ಭವ್ಯ, ನವ್ಯ ಭಾರತಕ್ಕೆ ಇಂದು 77ನೇ ಗಣರಾಜ್ಯೋತ್ಸವ ಸಂಭ್ರಮ. ನಮ ರಾಷ್ಟ್ರವು ತನ್ನದೇ ಆದಂತಹ ಸಂವಿಧಾನವನ್ನು ಅಳವಡಿಸಿಕೊಂಡು 76 ಸಂವತ್ಸರಗಳು ಸಂದಿವೆ. ಇಂದು ಸಮಸ್ತ ಭಾರತೀಯರ ಪಾಲಿಗೆ ಸಡಗರದ ಸುದಿನ. ಸಂವಿಧಾನದ ಕರ್ತವ್ಯಗಳನ್ನು ಕೃತಜ್ಞತೆಯಿಂದ ಸರಿಸುವ ಸುದಿನ.
ಇದೇ ಸಂದರ್ಭದಲ್ಲಿ ಓದುಗರ ಕಣಣಿಯಾಗಿರುವ ಈ ಸಂಜೆ ಪತ್ರಿಕೆಗೂ ಜನದಿನದ ಸಂಭ್ರಮ. ಕನ್ನಡಿಗರಿಂದ ಕನ್ನಡಿಗರಿಗಾಗಿ ಜನ ತಳೆದ ಪತ್ರಿಕೆಗೆ ಈಗ 36ರ ಹರಯ. ಸಂಜೆ ದಿನಪತ್ರಿಕೆಗಳು ಹುಟ್ಟುವುದು ಕಷ್ಟ, ಹುಟ್ಟಿದರೂ ಉಳಿದು ಬೆಳೆಯುವುದು ಇನ್ನೂ ಕಷ್ಟ ಎಂಬ ಭಾವನೆ ಇದ್ದ ದಿನಗಳಲ್ಲಿ ಪ್ರಾರಂಭವಾದ ಪತ್ರಿಕೆಯು ಈ ಎಲ್ಲ ಭಾವನೆಗಳನ್ನೂ ಹುಸಿ ಮಾಡಿ ಸದೃಢವಾಗಿ ಮುಂದುವರಿಯುತ್ತಿದೆ. ಕನ್ನಡಿಗರ ಮಡಿಲನ್ನು ಅಲಂಕರಿಸುತ್ತಿದೆ. ಈ ಬೆಳವಣಿಗೆಗೆ ಓದುಗರ ಒಪ್ಪಿಗೆ, ಅಪ್ಪುಗೆಯೇ ಮೂಲ ಕಾರಣ.
ಪತ್ರಿಕೆಯು ತನ್ನ ಈ ಸುದೀರ್ಘವಾದ ಹಾದಿಯಲ್ಲಿ ಓದುಗರ ಆಶಯಗಳಿಗೆ ಕಿಂಚಿತ್ತೂ ಭಂಗ ತರದೆ ನಿರ್ಭೀತವಾಗಿ, ನಿಷ್ಪಕ್ಷಪಾತವಾಗಿ, ಪಾರದರ್ಶಕತೆಯಿಂದ ಕೂಡಿದ ಕೆಲಸ ಮಾಡುತ್ತಿದೆ. ಇಂತಹ ವಸ್ತುನಿಷ್ಠತೆಯೇ ಈ ಸಂಜೆಯ ಬಂಡವಾಳ. ತನ್ನ ಈ ಪಯಣದಲ್ಲಿ ಪತ್ರಿಕೆಯು ರಾಜ್ಯದ ಹತ್ತು ಹಲವು ಬೆಳವಣಿಗೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕನ್ನಡಿಗರು ಹಾಗೂ ಕನ್ನಡ ಭಾಷೆಯ ಘನತೆಗೆ ಕುಂದಾಗುವಂತಹ ಪ್ರತಿಯೊಂದು ಸಂದರ್ಭದಲ್ಲಿ ಪತ್ರಿಕೆಯು ನಾಡು-ನುಡಿ ಪರವಾದ ತನ್ನ ನಿಷ್ಠೆಯನ್ನು ಮೆರೆದಿದೆ. ಸಕಾರಾತಕ ಹಾಗೂ ನಕಾರಾತಕವಾದ ಎಲ್ಲ ಘಟನೆಗಳನ್ನೂ ಯಥಾವತ್ತಾಗಿ ಓದುಗರಿಗೆ ತಲುಪಿಸುತ್ತ ಬಂದಿದೆ.
