ಬೆಂಗಳೂರು,ಜ.28- ಜಾತಿ ದೌರ್ಜನ್ಯದ ಪ್ರಕರಣಗಳು, ಸಾಲ ಬಡ್ಡಿ, ಮೀಸಲಾತಿ ಹಾಗೂ ಪರಿಶಿಷ್ಟರಿಗೆ ಅವಕಾಶ ತಪ್ಪಿಸಲು ಅಧಿಕಾರಿಗಳು ಅನುಸರಿಸುತ್ತಿರುವ ಕುಟೀಲ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶಾಸಕರು, ಸಂಸದರು, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಬೇಲ್ ಸಿಕ್ಕರೆ ಅದು ಅಧಿಕಾರಿಗಳ ದೌರ್ಬಲ್ಯ. ಹೀಗಾದರೆ ಜಾತಿ ದೌರ್ಜನ್ಯ ತಡೆಗಟ್ಟುವುದು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಕ್ಕರೆ, ಮೇಲನವಿ ಹೋಗಿ ಜಾಮೀನು ರದ್ದುಪಡಿಸಿ ಎಂದು ಆದೇಶಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಿದ ಪ್ರಕರಣಗಳು ಎಷ್ಟಿವೆ ? ಈ ಬಗ್ಗೆ ವಿವರ ಕೊಡಿ ಎಂದು ಮುಖ್ಯಮಂತ್ರಿಯವರು ಚಾಟಿ ಬೀಸಿದರು.
ಜಾತಿ ದೌರ್ಜನ್ಯ ದೂರು ಬಂದಾಗ ಪೊಲೀಸರೇ ಕೌಂಟರ್ ದೂರು ಪಡೆದು ಪ್ರಕರಣ ದುರ್ಬಲಗೊಳಿಸುವ ಬಗ್ಗೆ ದೂರುಗಳು ಬಂದರೆ ಅದನ್ನು ಸಹಿಸಲ್ಲ. ನಮ ಗಮನಕ್ಕೆ ಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಎಚ್ಚರಿಸಿದರು. ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗೆ ಆರೋಪಪಟ್ಟಿ ದಾಖಲಿಸಲೇಬೇಕು. ಯಾರಾದರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದರೆ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.
ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹಲವು ದಶಕಗಳಿಂದ 3 ಕ್ಕಿಂತ ಹೆಚ್ಚಾಗಿಲ್ಲ. ಈ ಕಾರಣಕ್ಕೂ ನಾನು ಡಿಸಿಆರ್ಇ ಸೆಲ್ಗಳಿಗೆ ಪೊಲೀಸ್ ಠಾಣೆ ಶಕ್ತಿ ನೀಡಿದ್ದಾಗಿದೆ. ಇನ್ನೂ ಶಿಕ್ಷೆ ಪ್ರಮಾಣ ಹೆಚ್ಚಾಗದಿದ್ದರೆ ಹೇಗೆ? ಪ್ರಕರಣಗಳ ತನಿಖೆಯ ಗುಣಮಟ್ಟದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಕೌಂಟರ್ ಕೇಸ್ಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಾಗಿದೆಯೇ ಎಂದು ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಅವರು ಅಸಮಾಧಾನದಿಂದ ಸಭೆಯಲ್ಲಿ ಪ್ರಶ್ನಿಸಿದರು. 3 ವಿಶೇಷ ನ್ಯಾಯಾಲಯಗಳಿಗೆ ಮಾತ್ರ ಅನುಮತಿ ಸಿಕ್ಕಿದೆ. ಇನ್ನೂ 24 ವಿಶೇಷ ನ್ಯಾಯಾಲಯಗಳಿಗೆ ಅನುಮತಿ ದೊರೆತಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು. ಬಳಿಕ ಈ ಬಗ್ಗೆ ತಾವು ತೀವ್ರವಾಗಿ ಗಮನಿಸಿ ಬಾಕಿ ನ್ಯಾಯಾಲಯಗಳಿಗೆ ಬೇಗ ಅನುಮತಿ ಸಿಗುವ ದಿಕ್ಕಿನಲ್ಲಿ ಗಮನ ಹರಿಸುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತಿಳಿಸಿದರು.
