ನವದೆಹಲಿ,ಫೆ.1- ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಸ್ಟಾರ್ಟ್‌ಅಪ್ ಕಂಪನಿಗಳಿಗೆ ಭರ್ಜರಿ ಕೊಡುಗೆ ಘೋಷಣೆ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಭಾರತವನ್ನು ಜಗತ್ತಿನಲ್ಲೇ ಮುಂಚೂಣಿಯ ಉತ್ಪಾದನಾ ಹಬ್ ಆಗಿ ಮಾಡುವ ಉದ್ದೇಶದಿಂದ ಸ್ಟಾರ್ಟ್‌ಅಪ್ ಕಂಪನಿಗಳಿಗೆ 20 ಕೋಟಿ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡಿಸಿದ ಅವರು, ಸ್ಟಾರ್ಟ್‌ಅಪ್ ಕಂಪನಿಗಳಿಗೆ 10 ಕೋಟಿ ರೂಪಾಯಿಯಿಂದ 20 ಕೋಟಿ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗವುದು ಎಂದರು.
ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ಮೈಕ್ರೋ ಕಂಪನಿಗಳಿಗೆ 5 ಲಕ್ಷ ರೂ.ವರೆಗೆ ಕ್ರೆಡಿಟ್ ಕಾರ್ಡ್ ನೀಡಲಾಗುವುದು. ಮೊದಲ ಹಂತದಲ್ಲಿ 10 ಲಕ್ಷ ಕಾರ್ಡ್ ವಿತರಣೆಯ ಗುರಿ ಹೊಂದಲಾಗಿದೆ. ಇಷ್ಟೇ ಅಲ್ಲದೆ, ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜಿಸಲು ಹೊಸ ಯೋಜನೆ ಜಾರಿಗೆ ತರಲಾಗುವುದು. ಇದರಿಂದ 22 ಲಕ್ಷ ಉದ್ದಿಮೆದಾರರಿಗೆ ಅನುಕೂಲವಾಗಲಿದೆ.
ಚರ್ಮೋದ್ಯಮವನ್ನು ಉತ್ತೇಜಿಸಲು ರಫ್ತು ಹೆಚ್ಚಿಸುವಲ್ಲಿ ಗಮನ ಹರಿಸಲಾಗುವುದು. ಈ ಮೂಲಕ ಮೇಕ್ ಇನ್ ಇಂಡಿಯಾ ಬ್ರ್ಯಾಂಡ್ ನಿರ್ಮಾಣದ ಗುರಿ ಹೊಂದಲಾಗಿದೆ. ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜಿಸಲು ಹೊಸ ಯೋಜನೆ ಜಾರಿಗೆ ತರಲಾಗವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಯಿತು.
ಇದಲ್ಲದೆ, ಮೊದಲ ಬಾರಿ ಉದ್ಯಮ ಆರಂಭಿಸುವ 5 ಲಕ್ಷ ಎಸ್‌ಸಿ, ಎಸ್‌ಟಿ ಮತ್ತು ಮಹಿಳೆಯರಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಅಲ್ಲಿ ಅವರಿಗೆ 2 ಕೋಟಿ ರೂಪಾಯಿ ವರೆಗಿನ ಸಾಲವನ್ನು ನೀಡಲಾಗುತ್ತದೆ ಎಂದು ಅವರು ಘೋಷಿಸಿದರು.
ದೇಶದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಖ್ಯೆ ಸುಮಾರು 1 ಕೋಟಿ ಇದ್ದು, 5.7 ಕೋಟಿ ಜನರು ಅವುಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಭಾರತವನ್ನು ವಿಶ್ವದಲ್ಲೇ ಅಗ್ರ ಪಂಕ್ತಿಯ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಇದು ಸಹಕಾರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.