ಪ್ರಯಾಗ್‌ರಾಜ್ (ಉ.ಪ್ರ),ಜ.29- ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಲು ಭಾರೀ ಸಂಖ್ಯೆಯಲ್ಲಿ ದೇಶ-ವಿದೇಶಗಳಿಂದ ಕೋಟ್ಯಾಂತರ ಜನರು ಆಗಮಿಸಿದ್ದರಿಂದ ಏಕಾಏಕಿ ಉಂಟಾದ ಕಾಲ್ತುಳಿದಿಂದ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿ 50 ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಪ್ರಯಗ್‌ರಾಜ್‌ನಲ್ಲಿ ಸಂಭವಿಸಿದೆ.
ಮೌನಿ ಅಮವಾಸ್ಯೆಯಾದ ಇಂದು ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ಮುಂಜಾನೆ ಅಮೃತ ಸ್ನಾನ ನಡೆಯಬೇಕಿತ್ತು. ಇದಕ್ಕಾಗಿ ಸುಮಾರು 15 ಕೋಟಿ ಜನರು ಕುಂಭಮೇಳಕ್ಕೆ ಆಗಮಿಸಿದ್ದರು. ಅತಿಯಾದ ಜನಸಂದಣಿಯಿಂದಾಗಿ ಅವಘಡ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ಎರಡನೇ ಅಮೃತಸ್ನಾನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಈ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ, ಮುನ್ನುಗ್ಗಲು ಯತ್ನಿಸಿದ ವೇಳೆ ಕಾಲ್ತುಳಿತ ಉಂಟಾಗಿ 20 ಮಂದಿ ಕೊನೆಯುಸಿರೆಳೆದಿದ್ದಾರೆ. ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳದಲ್ಲಿ 40ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಬೆಳಗಿನಜಾವ 1 ಗಂಟೆ ಸುಮಾರಿಗೆ ಸಂಗಮ್ ಸುತ್ತಮುತ್ತ ಜನಸಂದಣಿ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಲು 45 ಘಾಟ್‌ಗಳನ್ನು ನಿರ್ಮಿಸಲಾಗಿದ್ದರೂ, ಜನರು ಮುಖ್ಯ ಸಂಗಮದಲ್ಲಿ ಮಾತ್ರ ಸ್ನಾನ ಮಾಡಬೇಕೆಂದು ಹಠ ಮಾಡುತ್ತಿದ್ದರು. ಇದರಿಂದಾಗಿ ಜನಸಮೂಹ ಒಬ್ಬರನ್ನೊಬ್ಬರು ತಳ್ಳುತ್ತಾ ಮುಂದಕ್ಕೆ ಚಲಿಸಲು ಪ್ರಾರಂಭಿಸಿತು. ಇದರಿಂದಾಗಿ ಜನಸಂದಣಿಯನ್ನು ನಿಯಂತ್ರಿಸಲು ಹಾಕಲಾದ ಬ್ಯಾರಿಕೇಡ್‌ಗಳು ಮುರಿಯಲು ಪ್ರಾರಂಭಿಸಿದವು.
ಶೀಘ್ರದಲ್ಲೇ ಕೆಲವು ಮಹಿಳೆಯರಿಗೆ ಉಸಿರುಗಟ್ಟಿದೆಮತ್ತು ಕೆಳಗೆ ಬೀಳಲು ಪ್ರಾರಂಭಿಸಿದರು. ಇದರಿಂದಾಗಿ ಕಾಲ್ತುಳಿತ ಮತ್ತಷ್ಟು ಹೆಚ್ಚಾಯಿತು ಮತ್ತು ಜನರು ಕೂಗಾಡಲು ಮತ್ತು ಕಿರುಚಲು ಪ್ರಾರಂಭಿಸಿದರು. ಆ ದೃಶ್ಯ ತುಂಬಾ ಭಯಾನಕವಾಗಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ನೂಕುನುಗ್ಗಲು ಸಂಭವಿಸಿದಾಗ ಮತ್ತು ಬ್ಯಾರಿಕೇಡ್ ಮುರಿದು ಜನರು ಪರಸ್ಪರರ ಮೇಲೆ ಬಿದ್ದಾಗ ಕೆಲವು ಮಹಿಳೆಯರಿಗೆ ಭಾರೀ ಗುಂಪಿನಲ್ಲಿ ಉಸಿರುಗಟ್ಟಿದ ಅನುಭವವಾಗಿದೆ. ಕಾಲ್ತುಳಿತದ ನಂತರ, ಮಹಾಕುಂಭದ ವ್ಯವಸ್ಥೆಯಲ್ಲಿ ಆಡಳಿತವು ಬದಲಾವಣೆಗಳನ್ನು ಮಾಡಿದೆ. ಸಂಗಮ ನಗರಕ್ಕೆ ಭಕ್ತರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ಜನರ ಗುಂಪನ್ನು ನಗರದ ಹೊರಗೆ ನಿಲ್ಲಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಹೆಚ್ಚಿನ ಜನಸಂದಣಿಯಿಂದ ಉಂಟಾದ ಗೊಂದಲದಲ್ಲಿ ಗಾಯಗೊಂಡವರನ್ನು ಸೆಂಟ್ರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಭಕ್ತರ ಚಪ್ಪಲಿ, ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.