ಪ್ರಯಾಗ್ರಾಜ್,ಜ.31- ಇತ್ತೀಚೆಗಷ್ಟೇ ಬಾಲಿವುಡ್ ಚಿತ್ರರಂಗ ತೊರೆದು ಸನ್ಯಾಸಿಯಾಗುವ ಮೂಲಕ ಆಧ್ಯಾತಿಕ ಜೀವನದತ್ತ ಕಾಲಿಟ್ಟಿದ್ದ ಚಿತ್ರನಟಿ ಮಮತಾ ಕುಲಕರ್ಣಿ ಅವರನ್ನು ಕಿನ್ನರ ಅಖಾಡದಿಂದ ವಜಾಗೊಳಿಸಲಾಗಿದೆ.ದೇಶದ್ರೋಹ ಆರೋಪದ ಮೇಲೆ ಕಿನ್ನರ ಅಖಾಡದ ಸ್ಥಾಪಕ ವಿಜಯ್ ದಾಸ್ ಅವರು ಮಮತಾ ಅವರನ್ನು ಅಖಾಡದಿಂದ ಹೊರ ಹಾಕಿದ್ದಾರೆ.
ದೇಶದ್ರೋಹದ ಆರೋಪ ಹೊತ್ತಿರುವ ಮಮತಾ ಕುಲಕರ್ಣಿಯನ್ನು ಅಖಾಡಕ್ಕೆ ಸೇರಿಸಿದ್ದು ಮಾತ್ರವಲ್ಲದೇ ತಮ ಅರಿವಿಲ್ಲದೆ ಅವರನ್ನು ಮಹಾಮಂಡಲೇಶ್ವರ ಎಂದು ನೇಮಿಸಿದ್ದಕ್ಕಾಗಿ ಮಹಾಮಂಡಲೇಶ್ವರ ಲಕ್ಷಿನಾರಾಯಣ ತ್ರಿಪಾಠಿ ಅವರನ್ನೂ ಸಹ ಕಿನ್ನರ ಅಖಾಡದಿಂದ ಹೊರಹಾಕಿದ್ದಾರೆ.
90ರ ದಶಕದಲ್ಲಿ ಬಾಲಿವುಡ್ ಸೇರಿದಂತೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಮಮತಾ ಕಿನ್ನರ ಅಖಾಡಕ್ಕೆ ಸೇರುವ ಮೂಲಕ ಮಹಾಮಂಡಲೇಶ್ವರಿ ಆಗಿದ್ದರು. ಮಮತಾ ಕುಲಕರ್ಣಿ ಹೆಸರನ್ನು ಬದಲಿಸಿಕೊಂಡು ಮಾಯಿ ಮಮತಾ ನಂದಗಿರಿ ಎಂದು ನಾಮಕರಣ ಮಾಡಿಕೊಂಡಿದ್ದರು.
ಕಳೆದ 2 ವರ್ಷಗಳಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ, 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿ ಲೌಕಿಕ ಜಗತ್ತನ್ನು ತೊರೆದು ಆಧ್ಯಾತಿಕ ಜಗತ್ತಿಗೆ ಇಳಿದಿದ್ದರು. ಮಮತಾ ಕುಲಕರ್ಣಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು.
ಬಳಿಕ ತಮ ಸ್ವಂತ ಪಿಂಡ ಪ್ರದಾನಮಾಡುವ ಮೂಲಕ ಕಿನ್ನರ ಅಖಾಡಕ್ಕೆ ಸೇರ್ಪಡೆಯಾಗಿ ಮಹಾಮಂಡಲೇಶ್ವರರಾಗಿದ್ದರು. ಇವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಿದ್ದರು. ನಟಿ ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದು, ವಕ್ತ ಹಮಾರಾ ಹೈ, ಕ್ರಾಂತಿವೀರ, ಸಬ್ಸೆ ಬಡಾ ಕಿಲಾಡಿ ಇನ್ನಿತರ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.