ನವದೆಹಲಿ,ಫೆ.1- ಈ ಬಾರಿಯ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ಬ್ರಾಡ್ ಬ್ಯಾಂಡ್ ಸಂಪರ್ಕ ಸೇರಿದಂತೆ ಶಿಕ್ಷಣ ವಲಯಕ್ಕೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ.
ಇಂದು 2025-26ನೇ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಹಾಗೂ ತಾಂತ್ರಿಕವಾಗಿ ಅಭಿವೃದ್ಧಿ ಹೊಂದುವ ಉದ್ದೇಶದೊಂದಿಗೆ ಎಲ್ಲ ಸರ್ಕಾರಿ ಶಾಲೆಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದರು.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳನ್ನು ಹೆಚ್ಚಿಸುವುದಾಗಿಯೂ ನಿರ್ಮಲಾ ಅವರು ಹೇಳಿದ್ದಾರೆ.ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ-ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಭಾರತ್ ಟ್ರೇಡ್ ನೆಟ್ (ಬಿಟಿಎನ್) ವ್ಯಾಪಾರ ದಾಖಲಾತಿ ಮತ್ತು ಹಣಕಾಸು ಪರಿಹಾರಗಳಿಗಾಗಿ ಏಕೀಕೃತ ವೇದಿಕೆಯಾಗಿ ಹೊಂದಿಸಲಾಗುವುದು ಎಂದಿದ್ದಾರೆ. ನಗರಗಳನ್ನು ಬೆಳವಣಿಗೆಯ ಕೇಂದ್ರಗಳನ್ನಾಗಿ ಮಾಡುವ ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರವು 1 ಲಕ್ಷ ಕೋಟಿ ರೂಪಾಯಿಗಳ ನಗರಾಭಿವೃದ್ಧಿ ನಿಧಿಯನ್ನು ಸ್ಥಾಪಿಸಲಿದೆ ಎಂದು ಘೋಷಿಸಿದ್ದಾರೆ.
ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿ ಮಿಷನ್ನ ಒಂದು ಭಾಗವಾಗಿ ಕನಿಷ್ಠ ಐದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಣ್ಣ ಮಾಡ್ಯುಲರ್ (ಪರಮಾಣು) ರಿಯಾಕ್ಟರ್ಗಳು 2033ರ ವೇಳೆಗೆ ಕಾರ್ಯನಿರ್ವಹಿಸಲಿವೆ. ವರ್ಧಿತ ಒಟ್ಟು ವೆಚ್ಚದೊಂದಿಗೆ 2028ರವರೆಗೆ ಜಲ ಜೀವನ್ ಮಿಷನ್ನ ವಿಸ್ತರಣೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದಿದ್ದಾರೆ.
ವಿಕಸಿತ ಭಾರತಕ್ಕಾಗಿ ಪರಮಾಣು ಶಕ್ತಿ ಮಿಷನ್ 2047ರ ವೇಳೆಗೆ ಕನಿಷ್ಠ 100 ಜಿಡಬ್ಲ್ಯು ಪರಮಾಣು ಶಕ್ತಿಯ ಅಭಿವೃದ್ಧಿಯು ನಮ ಶಕ್ತಿ ಪರಿವರ್ತನೆಗೆ ಅವಶ್ಯಕವಾಗಿದೆ. ಈ ಗುರಿಯತ್ತ ಸಾಗಲು ಖಾಸಗಿ ವಲಯಗಳೊಂದಿಗೆ ಸಕ್ರಿಯ ಪಾಲುದಾರಿಕೆಗಾಗಿ ಪರಮಾಣು ಶಕ್ತಿ ಕಾಯ್ದೆ ಮತ್ತು ಪರಮಾಣು ಹಾನಿ ಕಾಯ್ದೆಗಳ ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.
ದೇಶದ ವಿತ್ತೀಯ ಕೊರತೆಯು ಜಿಡಿಪಿಯ 4.4% ಎಂದು ಅಂದಾಜಿಸಲಾಗಿದೆ. ವಿಮಾ ವಲಯದ ಎಫ್ಡಿಐ ಮಿತಿಯನ್ನು ಶೇ 74ರಿಂದ ಶೇ 100 ಪ್ರತಿಶತಕ್ಕೆ ಏರಿಕೆ ಮಾಡಲಾಗುವುದು. ಭಾರತದಲ್ಲಿ ಸಂಪೂರ್ಣ ಪ್ರೀಮಿಯಂ ಹೂಡಿಕೆ ಮಾಡುವ ಕಂಪನಿಗಳಿಗೆ ಈ ಮಿತಿ ಇರಲಿದೆ.
ವಿದೇಶಿ ಹೂಡಿಕೆಗೆ ಸಂಬಂಧಿಸಿದ ಪ್ರಸ್ತುತ ಷರತ್ತುಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಅದನ್ನು ಸರಳಗೊಳಿಸಲಾಗುತ್ತದೆ ಎಂದಿದ್ದಾರೆ. ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳ ಪರಿಷ್ಕೃತ ಅಂದಾಜಿನ ಪ್ರಕಾರ 31.47 ಲಕ್ಷ ಕೋಟಿ ರೂ.ಆಗಿದೆ. ಅದರಲ್ಲಿ ನಿವ್ವಳ ತೆರಿಗೆ ಸ್ವೀಕೃತಿಗಳು 25.57 ಲಕ್ಷ ಕೋಟಿ ರೂ.ಗಳೆಂದು ಅವರು ಲೆಕ್ಕ ಬಿಚ್ಚಿಟ್ಟಿದ್ದಾರೆ.