹೆಸರನ್ನು ಜಪ ಮಾಡಿದರೆ 7 ಜನಕ್ಕಾಗುವಷ್ಟು ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳಿದ್ದರು.ದೇಶವನ್ನು ನರಕದಲ್ಲಿಟ್ಟ ಜನ, ಸ್ವಾತಂತ್ರ್ಯ ಕೊಡಿಸಲು ಕೈಲಾಗದಿದ್ದ ಜನ, ದೇಶಕ್ಕಾಗಿ ಏನನ್ನೂ ಒಳ್ಳೆಯದನ್ನು ಮಾಡದೇ ಇರುವ ಜನ ಇಂದು ಸ್ವರ್ಗದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ತಮ ಭಾಷಣದಲ್ಲಿ ಭಾರತವನ್ನು ವಿಶ್ವದಲ್ಲೇ ಮೂರನೇ ಆರ್ಥಿಕ ಶಕ್ತಿಯನ್ನಾಗಿ ಬೆಳೆಸಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಸುಳ್ಳು. ಭಾರತ ಇಂದಿಗೂ 5ನೇ ಸ್ಥಾನದಲ್ಲೇ ಮುಂದುವರೆದಿದೆ. ಈ ಹಿಂದೆ ಯುಪಿಎ ಅವಧಿಯಲ್ಲಿ ಬಹಳ ಕಷ್ಟಪಟ್ಟು ಭಾರತ 4ನೇ ಸ್ಥಾನಕ್ಕೆ ತಲುಪಿತ್ತು. ಈಗ 5ನೇ ಸ್ಥಾನದಲ್ಲೇ ಕುಳಿತಿದೆ ಎಂದು ಹೇಳಿದರು.

ಮೋದಿಯವರು ಮೂರನೇ ಸ್ಥಾನಕ್ಕೆ ತಂದಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಬಾಯಿಮಾತಿನಲ್ಲಿ ಹೇಳುವುದು ಬೇರೆ. ಆದರೆ ಅಂಕಿ ಸಂಖ್ಯೆಗಳು ವಾಸ್ತವ ಪರಿಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು. ಕೇಂದ್ರ ಸರ್ಕಾರ ದೇಶದ ಎಲ್ಲಾ ಪ್ರಜೆಗಳನ್ನು ಹೀನಾಯವಾಗಿ ನೋಡುತ್ತಿದೆ. ಉಳ್ಳವರಿಗೆ, ಶ್ರೀಮಂತರಿಗೆ, ಪ್ರಭಾವಿಗಳಿಗೆ ಹೆಚ್ಚು ಸವಲತ್ತುಗಳನ್ನು ನೀಡುತ್ತಿದೆ. ಬಡವರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿಯವರು ದೇಶಕ್ಕಾಗಿ ಮಾಡಿದ್ದಷ್ಟು ಒಳ್ಳೆಯ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿಯಾಗಲಿ, ಬಿಜೆಪಿ ಅಥವಾ ಆರ್‌ಎಸ್‌‍ಎಸ್‌‍ಗಳಾಗಲಿ ಮಾಡುತ್ತಿಲ್ಲ. ಹೀಗಾಗಿ ನಾವು ಹೋರಾಟ ನಡೆಸಬೇಕಿದೆ ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಜನ ತಾಳಿದ ಇಂದೋರ್‌ನಲ್ಲಿ ನಾಳೆ ಲಕ್ಷಾಂತರ ಜನರ ಸಮಾವೇಶ ಆಯೋಜನೆ ಮಾಡಲಾಗಿದೆ. ಅಲ್ಲಿ ಮೋದಿ ಮತ್ತು ಅಮಿತ್‌ ಷಾ ದೇಶಕ್ಕೆ ತೊಂದರೆ ಮಾಡುತ್ತಿರುವುದನ್ನು ಎಳೆಎಳೆಯಾಗಿ ವಿವರಿಸಲಾಗುವುದು. ನಮ ನಾಯಕರನ್ನು ಅಪಮಾನಿಸುತ್ತಿರುವ ಬಗ್ಗೆಯೂ ವಿವರಣೆ ನೀಡುವುದಾಗಿ ತಿಳಿಸಿದರು.

ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್‌‍ ಪಕ್ಷ ನೀಡಿರುವ ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ್‌ ಘೋಷಣೆಯನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News