ಎಲ್ಲಾ ಇಲಾಖೆಗಳೂ ಬಡ್ತಿಯಲ್ಲಿ ಮೀಸಲಾತಿಯನ್ನು ಚಾಚೂ ತಪ್ಪದೆ ಪಾಲಿಸಬೇಕು, ಪರಿಶಿಷ್ಟ ಸಮುದಾಯದವರಿಗೆ ಅವಕಾಶ ತಪ್ಪಿಸಲು ಅಧಿಕಾರಿಗಳು ಕುಟಿಲ ನೀತಿ ಅನುಸರಿಸಿದರೆ ಸಹಿಸಲ್ಲ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಸೀನಿಯಾರಿಟಿ ಲಿಸ್ಟ್ ಉಲ್ಲಂಘನೆ ಆಗಿ ಪರಿಶಿಷ್ಠರಿಗೆ ಅನ್ಯಾಯ ಆಗುತ್ತಿದೆ. ಸಮಿತಿ ಮುಂದೆ ದೂರು ಬಂದು ನಾವು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದರೂ, ಸಮಸ್ಯೆ ಬಗೆಹರಿಸುತ್ತಿಲ್ಲ ಏಕೆ ? ಎಂದು ಸಂಸದ ಈ.ತುಕಾರಾಮ್ ಮತ್ತು ಶಾಸಕ ನರೇಂದ್ರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಇದೇ ವೇಳೆ ಶಾಸಕರು, ಸಂಸದರು ತರಾಟೆಗೆ ತೆಗೆದುಕೊಂಡಾಗ ಸಿದ್ದರಾಮಯ್ಯನವರು ಮಧ್ಯಪ್ರವೇಶ ಮಾಡಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರಿಗೆ ಸೂಚಿಸಿದರು.
ಬ್ಯಾಕ್ ಲಾಗ್ ಮತ್ತು ಬಡ್ತಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಸಬ್ ಕಮಿಟಿ ಪತ್ತೆ ಹಚ್ಚಿ ಸಮಸ್ಯೆಗಳನ್ನು ನಿಮ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದೀರಿ. ಹಾಗಾದರೆ ಸಬ್ ಕಮಿಟಿ ಕೊಡುವ ವರದಿಗಳಿಗೆ ಬೆಲೆ ಇಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಕಿಡಿಕಾರಿದರು. ಇಲಾಖಾವಾರು ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಪರಿಶೀಲಿಸಲು ಪ್ರತ್ಯೇಕ ರಿವೀವ್ ಮೀಟಿಂಗ್ ಕರೆಯುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.
ಪ್ರತೀ ಆರು ತಿಂಗಳಿಗೊಮೆ ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಕರೆಯುತ್ತೇವೆ. ಈ ಸಭೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಎಚ್ಚರಿಸಿದರು.
ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಕ್ರಿಯಾ ಸಮಿತಿ ಅಡಿಯಲ್ಲಿ ನಡೆಯುತ್ತಿರುವ ಮಹಿಳೆಯರ ಅಹೋರಾತ್ರಿ ಧರಣಿ ವಿಚಾರವನ್ನು ಸಭೆಯಲ್ಲಿ ಚರ್ಚಿಸಲಾಯಿತು. ದೇವದಾಸಿ ಪದ್ಧತಿ ನಿಷೇಧ ಆಗಿದೆ. ಎಲ್ಲಿಯಾದರೂ ನಡೆದದ್ದು ಗಮನಕ್ಕೆ ಬಂದರೆ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಬೇಕು, ವೈಜ್ಞಾನಿಕವಾಗಿ ದೇವದಾಸಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಬೇಕು ಎನ್ನುವುದು ಪ್ರತಿಭಟನಾ ನಿರತರ ಬೇಡಿಕೆಯಾಗಿದೆ ಎಂದು ಉಲ್ಲೇಖಿಸಿದ ಮುಖ್ಯಮಂತ್ರಿಗಳು ದೇವದಾಸಿಯರ ಪುನರ್ವಸತಿ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೇಳಿದರು. ಈ ಬಗ್ಗೆ ಕೆಲ ಹೊತ್ತು ಚರ್ಚೆ ನಡೆದ ಬಳಿಕ ದೇವದಾಸಿ ಸಮಸ್ಯೆ ಮತ್ತು ಪುನರ್ವಸತಿ ಬಗ್ಗೆ ಸಮಗ್ರ ವರದಿ ಸಿದ್ದಪಡಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕು ಪತ್ರ ಸಮರ್ಪಕವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಕಾಡಿನಿಂದ ಹೊರಗೆ ಹಾಕಬಾರದು ಎಂದು ಸೂಚಿಸಿದರು. ಸಭೆಗೆ ಅಧಿಕಾರಿಗಳು ನೀಡಿರುವ ಅನುಪಾಲನಾ ವರದಿಯಲ್ಲಿ ಮುಂದಿನ ಬಾರಿ ಜಿಲ್ಲಾವಾರು ಅಂಕಿ ಅಂಶ ನಮೂದಿಸಲು ಸೂಚಿಸಲಾಯಿತು.