ಮೈಸೂರು, ಜ.29– ಸುಮಾರು 80 ವರ್ಷಗಳ ಹಳೆಯ ಪಾರಂಪರಿಕ ಕಟ್ಟಡ ಇಲ್ಲಿನ ಮಹಾರಾಣಿ ಕಾಲೇಜಿನ ನೆಲಸಮದ ವೇಳೆ ಗೋಡೆಯೊಂದು ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ. ಮೈಸೂರಿನ ಗೌಸಿಯಾ ನಗರದ ನಿವಾಸಿ ಮಹಮದ್ ಸದ್ದಾಮ್ (32) ಮೃತ ಕಾರ್ಮಿಕ ಎಂದು ತಿಳಿದುಬಂದಿದೆ.
ಸುಮಾರು 15ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡವನ್ನು ಒಡೆಯುವ ಕಾರ್ಯದಲ್ಲಿ ತೊಡಗಿದ್ದು, ನಿನ್ನೆ ರಾತ್ರಿ ಏಕಾಏಕಿ ಗೋಡೆಯೊಂದು ಕುಸಿದಿದೆ.ಈ ವೇಳೆ ಸುಮಾರು 15 ಕಾರ್ಮಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರೆ, ಒಬ್ಬ ಅವಶೇಷಗಳಡಿ ಸಿಲುಕಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಕಳೆದ ನಾಲ್ಕು ದಿನಗಳಿಂದ ಅದನ್ನು ಒಡೆದು ಹಾಕುವ ಕಾರ್ಯ ನಡೆಯುತ್ತಿದೆ. ಶಾಸಕ ಹರೀಶ್ಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮಹಡಿ ಮೇಲೆ ನಾವು ಕೆಲಸ ಮಾಡುತ್ತಿದ್ದೆವು. ಕೆಳಗೆ ಸದ್ದಾಂ ಕಾರ್ಯನಿರ್ವಹಿಸುತ್ತಿದ್ದ. ಏಕಾಏಕಿ ಗೋಡೆ ಹಾಗೂ ಚಾವಣಿ ಕುಸಿದ ಹಿನ್ನೆಲೆಯಲ್ಲಿ ನಾವು ಹೊರಗೆ ಬಂದೆವು. ಆದರೆ, ಸದ್ದಾಂ ಕಾಣುತ್ತಿಲ್ಲ ಎಂದು ಅವರ ಜತೆಗಾರರು ತಿಳಿಸಿದ್ದಾರೆ.
ಘಟನೆಗೆ ಗುತ್ತಿಗೆದಾರರೇ ಕಾರಣರಾಗಿದ್ದಾರೆ. ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.