Sunday, February 2, 2025
Homeರಾಷ್ಟ್ರೀಯ | Nationalಗ್ಯಾರಂಟಿಗಳಿಂದಾಗಿ ಅನುದಾನ ಸಿಗುತ್ತಿಲ್ಲ : ಬಿ.ಆರ್.ಪಾಟೀಲ್ ಅಸಮಾಧಾನ

ಗ್ಯಾರಂಟಿಗಳಿಂದಾಗಿ ಅನುದಾನ ಸಿಗುತ್ತಿಲ್ಲ : ಬಿ.ಆರ್.ಪಾಟೀಲ್ ಅಸಮಾಧಾನ

Not getting funds due to guarantees: B.R. Patil unhappy

ಕಲಬುರಗಿ,ಫೆ.2- ಸುಮನೆ ಹುಚ್ಚನಂತೆ ರಾಜೀನಾಮೆ ಕೊಟ್ಟಿಲ್ಲ, ಸಮಸ್ಯೆಗಳಂತೂ ಇವೆ, ಕ್ಷೇತ್ರಕ್ಕೆ ಏನೂ ಮಾಡಲಾಗುತ್ತಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ರಾಜಕೀಯ ಸಲಹೆಗಾರರ ಹುದ್ದೆ ತೊರೆದಿದ್ದೇನೆ ಎಂದು ಶಾಸಕ ಬಿ.ಆರ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಒತ್ತಡ ಹೇರಲು ಅಥವಾ ಬ್ಲಾಕ್ಮೇಲ್ ಮಾಡಲು ರಾಜೀನಾಮೆ ನೀಡಿಲ್ಲ. ಅಷ್ಟು ಕೀಳುಮಟ್ಟದ ರಾಜಕಾರಣ ನಾನು ಮಾಡುವುದಿಲ್ಲ. ಶಾಸಕನಾಗಿದ್ದೇ ಅದೃಷ್ಟ. ಎಷ್ಟೋ ಜನರಿಗೆ ಈ ಅವಕಾಶವೂ ಬರುವುದಿಲ್ಲ ಎಂದರು.

ಗ್ಯಾರಂಟಿ ಕಾರಣಕ್ಕಾಗಿ ಅಗತ್ಯದಷ್ಟು ಅನುದಾನ ಕ್ಷೇತ್ರಕ್ಕೆ ಸಿಗುತ್ತಿಲ್ಲ. ಇದು ನನ್ನೊಬ್ಬನ ಸಮಸ್ಯೆಯಲ್ಲ. ಬಹುತೇಕ ಶಾಸಕರು ಇದೇ ರೀತಿಯ ತೊಂದರೆಯಲ್ಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಶಾಸಕಾಂಗ ಅನರ್ಹ ತಡೆ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ.

ಈ ಮೊದಲೇ ನಾನು ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದುಕೊಂಡಿದ್ದೆ. ಆದರೆ ಅನರ್ಹತೆಗೆ ಹೆದರಿ ಓಡಿಹೋದ ಎನಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಸುಮನಿದ್ದೆ. ವಿಧಾನಮಂಡಲದಲ್ಲಿ ಅಂಗೀಕರಿಸಲಾದ ಕಾಯಿದೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಹೀಗಾಗಿ ಲಾಭದಾಯಕ ಹುದ್ದೆಯ ಆರೋಪದಿಂದ ಅನರ್ಹವಾಗುವ ಭಯ ಇಲ್ಲ. ಆದರೂ ಈ ಹುದ್ದೆಯಲ್ಲಿದ್ದು ಏನೂ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ತಮಗೆ ಯಾವುದೇ ಅಸಮಾಧಾನವಿಲ್ಲ. ಅನಗತ್ಯವಾಗಿ ಸುದ್ದಿಗಳು ಸೃಷ್ಟಿಯಾಗುತ್ತಿವೆ ಎಂದು ಹೇಳಿದ ಬೆನ್ನಲ್ಲೇ ಬಿ.ಆರ್.ಪಾಟೀಲ್ ತಾವು ಏನು ಹೇಳಬೇಕೊ ಅದನ್ನು ಮುಖ್ಯಮಂತ್ರಿಯವರ ಬಳಿ ವಿವರವಾಗಿ ತಿಳಿಸಿದ್ದೇನೆ. ನಿನ್ನೆ ಮೈಸೂರಿನಲ್ಲಿ ಮುಖ್ಯಮಂತ್ರಿಯವರು ಮಾತನಾಡುವ ವೇಳೆ ಬಿ.ಆರ್.ಪಾಟೀಲ್ರವರನ್ನು ಕರೆದು ಮಾತನಾಡುತ್ತೇನೆ ಎಂದಿದ್ದಾರೆ. ನಾನು ಕಾದುನೋಡುತ್ತೇನೆ ಎಂದರು.

ಈ ಹಿಂದೆ ಶಾಸಕಾಂಗ ಸಭೆಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದು ನಿಜ. ಅಲ್ಲಿದ್ದರೇನು, ಇಲ್ಲಿದ್ದರೇನು, ಎರಡೂ ಒಂದೇ ಎಂದಿದ್ದೆ. ಸಮಸ್ಯೆಗಳ ಬಗ್ಗೆ ನಾನು ಬಹಿರಂಗವಾಗಿ ಚರ್ಚಿಸಿ ಬ್ಲಾಕ್ಮೇಲ್ ಮಾಡಲು ಬಯಸುವುದಿಲ್ಲ. ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸುತ್ತೇನೆ. ರಾಜೀನಾಮೆ ಮಾತ್ರ ಹಿಂಪಡೆಯುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಯವರು ಕರೆದರೆ ನಾನು ಹೋಗಿ ಮಾತುಕತೆ ನಡೆಸುತ್ತೇನೆ. ಸಂಸಾರ ಎಂದ ಮೇಲೆ ಸಮಸ್ಯೆಗಳಿರುತ್ತವೆ. ಇನ್ನು ಸರ್ಕಾರ ಎಂದಾಗ ಇರುವುದಿಲ್ಲವೇ?, ನನ್ನನ್ನು ಮನವೊಲಿಸುವ ಅಗತ್ಯವಿಲ್ಲ. ನಮದೇನು ಪಾಕಿಸ್ತಾನ-ಭಾರತದ ಜಗಳವೇ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಸ್ನೇಹಿತ ಎಂಬ ಕಾರಣಕ್ಕೆ ಈ ಸ್ಥಾನಕ್ಕೆ ನೇಮಿಸಿದ್ದರು.

ನನಗಿಂತಲೂ ಅವರಿಗೆ ಆಡಳಿತದಲ್ಲಿ, ರಾಜಕೀಯದಲ್ಲಿ ಹೆಚ್ಚಿನ ಅನುಭವವಿದೆ. ನನ್ನ ಸಲಹೆ ಅವರಿಗೆ ಅಗತ್ಯವಿಲ್ಲ ಎಂದು ಹೇಳಿದರು.ರಾಜ್ಯಸರ್ಕಾರದ ಯಾವ ಪ್ರಸ್ತಾವನೆಗಳನ್ನೂ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಪರಿಗಣಿಸಿಲ್ಲ. ಏನೋ ಬಜೆಟ್ ಮಂಡಿಸಬೇಕು ಎಂಬ ಕಾರಣಕ್ಕೆ ಮಂಡಿಸಿದ್ದಾರೆ ಎಂದು ಹೇಳಿದರು.

RELATED ARTICLES

Latest News