Friday, January 31, 2025
Homeರಾಜ್ಯಸಿಎಂ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್​ಗ ಇ.ಡಿ. ನೋಟೀಸ್

ಸಿಎಂ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್​ಗ ಇ.ಡಿ. ನೋಟೀಸ್

ED notice to CM's wife and Minister Byrati Suresh

ಬೆಂಗಳೂರು,ಜ.27- ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ದಲ್ಲಿ ನಿಯಮಬಾಹಿರವಾಗಿ ನಿವೇಶನ ಪಡೆದ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎ.ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ಗೆ ವಿಚಾರಣೆಗೆ ಹಾಜರಾಗವಂತೆ ಜಾರಿ ನಿರ್ದೇಶನಾಲಯ ( ಇಡಿ) ನೋಟೀಸ್ ಜಾರಿ ಮಾಡಿದೆ.

ರಾಜ್ಯದ ಇತಿಹಾಸದಲ್ಲೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಮುಖ್ಯಮಂತ್ರಿ ಅವರ ಪತ್ನಿಗೆ ಇ.ಡಿ. ನೋಟೀಸ್ ನೀಡುತ್ತಿರುವುದು ಇದೇ ಮೊದಲು. ಸಿದ್ದರಾಮಯ್ಯ ಆವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಅವರಿಗೂ ಮಂಗಳವಾರ ಬೆಳಗ್ಗೆ ಬೆಂಗಳೂರಿನ ಶಾಂತಿನಗರದಲ್ಲಿರುವ ಕಚೇರಿಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದೆ.

ಆಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) ಅಡಿ ವಿ.ಮರಳೀಕಣ್ಣನ್ ಹೆಸರಿನಲ್ಲಿ ನೋಟಿಸ್ ಜಾರಿ ಮಾಡಿರುವ ಅಧಿಕಾರಿಗಳು ಈ ಹಿಂದೆ ಜನವರಿ 3 ರಂದು ನೋಟೀಸ್ ಜಾರಿ ಮಾಡಿ 9 ರಂದು ವಿಚಾರಣೆಗೆ ಹಾಜರಾಗಲು ಸೂಚನೆ ಕೊಟ್ಟಿದ್ದರು. ಆದರೆ, ದಾಖಲೆ ಸಂಗ್ರಹಿಸಲು ಎರಡು ವಾರಗಳ ಕಾಲ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಮತ್ತೊಮೆ ಪ್ರಕರಣ ಸಂಬಂಧ ದಾಖಲೆಗಳ ಸಮೇತ ವಿಚಾರಣೆಗೆ ಬರುವಂತೆ ಪಾರ್ವತಿ ಮತ್ತು ಸುರೇಶ್ ಅವರಿಗೆ ನೋಟೀಸ್ನಲ್ಲಿ ಸೂಚನೆ ನೀಡಲಾಗಿದೆ.

ಈ ಮೊದಲು ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಹಾಗೂ ಜಮೀನು ಮಾಲೀಕ ದೇವರಾಜು ಮತ್ತು ಕೆಲವು ಅಧಿಕಾರಿಗಳು ವಿಚಾರಣೆ ಎದುರಿಸಿದ್ದರು. ಜ. 23 ರಂದು ಇ.ಡಿ. ನೋಟೀಸ್ ಜಾರಿ ಮಾಡಿದ್ದ ಇ.ಡಿ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಇ.ಡಿ. ನೋಟೀಸ್ ನೀಡುತ್ತಿದ್ದಂತೆ ಪಾರ್ವತಿ ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್ ಧಾರವಾಡ ಏಕಸದಸ್ಯ ಪೀಠಕ್ಕೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ್ ಪೀಠಕ್ಕೆ ಮನವಿ ಮಾಡಿದರು. ಸಂಜೆ ಕಲಾಪದ ಕೊನೆಗೆ ವಿಚಾರಣೆ ನಡೆಸುವುದಾಗಿ ನ್ಯಾ.ಎಂ.ನಾಗಪ್ರಸನ್ನ ಒಪ್ಪಿಗೆ ಸೂಚಿಸಿದರು.

ತಮ ಪತ್ನಿಗೆ ಇಡಿ ನೋಟೀಸ್ ನೀಡಿರುವುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ್ ಒಪ್ಪಿಕೊಂಡಿದ್ದಾರೆ. ಮಗನ ವಿವಾಹ ಇರುವ ಕಾರಣ, ವಿಚಾರಣೆ ದಿನಾಂಕವನ್ನು ಮುಂದೂಡುವಂತೆ ಸುರೇಶ್ ಇ.ಡಿ. ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಮಧ್ಯಂತರ ತನಿಖಾ ವರದಿಯನ್ನು ಧಾರವಾಡ ಹೈಕೋರ್ಟ್ ಪೀಠಕ್ಕೆ ಇಂದು ಸಲ್ಲಿಸಲಿದ್ದಾರೆ.

ಮುಡಾದಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿಗೆ 14 ನಿವೇಶನ ಹಂಚಿಕೆಯಾಗಿದ್ದ ಪ್ರಕರಣವನ್ನು ಒಂದೆಡೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ವರದಿ ನೀಡಿರುವ ಬೆನ್ನಲ್ಲೇ ಇನ್ನೊಂದೆಡೆ ಇ.ಡಿ. ಕೂಡ ತನಿಖೆಯನ್ನು ಕೈಗೆತ್ತಿಕೊಂಡಿದೆ. ಈ ಸಂಬಂಧ ಹಲವರನ್ನು ಈಗಾಗಲೇ ವಿಚಾರಣೆಗೊಳಪಡಿಸಿತ್ತು.

ಪ್ರಾಧಿಕಾರ ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿದ್ದು, ನಿವೇಶನ ಹಂಚಿಕೆ, ಹಿಂದಿರುಗಿಸುವಿಕೆ ಮತ್ತಿತರ ಪ್ರಕ್ರಿಯೆಗಳು ಇಲಾಖೆಯ ಗಮನಕ್ಕೆ ಬಾರದೆಯೇ ನಡೆದಿದ್ದವೇ ಅಥವಾ ಗಮನಕ್ಕೆ ಬಂದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲವೇ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇ.ಡಿ. ನೋಟೀಸ್ ನೀಡಿದೆ ಎನ್ನಲಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಇಲಾಖೆಯ ಸಚಿವ ಭೈರತಿ ಸುರೇಶ್ ವಿರುದ್ಧ ಈ ಪ್ರಕರಣದಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದಿದ್ದು, ಪ್ರಕರಣ ಬಯಲಾಗುತ್ತಿದ್ದಂತೆಯೇ ರಾತ್ರೋರಾತ್ರಿ ಮುಡಾ ಕಚೇರಿಗೆ ಭೇಟಿ ನೀಡಿ ಹೆಲಿಕಾಪ್ಟರ್ ಮೂಲಕ ಸಾವಿರಾರು ಕಡತಗಳನ್ನು ಹೊತ್ತೊಯ್ದಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಈ ನಿಟ್ಟಿನಲ್ಲೂ ತನಿಖೆ ನಡೆಯಬಹುದು ಎನ್ನಲಾಗಿದ್ದು, ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ನಲ್ಲಿ ತಿಳಿಸಲಾಗಿದೆ.

ಮುಡಾ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಪರಿಹಾರವಾಗಿ ಭೂಮಿಯನ್ನು ನೀಡುವಲ್ಲಿ ಸಂಭವನೀಯ ಅನ್ಯಾಯದ ಅಭ್ಯಾಸಗಳಿಗಾಗಿ ತನಿಖೆ ನಡೆಸುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಹೈ-ಎಂಡ್ ಪ್ರದೇಶದಲ್ಲಿ 14 ವಸತಿ ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಾಗ ವಿಷಯ ಗಂಭೀರವಾಯಿತು. ಈ ಪ್ರಕ್ರಿಯೆಯು ನ್ಯಾಯೋಚಿತ ಮತ್ತು ಕಾನೂನುಬದ್ಧವಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮುಡಾವನ್ನು ಮೂಲತಃ ಸಿಟಿ ಇಂಪೂವೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಎಂದು 1904 ರಲ್ಲಿ ರಚಿಸಿದಾಗ ಮೈಸೂರಿನಲ್ಲಿ ನಗರ ಯೋಜನೆ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿದೆ. ವಸತಿ ಬಡಾವಣೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಇದರ ಒಂದು ಪಾತ್ರವಾಗಿದೆ. ಆದರೆ, ಅಪೂರ್ಣ ಭೂಸ್ವಾಧೀನದಿಂದಾಗಿ ಮುಡಾ ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದೆ.

ಈಗಾಗಲೇ ಸಿಎಂ ಪತ್ನಿ ಅವರು ತನಗೆ ನೀಡಿದ 14 ನಿವೇಶನಗಳನ್ನು ು ಮುಡಾಗೆ ಮರಳಿಸಿದ್ದಾರೆ. ಲೋಕಾಯುಕ್ತ, ಇಡಿಯಲ್ಲಿ ಎಫ್ಐಆರ್ ಬೆನ್ನಲ್ಲೇ ಕಳೆದ ಸೆ.30 ರಂದು 14 ನಿವೇಶನ ಹಿಂದಿರುಗಿಸುವುದಾಗಿ ಮುಡಾ ಆಯುಕ್ತರಿಗೆ ಪಾರ್ವತಿ ಅವರು ಪತ್ರ ಬರೆದಿದ್ದರು.

