ಬೆಂಗಳೂರು,ಜ.31-ಸಾಮಾಜಿಕ ಜಾಲತಾಣ ಪೇಸ್ಬುಕ್ನಲ್ಲಿ ನಕಲಿ ಖಾತೆಯಿಂದ ಸಾರ್ವಜನಿಕರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಲಕ್ಷಾಂತರ ರೂ ದೋಚುತ್ತಿದ್ದ 7 ಸೈಬರ್ ವಂಚಕರನ್ನು ಬಂಧಿಸಿರುವ ಆಡುಗೋಡಿ ಠಾಣೆ ಪೊಲೀಸರು, ಬಂಧಿತರಿಂದ 9 ಮೊಬೈಲ್, 11 ಬ್ಯಾಂಕ್ ಪಾಸ್ಬುಕ್, 8 ಚೆಕ್ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಜ.7 ರಂದು ನಗರದ ನಿವಾಸಿಯೊಬ್ಬರಿಗೆ ಫೇಸ್ಬುಕ್ನ ನಕಲಿ ಖಾತೆಯಿಂದ ಸೈಬರ್ ವಂಚಕರು ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದು, ಪ್ರೊಫೈಲ್ನಲ್ಲಿ ಪಿರ್ಯಾದುದಾರರ ಹಳೆಯ ಸ್ನೇಹಿತನ ಪೊಟೋ ಇರುವುದನ್ನು ಕಂಡು ಅವರು ನಿಜವೆಂದು ನಂಬಿ, ಫ್ರೆಂಡ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿದ್ದರು. ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದವ ತಾನು ದುಬೈನಲ್ಲಿ ಇರುವುದಾಗಿ ತಿಳಿಸಿದ್ದಾನೆ.
ಮುಂದಿನ ದಿನಗಳಲ್ಲಿ ತಾನು ವಾಪಸ್ ಭಾರತಕ್ಕೆ ಬರುವುದಾಗಿ,ತನ್ನ ಬಳಿ ಇರುವ ಅಪಾರವಾದ ಹಣ ತೆಗೆದುಕೊಂಡು ಭಾರತಕ್ಕೆ ಬಂದರೆ ಹೆಚ್ಚಿನ ತೆರಿಗೆಯನ್ನು ನೀಡಬೇಕಾಗಿರುತ್ತದೆ. ಆದ್ದರಿಂದ ತನ್ನ ಬಳಿ ಇರುವ ಹಣವನ್ನು ನಿಮ ಬ್ಯಾಂಕ್ ಖಾತೆಗೆ ಜಮಾ ಮಾಡಿ, ವಾಪಸ್ ಬೆಂಗಳೂರಿಗೆ ಬಂದ ನಂತರ ವಾಪಸ್ ಹಣ ಪಡೆಯುವುದಾಗಿ ವಂಚಕ ತಿಳಿಸಿದ್ದಾನೆ.
ಇದನ್ನು ನಂಬಿದ ಪಿರ್ಯಾದಾರರು ವಂಚಕನಿಗೆ ಬ್ಯಾಂಕ್ ಖಾತೆಯ ನಂಬರ್ನ್ನು ನೀಡಿದ್ದಾರೆ. ನಿಮ ಬ್ಯಾಂಕ್ ಖಾತೆಗೆ 7,85,700 ಹಣವನ್ನು ವರ್ಗಾವಣೆ ಮಾಡಿರುವಂತಹ ಸಿಟಿ ಬ್ಯಾಂಕ್ನ ನಕಲಿ ರಸೀದಿಯನ್ನು ಫೇಸ್ಬುಕ್ ಮುಖಾಂತರ ಕಳುಹಿಸಿ, ಈ ಹಣವು 24 ಗಂಟೆಗಳಲ್ಲಿ ಪಿರ್ಯಾದುದಾರರ ಖಾತೆಗೆ ಕ್ರೆಡಿಟ್ ಆಗುವುದಾಗಿಯೂ ಸಹ ತಿಳಿಸಿರುತ್ತಾನೆ.
ಮಾರನೆಯ ದಿನ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದ ಅದೇ ವಂಚಕ ಫೇಸ್ಬುಕ್ ಮುಖಾಂತರ ಮತ್ತೆ ಸಂಪರ್ಕಿಸಿ ತಾನು ಸೌದಿ ಅರೇಬಿಯಾ ದೇಶದ ಪೊಲೀಸ್ ಠಾಣೆಯೊಂದರಲ್ಲಿ ತೊಂದರೆಗೆ ಸಿಲುಕಿದ್ದು, ತುರ್ತಾಗಿ 1.95 ಲಕ್ಷ ಹಣದ ಆವಶ್ಯಕತೆ ಇದ್ದು, ಈ ಹಣವನ್ನು ಓರ್ವ ಏಜೆಂಟ್ನ ಮೊಬೈಲ್ ನಂಬರ್ಗೆ ಕಳುಹಿಸುವಂತೆ ತಿಳಿಸಿದ್ದು,
ಇದನ್ನು ನಂಬಿದ ಆತನು ನೀಡಿದ್ದ ಮೊಬೈಲ್ ನಂಬರ್ಗೆ ಮೆಸೇಜ್ ಮುಖಾಂತರ ಸಂಪರ್ಕಸಿ, ಬ್ಯಾಂಕ್ ಖಾತೆಯ ನಂಬರ್ನ್ನು ಪಡೆದು 5,000 ಹಣವನ್ನು ಐಎಂಪಿಎಸ್ ಮೂಲಕ ಸಂದಾಯ ಮಾಡಿ ನಂತರ ಇದೇ ರೀತಿ ಹಂತ ಹಂತವಾಗಿ ಒಟ್ಟು 1,50,000 ಹಣವನ್ನು ವಂಚಕ ಪಡೆದುಕೊಂಡಿರುತ್ತಾನೆ.
