ನವದೆಹಲಿ,ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜವಳಿ ಉದ್ಯಮದಲ್ಲಿ ಮೂಲ ಅಬಕಾರಿ ಸುಂಕವನ್ನು ತಗ್ಗಿಸಿದ್ದರಿಂದಾಗಿ ಬಟ್ಟೆಗಳ ಮೇಲಿನ ದರ ಕಡಿಮೆಯಾಗುವ ಹಾಗೂ ಉತ್ಪಾದನೆ ಹೆಚ್ಚುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಕೃಷಿ ಜವಳಿ, ವೈದ್ಯಕೀಯ ಜವಳಿ ಹಾಗೂ ಭೌಗೋಳಿಕ ಜವಳಿಗಳ ಉತ್ಪಾದನೆಗೆ ಸ್ಪರ್ಧಾತಕ ಬೆಲೆಯನ್ನು ನಿಗದಿಪಡಿಸಲು ಅನುಕೂಲವಾಗುವಂತೆ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಎರಡು ಮಾದರಿಯ ಜವಳಿ ವರ್ಗಗಳ ಯಂತ್ರೋಪಕರಣಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
9 ದರಪಟ್ಟಿಯಲ್ಲಿ ಗುರುತಿಸಿದ ಜವಳಿಗಳಿಗೆ ಪ್ರತಿ ಕೆ.ಜಿ.ಗೆ 115 ರೂ. ಅಥವಾ ಶೇ.10 ಅಥವಾ 20- ಇವುಗಳಲ್ಲಿ ಯಾವುದು ಹೆಚ್ಚೊ ಅದನ್ನು ವಿಧಿಸಲು ನಿರ್ಧರಿಸಲಾಗಿದೆ.ಮೇಕ್ ಇನ್ ಇಂಡಿಯಾ ಉತ್ತೇಜನಕಾರಿಯಾಗಿ ಇಂಟ್ರಾಕ್ಟಿವ್ ಫ್ಲಾಟ್ ಪ್ಯಾನಲ್ ಡಿಸ್ಪ್ಲೈ(ಐಎಫ್ಪಿಡಿ) ಮೇಲಿನ ಮೂಲ ಅಬಕಾರಿ ಸುಂಕವನ್ನು ಶೇ.10 ರಿಂದ 20 ರಷ್ಟು ಹೆಚ್ಚಿಸಲಾಗಿದೆ. ಅದೇ ರೀತಿ ಓಪನ್ ಸೆಲ್ ಅಥವಾ ಇನ್ನಿತರ ವಸ್ತುಗಳಲ್ಲಿನ ಶೇ.5ರಷ್ಟು ಅಬಕಾರಿ ತೆರಿಗೆಯನ್ನು ಇಳಿಸಲಾಗಿದೆ.
2023-24ನೇ ಬಜೆಟ್ನಲ್ಲಿ ಎಲ್ಇಡಿ ಟಿವಿಗಳ ಮೇಲಿನ ಅಬಕಾರಿ ಸುಂಕವನ್ನು ಶೇ.5 ರಿಂದ ಶೇ.2.5 ರಷ್ಟು ಇಳಿಸಲಾಗಿತ್ತು. ಇದರಿಂದಾಗಿ ಉತ್ಪಾದನಾ ವಲಯ ಉತ್ತೇಜನ ಪಡೆದಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಿಕಲ್ ವಾಹನಗಳ 35 ಮಾದರಿಯ ಬಂಡವಾಳ ಸರಕು ಹಾಗೂ 28 ಮಾದರಿಯ ಮೊಬೈಲ್ನ ಬಂಡವಾಳ ಸರಕುಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ. ಇದರಿಂದಾಗಿ ಲೀಥಿಯಮ್ ಹಾಗೂ ಕಬ್ಬಿಣದ ಬ್ಯಾಟರಿಗಳ ಬೆಲೆ ಇಳಿಕೆಯಾಗಲಿದ್ದು, ದೇಶೀಯ ಉತ್ಪಾದನೆ ಹೆಚ್ಚಲಿದೆ ಎಂದು ತಿಳಿಸಿದ್ದಾರೆ.
ಸ್ಪರ್ಧಾತಕ ಹಡಗು ಉತ್ಪಾದನೆ ವಲಯಕ್ಕಾಗಿ ಕಚ್ಛಾ ವಸ್ತುಗಳು, ಬಳಕೆಯಾಗುವ ಸರಕುಗಳು ಹಾಗೂ ಇತರ ವಸ್ತುಗಳ ಮೇಲಿನ ಅಬಕಾರಿ ವಿನಾಯಿತಿಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ದೂರ ಸಂಪರ್ಕ ವಲಯದಲ್ಲಿ ವರ್ಗೀಕೃತ ವಿವಾದಗಳನ್ನು ನಿಯಂತ್ರಿಸಲು ಅಬಕಾರಿ ಸುಂಕವನ್ನು ಶೇ.25 ರಿಂದ 10ರಷ್ಟು ತಗ್ಗಿಸಲಾಗಿದೆ.