ಮೈಸೂರಿನ ಗಂಗರಾಜು, ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ಚುರುಕುಗೊಳಿಸಿತ್ತು.

ಏನಿದು ಮುಡಾ ಪ್ರಕರಣ? :
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು.

ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಕೊಟ್ಟಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಭಾವಮೈದುನ ಜಾಗ ಕೊಟ್ಟಿದ್ದ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೂ ಸಿಎಂ ಪತ್ನಿಗೆ ವಿಜಯನಗರದಲ್ಲೇ ಏಕೆ ನಿವೇಶನ ಮಂಜೂರು ಮಾಡಿದರು ಎಂಬ ಪ್ರಶ್ನೆ ಮೂಡಿದೆ.

ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರೋ 3ಎಕರೆ 16 ಗುಂಟೆ ಜಾಗವನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ, ಪಾರ್ವತಿಯವರಿಗೆ ದಾನವಾಗಿ ನೀಡಿದ್ದರು. ಈ ಜಾಗವನ್ನು ಅಭಿವೃದ್ಧಿಗಾಗಿ ಪ್ರಾಧಿಕಾರ, ಕಾನೂನು ಪ್ರಕಾರವೇ ವಶಪಡಿಸಿಕೊಂಡಿತ್ತು. 1998ರಲ್ಲಿ ನೋಟಿಫೈ ಮಾಡಿತ್ತು. ಇದೇ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆಯನ್ನೂ ಅಭಿವೃದ್ಧಿ ಮಾಡಿದೆ.

ವಿಷಯ ಏನೆಂದರೆ, ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ. ಹೀಗಾಗಿ ಬದಲಿ ಭೂಮಿ ನೀಡುವಂತೆ 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕಿದ್ದರು. 2017ರಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಪಡಿಸದ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಇದಕ್ಕೆ ಒಪ್ಪದ ಸಿಎಂ ಪತ್ನಿ ಪಾರ್ವತಿ 2021ರಲ್ಲಿ ಮತ್ತೊಂದು ಪತ್ರ ಬರೆದಿದ್ದರು. 50:50ಅನುಪಾತದಲ್ಲಿ ಬದಲಿ ನಿವೇಶನ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಸಿಎಂ ಪತ್ನಿ ಕೋರಿಕೆಯಂತೆ 2021ರಲ್ಲಿ 50:50 ಅನುಪಾತದಲ್ಲಿ ಭೂಮಿ ನೀಡಲಾಗಿದೆ ಎಂಬುದು ಆರೋಪ.

ಭೂಮಿ ವಶಪಡಿಸಿಕೊಂಡ ಜಾಗದಲ್ಲಿ, ಅಥವಾ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಸಿಎಂ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು, ವಿಜಯನಗರದಲ್ಲಿ ಭೂಮಿ ಕೊಡಲಾಗಿದೆ. 50:50 ಅನುಪಾತ ನಿಯಮವನ್ನು ದುರುಪಯೋಗಪಡಿಸಿಕೊಂಡು, 1998ರಲ್ಲಿ ವಶಪಡಿಸಿಕೊಂಡ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50:50 ಅನುಪಾತ ಬಳಸಿದ್ದೇಕೆ ಎಂಬುದು ದೂರುದಾರರ ಪ್ರಶ್ನೆ.

ಕೆಸರೆಯಲ್ಲಿ ಕಡಿಮೆ ಮೌಲ್ಯದ ಜಾಗ ಸ್ವಾಧೀನ ಮಾಡಿ, ವಿಜಯನಗರದಲ್ಲಿ ಹೆಚ್ಚಿನ ಮೌಲ್ಯದ ಬದಲಿ ಭೂಮಿ ನೀಡಲಾಗಿದೆ. ಅಂದರೆ, ದೇವನೂರು ಬಡಾವಣೆಯಲ್ಲಿ ಚದರ ಅಡಿಗೆ 2,500 ರೂಪಾಯಿಯಿಂದ 3,000 ರೂಪಾಯಿವರೆಗೆ ದರ ಇದೆ. ಆದರೆ, ವಿಜಯನಗರದಲ್ಲಿ 7 ರಿಂದ 8 ಸಾವಿರ ರೂಪಾಯಿ ಇದೆ. ಹೀಗಾಗಿ ಸಿಎಂ ಮತ್ತು ಸಿಎಂ ಪತ್ನಿಗೆ ಆರ್ಥಿಕ ಲಾಭ ಮಾಡಿಕೊಡಲು ಮುಡಾ ಅಧಿಕಾರಿಗಳು ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

RELATED ARTICLES

Latest News