ಕಾರವಾರ, ಜ.29- ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.ಕಾರಿನಲ್ಲಿ ಕಬ್ಬಿಣದ ಬಾಕ್ಸ್ ನಲ್ಲಿ ಕಂಡುಬಂದಿದ್ದು, ಅದರಲ್ಲಿ ಸುಮಾರು 1.15 ಕೋಟಿ ರೂ. ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಸಂಜೆ ಅಂಕೋಲಾದ ರಾಮನಗುಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದ ಖಾಲಿ ಜಾಗದಲ್ಲಿ ಕಾರೊಂದನ್ನು ನಿಲ್ಲಿಸಲಾಗಿತ್ತು.ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ದಾವಿಸಿದ ಅವರು, ಪರಿಶೀಲನೆ ನಡೆಸಿದಾಗ ಕಬ್ಬಿಣದ ಬಾಕ್ಸ್ ಕಂಡುಬಂದಿದೆ. ಅದನ್ನು ತೆರೆದು ನೋಡಿದಾಗ ಹಣದ ಕಂತೆ ಪತ್ತೆಯಾಗಿದೆ.
ಬೆಂಗಳೂರು ನೋಂದಣಿಯ ನಂಬರ್ ಪ್ಲೇಟ್ ಹೊಂದಿದ್ದು, ಅದನ್ನು ಪರಿಶೀಲಿಸಿದಾಗ ಅದು ಆಲ್ಟೋ ಕಾರ್ ನೋಂದಣಿಯಾಗಿತ್ತು. ಆದರೆ, ಇದು ಹೋಂಡೈ ಕ್ರೀಟಾ ಕಾರ್ ಆಗಿದ್ದು, ನಕಲಿ ನಂಬರ್ ಪ್ಲೇಟ್ ಬಳಸಿಕೊಂಡು ಅಕ್ರಮವಾಗಿ ಈ ಹಣವನ್ನು ಸಾಗಿಸಲಾಗುತ್ತಿದೆ ಎಂಬ ಅನುಮಾನ ಮೂಡಿದೆ.
ಇನ್ನು ಕಾರಿನ ಸೀಟನ್ನು ಕೀಳಲಾಗಿದ್ದು, ಗಾಜುಗಳನ್ನೂ ಒಡೆದು ಹಾಕಿದ್ದಾರೆ. ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದರೋಡೆ ಮಾಡಿ ಹಣ ಸಾಗಿಸುತ್ತಿರುವ ಅನುಮಾನವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.