ಬೆಂಗಳೂರು,ಫೆ.2- ಮತ್ತೊಬ್ಬ ನಕ್ಸಲ್ ನಾಯಕಿ ತೊಂಬಟ್ಟು ಲಕ್ಷ್ಮಿ ಇಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಣಾಗುವ ಸಾಧ್ಯತೆಯಿದೆ.ಮೂಲಸೌಲಭ್ಯಗಳ ಕೊರತೆ ಹಾಗೂ ಅರಣ್ಯ ಅಧಿಕಾರಿಗಳ ಕಿರುಕುಳ ವಿರೋಧಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಭಾಗಿಯಾಗಿದ್ದ ಲಕ್ಷ್ಮಿ 2006 ರಿಂದ ಭೂಗತರಾಗಿದ್ದರು.
ಕುಂದಾಪುರ ತಾಲ್ಲೂಕಿನ ತೊಂಬಟ್ಟು ನಿವಾಸಿಯಾಗಿರುವ ಲಕ್ಷ್ಮಿ ಸುಮಾರು 20 ವರ್ಷಗಳ ಬಳಿಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ.ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಲಕ್ಷ್ಮಿ ಅವರ ಸಹೋದರ ತಮ ಸಹೋದರಿಯನ್ನು ಮನೆಗೆ ಕರೆದುಕೊಳ್ಳಲು ಸಂತೋಷವಾಗುತ್ತಿದೆ. ಆಕೆಯನ್ನು ನೋಡಬೇಕು ಎಂಬ ಆಸೆ ತುಂಬಾ ಇತ್ತು. ಬಹಳ ವರ್ಷವಾದರೂ ಇದು ಸಾಧ್ಯವಾಗಿರಲಿಲ್ಲ ಎಂದರು.
ಅರಣ್ಯ ಇಲಾಖೆಯಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಅಡಿಕೆ ಗಿಡ ಕಡಿದು ಹಾಕುವುದು, ತೆಂಗಿನ ಗಿಡ ಕಿತ್ತುಹಾಕುವುದು, ಭತ್ತ ನಾಟಿ ಮಾಡಿದರೂ ಹಾಳು ಮಾಡುತ್ತಿದ್ದರು. ಅಂತಹ ತೊಂದರೆಗಳ ವಿರುದ್ಧ ಹೋರಾಟಕ್ಕಿಳಿದು ನಕ್ಸಲ್ ಚಳವಳಿಗೆ ಸೇರಿರಬಹುದು ಎಂದು ತಿಳಿಸಿದರು.
ಸಂಡೂರು ಪ್ರಾಜೆಕ್ಟ್ಗೆ ಕೆಲಸಕ್ಕೆಂದು ಹೋದ ಲಕ್ಷ್ಮಿ ಮತ್ತೆ ಮನೆಗೆ ಬರಲಿಲ್ಲ. ಮೂರು ದಿನಗಳವರೆಗೂ ನಾವು ಕಾದುನೋಡಿ ನಂತರ ಪೊಲೀಸರಿಗೆ ದೂರು ನೀಡಿದ್ದೆವು. ಆಕೆ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯರ ಬಳಿ ಭವಿಷ್ಯ ಕೇಳಿದಾಗ ಆಕೆ ಸಂತೋಷವಾಗಿದ್ದಾಳೆ. ಚಿಂತೆ ಮಾಡಬೇಡಿ ಎಂದು ಹೇಳಿದ್ದರು.
ನಮಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೂರು ನೀಡಿದೆವು. ಇದಾದ ಬಳಿಕ ಸಮಸ್ಯೆ ಜಾಸ್ತಿಯಾಯಿತು. ಎಸ್ಬಿಎಫ್ ಹಾಗೂ ಇತರ ಪೊಲೀಸರು ನಮನ್ನು ಬಂದೂಕಿನಲ್ಲಿ ಸುಟ್ಟು ಹಾಕುವುದಾಗಿ ಬೆದರಿಸಿದ್ದರು. ನೆಮದಿಯಾಗಿರಲು ಬಿಡಲಿಲ್ಲ. ನಾವು ಎಲ್ಲವನ್ನೂ ಅನುಭವಿಸಬೇಕಾಯಿತು. ಕೊನೆಗೆ ಪ್ರತಾಪ್ ಶೆಟ್ಟರ ಬಳಿ ದೂರು ಹೇಳಿದ ನಂತರ ತೊಂದರೆ ಕಡಿಮೆಯಾಯಿತು ಎಂದರು.
ಊರಿಗೆ ಒಳ್ಳೆಯದಾಗಲಿ ಎಂದು ನನ್ನ ತಂಗಿ ಹೋರಾಟಕ್ಕಿಳಿದಿದ್ದರು. ಊರಿಗೆ ರಸ್ತೆ ಇಲ್ಲ, ಹೊಳೆ ದಾಟಲು ಸೇತುವೆ ಇಲ್ಲ, ಯಾವ ಸಚಿವರು ಬಂದರೂ ಇದು ಬಗೆಹರಿಯಲಿಲ್ಲ ಎಂದ ಅವರು, ಆಕೆಯ ಭವಿಷ್ಯಕ್ಕೆ ಸರ್ಕಾರ ನೆರವು ನೀಡಬೇಕು. ಮಕ್ಕಳ ಓದಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.
ಲಕ್ಷ್ಮಿ ಅವರ ಸಹೋದರಿ ಮಾತನಾಡಿ, ನಮ ತಂಗಿಯನ್ನು ನೋಡಿ 15 ವರ್ಷಗಳ ಮೇಲಾಯಿತು. ಆಕೆ ಶರಣಾಗುತ್ತಿರುವ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ತಮ ತಂದೆ ಸತ್ತಾಗ ಶವ ಸಂಸ್ಕಾರಕ್ಕೆ ಬರಬೇಕೆಂಬ ಆಸೆಯಿತ್ತು. ಆದರೆ ಪೊಲೀಸರು ಮನೆಯ ಸುತ್ತ ಕಾವಲಿದ್ದುದ್ದರಿಂದಾಗಿ ಬರಲು ಸಾಧ್ಯವಾಗಿರಲಿಲ್ಲ ಎಂದರು.
ಕಳೆದ 2 ವರ್ಷಗಳಿಂದ ಆಕೆ ಮೊಬೈಲ್ನಲ್ಲಿ ನಮೊಂದಿಗೆ ಸಂಪರ್ಕದಲ್ಲಿದ್ದು, ಆಗಾಗ್ಗೆ ವಿಡಿಯೋ ಕಾಲ್ ಮಾಡುತ್ತಿದ್ದರು. ಆಕೆ ಜೀವನ ಸಮಸ್ಯೆಯಲ್ಲಿದೆ. ಸರ್ಕಾರ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಸರ್ಕಾರ ನಡೆಸುತ್ತಿರುವ ಮಾತುಕತೆಯಿಂದಾಗಿ ಸಂಧಾನ ಪ್ರಕ್ರಿಯೆಗಳು ಚುರುಕುಗೊಂಡಿವೆ. ಕಳೆದ ತಿಂಗಳು ಆರು ಮಂದಿ ನಕ್ಸಲರು ಶರಣಾಗತರಾದರು. ನಿನ್ನೆ ಮತ್ತೊಬ್ಬ ನಕ್ಸಲ್ ನಾಯಕ ಶಸ್ತ್ರ ತ್ಯಜಿಸಿದರು. ಈಗ ತೊಂಬಟ್ಟು ಲಕ್ಷ್ಮಿ ಕೂಡ ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರುತ್ತಿದ್ದಾರೆ.