Friday, November 28, 2025
Homeರಾಜ್ಯಡಿಕೆಶಿಗೆ ಸಿಎಂ ಸ್ಥಾನ ನೀಡುವಂತೆ ಒಕ್ಕಲಿಗರ ಒಗ್ಗಟ್ಟು ಪ್ರದರ್ಶನ

ಡಿಕೆಶಿಗೆ ಸಿಎಂ ಸ್ಥಾನ ನೀಡುವಂತೆ ಒಕ್ಕಲಿಗರ ಒಗ್ಗಟ್ಟು ಪ್ರದರ್ಶನ

Vokkaligaras demand that the CM post be given to DK Shivakumar.

ಬೆಂಗಳೂರು,ನ.27- ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌‍ ಹೈಕಮಾಂಡ್‌ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಲ್‌‍. ಶ್ರೀನಿವಾಸ್‌‍ ಅವರು, ರಾಜ್ಯದಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಅಧಿಕಾರಕ್ಕೆ ತರಲು ಶಿವಕುಮಾರ್‌ ಅವರು ಹಗಲಿರುಳು ಶ್ರಮಿಸಿದ್ದಾರೆ. ಅದನ್ನು ಪರಿಗಣಿಸಬೇಕು. ಪಕ್ಷಕ್ಕಾಗಿ ಅವರು ಮಾಡಿರುವ ಕೆಲಸಕ್ಕೆ ಕೂಲಿ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಪಕ್ಷದ ನಿಷ್ಠಾವಂತರು, ಕಟ್ಟಾಳು ಶಿವಕುಮಾರ್‌ ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ವಾಗಬಾರದು.

ಒಂದು ವೇಳೆ ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ, ನಮ ಸಮುದಾಯದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ನಮ ಸಮುದಾಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಪ್ರಬಲ ಆಕಾಂಕ್ಷಿಯಾಗಿ ಶಿವಕುಮಾರ್‌ ಮುಂಚೂಣಿಯಲ್ಲಿದ್ದಾರೆ. ಬೇರೆಯವರ ಪ್ರಸ್ತಾಪ ಬಂದಾಗ ಅದರ ಬಗ್ಗೆ ಪ್ರತಿಕ್ರಿಯಿಸುತ್ತೇವೆ ಎಂದರು.

ಶಿವಕುಮಾರ್‌ ಅವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೇಳಿದಂತೆ ನಾಡಿನ ಜನರು ಅವರಿಗೆ ಪೆನ್ನು ಪೇಪರ್‌ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಐದು ವರ್ಷ ಮುಖ್ಯಮಂತ್ರಿ ಆಗಿದ್ದರು. ಈಗ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತಾರೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ. ಹಾಗಾಗಿ ಈ ಆಗ್ರಹ ಮಾಡುತ್ತಿದ್ದೇವೆ ಎಂದರು.

ಒಕ್ಕಲಿಗರ ಸಂಘದ ಎಲ್ಲಾ ನಿರ್ದೇಶಕರು, ಪದಾಧಿಕಾರಿಗಳು ಒಟ್ಟಾಗಿದ್ದು, ಉಳಿದಿರುವ ಇನ್ನೊಂದು ವರ್ಷದಲ್ಲಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಅವರು ಹೇಳಿದರು.
ಸಂಘದ ಮಾಜಿ ಅಧ್ಯಕ್ಷ ಬಿ.ಕೆಂಚಪ್ಪಗೌಡರು ಮಾತನಾಡಿ, ಡಿ.ಕೆ. ಶಿವಕುಮಾರ್‌ ಅವರು ಚುನಾವಣೆಗೂ ಮುನ್ನ ಪೆನ್ನು ಪೇಪರ್‌ ಕೊಡಿ ಎಂದು ಕೇಳಿದ್ದರು. ಅದರಂತೆ ನಮ ಸಮುದಾಯ ಮೊದಲ ಸ್ಥಾನದಲ್ಲಿ ನಿಂತು ಕಾಂಗ್ರೆಸ್‌‍ ಪಕ್ಷವನ್ನು ಬೆಂಬಲಿಸಿತ್ತು. ಕಾಂಗ್ರೆಸ್‌‍ ಪಕ್ಷ ಅಧಿಕಾರಕ್ಕೆ ಬರಲು ಶಿವಕುಮಾರ್‌ ಅವರ ಶ್ರಮ ಸಾಕಷ್ಟಿದೆ ಎಂದರು.