ಇತ್ತೀಚಿನ ಆವಿಷ್ಕಾರವಾಗಿರುವ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಕರ್ನಾಟಕವು ಗಮನಾರ್ಹ ಬೆಳವಣಿಗೆ ಕಾಣುತ್ತಿದೆ. ಈಗಾಗಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯವು ವಾಯುಯಾನ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲೂ ದಾಪುಗಾಲು ಹಾಕುತ್ತಿದೆ. ಜ್ಞಾನ, ಕೌಶಲ್ಯಾಭಿವೃದ್ಧಿ, ನಾವೀನ್ಯತೆಯಿಂದ ಕೂಡಿದ ಉದ್ದಿಮೆಗಳಿಗಾಗಿ 5800 ಎಕರೆ ಪ್ರದೇಶದಲ್ಲಿ ಕ್ವಿನ್ ಸಿಟಿಯು ಸ್ಥಾಪನೆಗೊಳ್ಳುತ್ತಿ ರುವುದು ಅಭಿವೃದ್ಧಿಯ ಸಂಕೇತ.
ಬಹಳ ಕಾಲದಿಂದ ನಿರ್ಲಕ್ಷಿಸಲ್ಪ ಟ್ಟಿರುವ ದೇಶದ ಅಸಂಖ್ಯಾತ ಯುವಶಕ್ತಿಯನ್ನು ಧ್ರುವೀಕರಿಸಿ ಆ ವರ್ಗಕ್ಕೆ ಆರ್ಥಿಕ ಹಾಗೂ ಔದ್ಯೋಗಿಕ ಬಲವನ್ನು ತುಂಬಬೇಕಾಗಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಗಮನ ಹರಿಸಲೇಬೇಕಾಗಿದೆ. ನಮ ನೆರೆಯ ಕೆಲ ರಾಷ್ಟ್ರಗಳಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ನಡೆದರೂ ಕೂಡ ಅದರಿಂದ ನಮ ದೇಶದ ಮೇಲೆ ಯಾವುದೇ ದುಷ್ಪರಿಣಾಮ ಆಗಿಲ್ಲವೆಂದರೆ ಅದಕ್ಕೆ ನಮ ದೇಶದ ವೈವಿಧ್ಯದಲ್ಲಿ ಏಕತೆ ಎಂಬ ಮೂಲಮಂತ್ರವೇ ಕಾರಣ. ಇಂತಹ ಬಲವಾದ ಒಗ್ಗಟ್ಟು ಅತ್ಯಗತ್ಯ.
ಸದ್ಯದ ಬೆಳವಣಿಗೆಯಲ್ಲಿ ದೇಶದಲ್ಲಿ ಸುಮಾರು ಕೋಟಿಗೂ ಹೆಚ್ಚು ಬಾಂಗ್ಲಾ ದೇಶಿಗರು ನೆಲೆಸಿದ್ದಾರೆ. ಅದರಲ್ಲೂ ಕರ್ನಾಟಕದಲ್ಲೇ 60 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ ಎಂಬ ಮಾಹಿತಿ ಇದೆ. ಇದು ರಾಜ್ಯವಲ್ಲದೇ ದೇಶಕ್ಕೇ ಎಚ್ಚರಿಕೆಯ ಗಂಟೆಯಾಗಿದೆ. ಕೂಡಲೇ ಎಚ್ಚೆತ್ತು ಅಕ್ರಮ ವಲಸಿಗರನ್ನು ದೇಶದಿಂದ ಹೊರಗಟ್ಟುವುದು ಅನಿವಾರ್ಯ. ಈ ನಡುವೆ ಡ್ರಗ್‌್ಸ ಹಾವಳಿ ಮಿತಿ ಮೀರಿದ್ದು, ಇದನ್ನು ನಿಯಂತ್ರಿಸಿ ಯುವ ಸಮುದಾಯವನ್ನು ರಕ್ಷಿಸುವ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದೆ. ಇಂದು ಬಹಳ ದೊಡ್ಡಮಟ್ಟದಲ್ಲಿ ತಾಂತ್ರಿಕತೆ, ಡಿಜಿಟಲ್ ತಂತ್ರಜ್ಞಾನವು ವಿಕಸಿಸುತ್ತಿದ್ದು, ಇದರಿಂದ ಹತ್ತು ಹಲವು ಪ್ರಯೋಜನಗಳಾಗಿವೆ. ಜತೆಗೆ ಕಿಡಿಗೇಡಿಗಳಿಂದಾಗಿ ಈ ತಾಂತ್ರಿಕತೆಯು ಶಾಪವೂ ಆಗುತ್ತಿದೆ. ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಮುಂತಾದ ಕೃತ್ಯಗಳಿಂದ ಹಲವು ನಾಗರಿಕರು ತಮ ಜೀವಿತಾವಧಿಯ ಉಳಿತಾಯವನ್ನೆಲ್ಲ ಕಳೆದುಕೊಂಡು ಕಂಗಾಲಾಗಿದ್ದಾರೆ.
