ಬೆಂಗಳೂರು,ಫೆ.2– ಮದುವೆ ಮುಗಿಸಿ ಕೊಂಡು ಸಹೋದರನ ಜೊತೆ ಮಹಿಳೆ ಹೋಂಡಾ ಆ್ಯಕ್ಟಿವಾದಲ್ಲಿ ತೆರಳುತ್ತಿದ್ದಾಗ ಕಾರಿನ ಡೋರ್ ತಗುಲಿದ ಪರಿಣಾಮ ಕೆಳಗೆ ಬಿದ್ದ ಮಹಿಳೆ ಮೇಲೆ ಬಿಎಂಟಿಸಿ ಬಸ್ ಹರಿದು ಅವರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಕಾಮಕ್ಷಿಪಾಳ್ಯದ ನಿವಾಸಿ ಸರೋಜ (50) ಮೃತಪಟ್ಟ ಮಹಿಳೆ. ಇವರ ಸಹೋದರ ಮತ್ತೊಂದು ಬದಿ ಬಿದ್ದಿದ್ದರಿಂದ ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರೋಜ ಅವರು ಸಹೋದರನ ಜೊತೆ ಜ್ಞಾನಭಾರತಿಯಲ್ಲಿ ಮದುವೆ ಮುಗಿಸಿಕೊಂಡು ರಾತ್ರಿ 9.45 ರ ಸುಮಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮೈಸೂರು ರಸ್ತೆಯ ಪಂತರಪಾಳ್ಯದ ಪೂರ್ಣಿಮ ಟಿಂಬರ್ ಮುಂಭಾಗ ರಸ್ತೆಯಲ್ಲಿ ನಿಂತಿದ್ದ ಕಾರಿನ ಡೋರ್ನ್ನು ಚಾಲಕ ನಿರ್ಲಕ್ಷತೆಯಿಂದ ಏಕಾಏಕಿ ತೆಗೆದ ಪರಿಣಾಮ ಡೋರ್ಗೆ ಇವರ ಬೈಕ್ ತಾಗಿದ್ದರಿಂದ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ.
ಅದೇ ವೇಳೆಗೆ ಹಿಂದಿನಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಮಹಿಳೆ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.ಸುದ್ದಿ ತಿಳಿದು ಬ್ಯಾಟರಾಯನಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತ ಸರೋಜಾ ಅವರ ಮೃತದೇಹವನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಇಂದು ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.