ಪ್ರದೇಶ ಕಾಂಗ್ರೆಸ್‌‍ ಅಧ್ಯಕ್ಷರಾಗಿದ್ದವರು ಮುಖ್ಯಮಂತ್ರಿ ಆಗುವ ಪರಿಪಾಠವೂ ಇದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌‍ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದು ನಮಗೂ ಸಂತೋಷ. ಆದರೆ ಡಿಕೆ ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಬಾರದು ಎಂದರು.
ಕಷ್ಟಪಟ್ಟು ಅವರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಂದೆ ಅಧಿಕಾರಕ್ಕೆ ಕಾಂಗ್ರೆಸ್‌‍ ಪಕ್ಷ ಬರಬೇಕಾದರೆ ಶಿವಕುಮಾರ್‌ ಅವರಿಗೆ ಅವಕಾಶ ಮಾಡಿಕೊಡಬೇಕು. ಒಂದು ವೇಳೆ ವಂಚನೆಯಾದರೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಹಾಗೂ ನ್ಯಾಯಕ್ಕಾಗಿ ಹೋರಾಟವನ್ನು ಮಾಡುತ್ತೇವೆ ಎಂದರು.

ಪ್ರಥಮ ಭಾರಿಗೆ ಅವಿರೋಧ ಆಯ್ಕೆ:
ಒಕ್ಕಲಿಗರ ಸಂಘದ ಇತಿಹಾಸದಲ್ಲಿ ಮೊದಲ ಬಾರಿಗೆ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಸಂಘದ ಅಭಿವೃದ್ಧಿಗೆ ಎಲ್ಲಾ 35 ನಿರ್ದೇಶಕರು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಸರ್ವ ಸದಸ್ಯರ ಸಭೆ ನಡೆಸುವುದು, ಬೈಲಾ ತಿದ್ದುಪಡಿ ಮಾಡುವುದು, ಎಲ್ಲಾ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳ ವಸತಿ ನಿಲಯ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕೃಷಿ ಕಾಲೇಜು, ಮತ್ತೊಂದು ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌ ಕಾಲೇಜು ಪ್ರಾರಂಭಿಸಲು ಮುಂದಾಗುತ್ತಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಂಗಾಧರ್‌ ಮಾತನಾಡಿ, ಕಾಂಗ್ರೆಸ್‌‍ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಶಿವಕುಮಾರ್‌ ಅವರ ಸೇವಾ ಹಿರಿತನ ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪ ರೆಡ್ಡಿ ಅವರು ಮಾತನಾಡಿ, ಕಾಂಗ್ರೆಸ್‌‍ ಪಕ್ಷದ ಕಟ್ಟಾಳು, ಶಿಸ್ತಿನ ಸಿಪಾಯಿ ಆಗಿರುವ ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌‍ ಹೆಚ್ಚು ಸ್ಥಾನಗಳಿಸಲು ಒಕ್ಕಲಿಗ ಸಮುದಾಯವು ಕಾರಣ. ಇಡೀ ಸಮುದಾಯ ಶಿವಕುಮಾರ್‌ ಅವರ ಬೆಂಬಲಕ್ಕೆ ಇದೆ. ಕಾಂಗ್ರೆಸ್‌‍ ಪಕ್ಷ ನುಡಿದಂತೆ ನಡೆಯುವ ಸಿದ್ಧಾಂತವುಳ್ಳ ಪಕ್ಷ. ಹಾಗಾಗಿ ಮಾತಿಗೆ ತಪ್ಪುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್‌, ಎಂ ಪುಟ್ಟಸ್ವಾಮಿ, ಸಹಾಯಕ ಕಾರ್ಯದರ್ಶಿ ಡಾ.ಡಿ. ಕೆ.ರಮೇಶ್‌, ಖಜಾಂಚಿ ಕೆ.ವಿ.ಶ್ರೀಧರ್‌, ಸಂಘದ ನಿರ್ದೇಶಕರಾದ ವೆಂಕಟರಾಮೇಗೌಡ, ಹನುಮಂತರಾಯಪ್ಪ, ಬಿ.ಪಿ.ಮಂಜೇಗೌಡ, ಜೆ ರಾಜು, ಲೋಕೇಶ್‌, ಅಶೋಕ್‌ ಜಯರಾಮ್‌‍, ಎಲುವಳ್ಳಿ ರಮೇಶ್‌, ಡಾ ನಾರಾಯಣಸ್ವಾಮಿ, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ನಾಗರಾಜ್‌‍, ಪ್ರಧಾನ ಸಂಚಾಲಕ ಆಡಿಟರ್‌ ನಾಗರಾಜ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News