ಬೆಂಗಳೂರು, ಜ.27- ಮಹಾತ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪದ ಬದಲಾವಣೆಯನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇಂದು ರಾಜಭವನ ಚಲೋ ನಡೆಸಲಾಯಿತು.
ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಮುನ್ನುಡಿ ಬರೆದಿದ್ದಾರೆ.
ಇಂದಿನಿಂದ ರಾಜ್ಯಾದ್ಯಂತ ಕಾಂಗ್ರೆಸ್ ವಿಬಿ ಜಿ ರಾಮ್‌ಜಿ ಯೋಜನೆಯ ವಿರುದ್ಧ ಸಮರ ಆರಂಭಿಸಿದೆ. ಪ್ರತಿಯೊಂದು ತಾಲ್ಲೂಕು ಮತ್ತು ಪಂಚಾಯತ್ ಮಟ್ಟದಲ್ಲೂ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹಗಳು ಶುರುವಾಗಿವೆ . ಕನಿಷ್ಠ 5 ಕಿಮೀ ದೂರ ಪ್ರತಿಯೊಂದು ತಾಲ್ಲೂಕು ಮಟ್ಟದಲ್ಲೂ ಪಾದಯಾತ್ರೆ ನಡೆಸಬೇಕು. ಸ್ಥಳೀಯ ಶಾಸಕರು, ಸಚಿವರು, ಕಡ್ಡಾಯವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆದೇಶಿಸಲಾಗಿದೆ. ಹೀಗಾಗಿ ಇಂದು ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಕಡಿವೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಇಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಕಾಂಗ್ರೆಸ್ಸಿನಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜಭವನ ಚಲೋಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯ ವಿರುದ್ಧ ಅಪಪ್ರಚಾರ ನಡೆಸುವ ಜೊತೆಗೆ ಸಂಘರ್ಷದ ಹಾದಿ ಹಿಡಿಯುವ ಮೂಲಕ ರಾಜ್ಯ ಸರ್ಕಾರ ಅಭಿವೃದ್ಧಿಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಆರೋಪಿಸಲಾಗಿದೆ.ಆದರೆ ಇದ್ಯಾವುದನ್ನು ಲೆಕ್ಕಿಸದೇ ಮುಖ್ಯಮಂತ್ರಿ-ಉಪಮುಖ್ಯಮಂತ್ರಿಯವರು ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜಭವನ ಚಲೋ ನಡೆಸಿದ್ದಾರೆ.
ಮಹಾತಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಭಾಗದ ಜನರ ಆದಾಯದ ಮೂಲವಾಗಿದ್ದು, ವಲಸೆ ಹೋಗುವುದನ್ನು ತಡೆಯಲು ಸಮರ್ಥವಾಗಿತ್ತು. ಸ್ಥಳೀಯ ಮಟ್ಟದಲ್ಲೇ ಉದ್ಯೋಗವಕಾಶಗಳು ದೊರೆಯುತ್ತಿದ್ದರಿಂದ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಜನ ಆದಾಯ ಮೂಲ ಕಂಡುಕೊಂಡಿದ್ದರು. ಆದರೆ, ಕೇಂದ್ರ ಸರ್ಕಾರ ಏಕಾಏಕಿ ಮನ್ರೇಗಾ ಯೋಜನೆಯನ್ನು ರದ್ದು ಮಾಡಿ, ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ಕಾಯ್ದೆ ರೂಪಿಸುವ ಮೂಲಕ ಹಿಂದಿನ ಯೋಜನೆಗೆ ತಿಲಾಂಜಲಿ ನೀಡಿದೆ.
ಹೊಸ ಯೋಜನೆಯಲ್ಲಿ ನೂರು ದಿನಗಳ ಬದಲಾಗಿ 125 ದಿನಗಳ ಉದ್ಯೋಗವಕಾಶ ದೊರೆಯಲಿದೆ ಎಂಬುದು ಕೇಂದ್ರ ಸರ್ಕಾರದ ಸಮರ್ಥನೆ. ಆದರೆ, ಈ ಮೊದಲು ನೂರು ದಿನ ಕಡ್ಡಾಯ ಮಾನವ ಉದ್ಯೋಗ ದಿನಗಳ ಅವಕಾಶ ವಿದ್ದಾಗಲೇ ಶೇ. 2ರಷ್ಟು ಕಾರ್ಮಿಕರಿಗೆ ಮಾತ್ರ ಪೂರ್ಣ ಪ್ರಮಾಣದ ಕೆಲಸ ಸಿಕ್ಕಿದೆ. ಶೇ.98ರಷ್ಟು ಜನ ಆಯ್ದ ದಿನಗಳಲ್ಲಿ ಮಾತ್ರ ಉದ್ಯೋಗ ಪಡೆದಿದ್ದಾರೆ. ಈಗ 125 ದಿನ ಮಾನವ ದಿನಗಳ ಉದ್ಯೋಗ ಎಂದು ಹೇಳಿ ಕೇಂದ್ರ ಸರ್ಕಾರ ರಾಜ್ಯದ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಈವರೆಗೂ ಮನ್ರೇಗಾ ಯೋಜನೆಯಲ್ಲಿ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂಬ ನಿರ್ಧಾರವನ್ನು ಪಂಚಾಯಿತಿ ಮಟ್ಟದಲ್ಲಿ ತೀರ್ಮಾನಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಜೊತೆಗೆ ಗತಿಶಕ್ತಿ ಪೋರ್ಟಲ್‌ಮೂಲಕ ಸ್ಥಳೀಯ ಕಾಮಗಾರಿಗಳ ಸಮೀಕರಣಗೊಳ್ಳಲಿದ್ದು ಉಸ್ತುವಾರಿಯ ನಿಯಂತ್ರಣವು ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ಇದರಿಂದ ಪಂಚಾಯ್ತಿಗಳ ಅಧಿಕಾರ ವಿಕೇಂದ್ರೀಕರಣವನ್ನು ಕಸಿದುಕೊಳ್ಳುತ್ತದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ ಜನವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿತ್ತು. ಆದರೆ ಜನರ ವಿರೋಧದಿಂದಾಗಿ ಅವುಗಳನ್ನು ಹಿಂಪಡೆಯುವುದು ಅನಿವಾರ್ಯವಾಗಿತ್ತು. ಈಗ ವಿಬಿ-ಜಿ ರಾ ಮ್ ಜಿ ಕಾಯ್ದೆಯನ್ನು ಹಿಂಪಡೆದು ಮನ್ರೇಗಾವನ್ನು ಮರುಸ್ಥಾಪಿಸುವವರೆಗೂ ಕಾಂಗ್ರೆಸ್ ತೀವ್ರ ಸ್ವರೂಪದ ಹೋರಾಟ ಮುಂದುವರಿಸಲಿದೆ ಎಂದು ನಾಯಕರು ಎಚ್ಚರಿಕೆ ನೀಡಿದ್ದಾರೆ.
ವಿಬಿ-ಜಿ ರಾಮ್‌ಜಿ ಜನ ಸಾಮಾನ್ಯರಿಗಿಂತಲೂ ಗುತ್ತಿಗೆ ದಾರರಿಗೆ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ರೂಪಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
