ಬೆಂಗಳೂರು,ಜ.26- ಸಿಗರೇಟ್ ಹಚ್ಚಲು ಲೈಟರ್ ಕೇಳುವ ವಿಚಾರದಲ್ಲಿ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದು ಮರಕ್ಕೆ ಕಾರು ಗುದ್ದಿಸಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೀರಸಂದ್ರದ ನಿವಾಸಿ ಪ್ರಶಾಂತ್ (35) ಮೃತಪಟ್ಟಿರುವ ಸ್ನೇಹಿತ. ಕೆ.ಆರ್‌ಪುರ ನಿವಾಸಿ ರೋಷನ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲಾಗಿದೆ.ಹೆಬ್ಬಗೋಡಿಯ ಕಮ್ಮಸಂದ್ರದಲ್ಲಿ ನಿನ್ನೆ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಹಾಗಾಗಿ ಕೆಲವು ಸ್ನೇಹಿತರೆಲ್ಲ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಸಂಜೆ 6 ಗಂಟೆ ವೇಳೆಗೆ ಪಂದ್ಯಾವಳಿ ಮುಗಿದ ಕಾರಣ ಹಲವರು ತೆರಳಿದ್ದಾರೆ.
ಕೆಲವು ಸ್ನೇಹಿತರು ಕ್ರೀಡಾಂಗಣದ ಒಂದು ಬದಿ ಕುಳಿತು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಪ್ರಶಾಂತ್ ಸಿಗರೇಟ್ ಹಚ್ಚಲು ರೋಷನ್ ಬಳಿ ಲೈಟರ್ ಕೇಳಿದ್ದಾನೆ. ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಜಗಳವಾಗಿದೆ. ಕೋಪದಲ್ಲಿ ಪ್ರಶಾಂತ್‌ಗೆ ರೋಷನ್ ಕೈಗಳಿಂದ ಹೊಡೆದಿದ್ದಾನೆ. ಸ್ಥಳದಲ್ಲೇ ಇದ್ದ ಸ್ನೇಹಿತರು ಜಗಳ ಬಿಡಿಸಿದ್ದಾರೆ.
ನಂತರ ರಾತ್ರಿ 8.30 ರ ಸುಮಾರಿನಲ್ಲಿ ರೋಷನ್ ತನ್ನ ಕಾರು ಚಲಾಯಿಸಿಕೊಂಡು ಹೋಗಲು ಮುಂದಾಗುತ್ತಿದ್ದಂತೆ ಪ್ರಶಾಂತ್ ಕಾರಿನ ಬಳಿ ಹೋಗಿ ಡೋರ್ ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ರೋಷನ್‌ಗೆ ನಿಂದಿಸಿದ್ದಾನೆ.
ಹೇಗಾದರೂ ಇಲ್ಲಿಂದ ಹೋಗಬೇಕೆಂದುಕೊಂಡು ರೋಷನ್ ಕಾರು ಚಲಾಯಿಸುತ್ತಿದ್ದರೂ ಪ್ರಶಾಂತ್ ಕಾರಿನ ಡೋರ್ ಕೈಬಿಟ್ಟಿಲ್ಲ. ಹಾಗಾಗಿ ರೋಷನ್ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿದಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಆ ವೇಳೆ ಪ್ರಶಾಂತ್ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ.ಈ ಘಟನೆಯ ದೃಶ್ಯಾವಳಿಗಳು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಹೆಬ್ಬಗೋಡಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
