ಬೆಂಗಳೂರು,ಜ.29- ಪ್ರತಿದಿನ ಮೊಬೈಲ್ ಬಳಸುತ್ತಿದ್ದಕ್ಕೆ ಪೋಷಕರು ಬುದ್ದಿವಾದ ಹೇಳಿದ್ದರಿಂದ ನೊಂದ ಬಾಲಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಾಜಿ ಲೇಔಟ್ನ ಧ್ರುವ(13) ಮೃತಪಟ್ಟ ಬಾಲಕ.ಈತ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಯಿಂದ ಬಂದ ತಕ್ಷಣ ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದರಿಂದ ಪೋಷಕರು ಬುದ್ದಿವಾದ ಹೇಳಿ ಓದುವಂತೆ ಸಲಹೆ ನೀಡಿದ್ದಾರೆ. ಇದರಿಂದ ಆತ ಬೇಜಾರು ಮಾಡಿಕೊಂಡಿದ್ದ. ಮೊನ್ನೆ ಸಂಜೆ ಧ್ರುವ ಶಾಲೆಯಿಂದ ಮನೆಗೆ ಬಂದಿದ್ದಾನೆ. ಆ ವೇಳೆ ಮನೆಯಲ್ಲಿ ತಂಗಿ ಮಾತ್ರ ಇದ್ದಳು. ಪೋಷಕರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು.
ಈತ ತಂಗಿಗೆ ಗೊತ್ತಾಗದಂತೆ ರೂಮಿಗೆ ಹೋಗಿ ಕಿಟಕಿಗೆ ದಾರದಿಂದ ನೇಣು ಬಿಗಿದುಕೊಂಡಿದ್ದಾನೆ. ಕೆಲ ಸಮಯದ ಬಳಿಕ ತಂಗಿ ರೂಮಿಗೆ ಹೋದಾಗ ಧ್ರುವ ನೇಣು ಹಾಕಿಕೊಂಡಿರುವುದನ್ನು ನೋಡಿ ಕಿರುಚಿದ್ದಾಳೆ.
ಅಷ್ಟರಲ್ಲಿ ಹೊರಗೆ ಹೋಗಿದ್ದ ತಾಯಿ ಬಂದು ನೋಡಿ ತಕ್ಷಣ ನೇಣಿನ ಕುಣಿಕೆಯಿಂದ ಮಗನನ್ನು ಬಿಡಿಸಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ದಾರಿ ಮಧ್ಯೆ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.