ಇಂಥಹ ದುಷ್ಕೃತ್ಯಗಳಿಗೆ ಜರೂರಾಗಿ ಕಡಿವಾಣ ಹಾಕಲೇಬೇಕಾಗಿದೆ. ಕೃಷಿ, ಕೈಗಾರಿಕೆಯಷ್ಟೇ ಪ್ರಮುಖವಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ತಕ್ಕಮಟ್ಟಿನ ಪ್ರಗತಿ ಆಗುತ್ತಿದೆ. ಸರ್ಕಾರಿ ಶಾಲೆಗಳ ಮೂಲ ಸೌಲಭ್ಯಗಳನ್ನು ಸಂಪೂರ್ಣವಾಗಿ ಪೂರೈಸಲಾಗದಿದ್ದರೂ ಕೂಡ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದೆ. ಭವಿಷ್ಯ ಭಾರತದ ಪ್ರಜೆಗಳ ಸೃಷ್ಟಿಗೆ ಕೌಶಲ್ಯವರ್ಧಿತ ಕಲಿಕೆ ಅಳವಡಿಸಲಾಗುತ್ತಿದೆ.
ಇದೆಲ್ಲದರ ನಡುವೆ ರಾಜ್ಯದ ರಾಜಕೀಯ ರಂಗವೂ ಸೇರಿದಂತೆ ಕೆಲವು ಕಡೆ ಅನಪೇಕ್ಷಿತ ಬೆಳವಣಿಗೆಗಳು ನಡೆದಿರುವುದು ದುರದೃಷ್ಟಕರ. ಭ್ರಷ್ಟಾಚಾರವೆಂಬ ಪಿಡುಗು ಮತ್ತೆ ತಲೆ ಎತ್ತುತ್ತಿದ್ದು, ಇದರಿಂದ ಹಲವು ಅಮಾಯಕರು ಪರಿತಪಿಸುತ್ತಿದ್ದಾರೆ. ಲೋಕಾಯುಕ್ತ ಬಗೆಯುತ್ತಿದ್ದಷ್ಟೂ ಭ್ರಷ್ಟಾಚಾರ ಪ್ರಕರಣಗಳು ಬಯಲಾಗುತ್ತಲೇ ಇರುವುದು ವಿಪರ್ಯಾಸ. ಶಾಸಕಾಂಗವು ತನ್ನ ಹಿಡಿತ ಕಳೆದುಕೊಂಡಾಗ ಕಾರ್ಯಾಂಗವೂ ಹಳಿ ತಪ್ಪುತ್ತದೆ. ಇದರ ದುಷ್ಪರಿಣಾಮಗಳಿಂದ ನಾಗರಿಕರು ನಲುಗುವಂತಾಗುತ್ತದೆ. ಇದೆಲ್ಲ ಏನೇ ಇರಲಿ ಪ್ರಜಾಪ್ರಭುತ್ವದ ಆಶಯದ ಪ್ರಕಾರ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಸ್ಪಂದಿಸಿದಾಗ ಮಾತ್ರ ನಾಗರಿಕರಿಗೆ ನೆಮದಿ. ಇದೇ ಈ ಸಂಜೆಯ ಆಶಯ ಕೂಡ.
ಪತ್ರಿಕೆಯ ಈ ಸುದೀರ್ಘ ಹಾದಿಯಲ್ಲಿ ಓದುಗರು, ಜಾಹೀರಾತು ದಾರರು ಮಾತ್ರವಲ್ಲದೆ ರಾಜಕೀಯ, ಕಲೆ, ಸಂಸ್ಕೃತಿ, ಅಧಿಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯರು ತಮ ಅಮೂಲ್ಯವಾದ ಸಹಕಾರ ನೀಡುತ್ತಾ ಬಂದಿದ್ದಾರೆ. ಜತೆಗೆ ಪತ್ರಿಕೆಯನ್ನು ಮನೆಮನೆಗಳಿಗೆ ತಲುಪಿಸುವ ಏಜೆಂಟ್ ಬಂಧುಗಳು ಹಾಗೂ ಕಾಯಕ ಮಿತ್ರರನ್ನು ಮರೆಯುವಂತಿಲ್ಲ. ಇವರೆಲ್ಲರಿಗೂ ಹಾಗೂ ನಾಡಿನ ಸಮಸ್ತ ಜನತೆಗೂ ಹೃತ್ಪೂರ್ವಕ ಕೃತಜ್ಞತೆಗಳು.
ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
- ಸಂಪಾದಕ