24 ಗಂಟೆಯಾದ ನಂತರ ಬ್ಯಾಂಕ್ ಖಾತೆಯ ಆಕೌಂಟ್ ಸ್ಟೇಂಟ್ ಮೆಂಟ್ ನ್ನು ಪರಿಶೀಲಿಸಿದಾಗ, ಯಾವುದೇ ಹಣವು ನನ್ನ ಖಾತೆಗೆ ಜಮಾವಾಗಿಲ್ಲದಿರುವುದನ್ನು ಅರಿತು, ತಾನು ಮೋಸ ಹೋಗಿರುವ ಬಗ್ಗೆ ತಿಳಿದು ಅಡುಗೋಡಿ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲಿಸಿದ್ದರು.
ಪ್ರಕರಣದ ದಾಖಲಿಸಿ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಹಣ ವರ್ಗಾವಣೆಯಾದ ಬ್ಯಾಂಕ್ನ ಮಾಹಿತಿಯನ್ನು ಕಲೆ ಹಾಕಿ, ದಾಖಲೆಗಳನ್ನು ಪಡೆದು, ವರ್ಗಾವಣೆಯಾದ ಹಣದ ವಿವರವನ್ನು ಪಡೆದು ತನಿಖೆಯನ್ನು ಕೈಗೊಂಡು ಮೈಸೂರಿನಲ್ಲಿರುವ ಬ್ಯಾಂಕ್ ಆಪ್ ಮಹರಾಷ್ಟ್ರ ಖಾತೆದಾರನಿಗೆ ಹಣ ವರ್ಗಾವಣೆಯಾದ ಬಗ್ಗೆ ಮಾಹಿತಿಯನ್ನು ಪಡೆದು, ಜ.17ರಂದು ರಂದು ಒಬ್ಬ ವ್ಯಕ್ತಿಯನ್ನು ಮೈಸೂರಿನ ಬೆಳವಾಡಿಯಲ್ಲಿರುವ ಆತನ ವಾಸದ ಮನೆಯಿಂದ ವಶಕ್ಕೆ ಪಡೆಯಲಾಯಿತು.
ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ವಂಚನೆ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಮತ್ತೋಬ್ಬ ಸಹಚರನ ಬಗ್ಗೆ ಮಾಹಿತಿಯನ್ನು ನೀಡಿದ್ದ . ಅದೇ ದಿನ ಮೈಸೂರಿನ ರಿಂಗ್ ರಸ್ತೆಯಲ್ಲಿ ಈ ಸಹಚರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಇತರೆ ಇಬ್ಬರುಸಹಚರರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ಆ ಇಬ್ಬರು ಸಹಚರರನ್ನು ಮೈಸೂರಿನಲ್ಲಿರುವ ಮಂಡಿಮೊಹೊಲ್ಲಾದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಗೊತ್ತಾಗಿದೆ.
ನಂತರ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು,ಒಬ್ಬ ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಮೂವರು ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ
ಮೇರೆಗೆ ಜ.20 ಮೈಸೂರಿನ ರಿಂಗ್ರಸ್ತೆಯಲ್ಲಿ ಮೂವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಐದು ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ತನಿಖೆಯನ್ನು ಮುಂದುವರೆಸಿ, ಈ ನಾಲ್ವರು ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಅವರುಗಳು ವಾಸವಿರುವ ಮನೆಗಳಿಂದ ಒಟ್ಟು 09 ಮೊಬೈಲ್ ಫೋನ್, 11 ಬ್ಯಾಂಕ್ ಪಾಸ್ ಬುಕ್, 06 ಚೆಕ್ಬುಕ್, 31 ಎಟಿಎಂ ಕಾರ್ಡ್, 09 ಆಧಾರ್ ಕಾರ್ಡ್ಗಳ ವಶಪಡಿಸಿಕೊಳ್ಳಲಾಯಿತು.
ನಂತರ ಆರೋಪಿತರು ತೆರೆದಿದ್ದ ವಿವಿಧ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಆರೋಪಿತರಿಂದ ಮೋಸ ಹೋಗಿದ್ದ ಸಾರ್ವಜನಿಕರು ಸೈಬರ್ ಹೆಲ್ಪ್ ಲೈನ್ ನಂಬರ್ 1930ಕ್ಕೆ ನೀಡಿದ ದೂರಿನ ಆಧಾರದ ಮೇರೆಗೆ ಒಟ್ಟು 28 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಅಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ಅವರ ಮಾರ್ಗದರ್ಶನದಲ್ಲಿ, ಮಡಿವಾಳ ಉಪವಿಭಾಗದ ಎಸಿಪಿ ಕೆ.ಸಿ.ಲಕ್ಷ್ಮೀನಾರಾಯಣ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಆಡುಗೋಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವಿಕುಮಾರ ಮತ್ತವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
