Friday, February 7, 2025
Homeರಾಷ್ಟ್ರೀಯ | Nationalಬಡ್ಡಿ ದರ ಇಳಿಕೆ ಸಾಧ್ಯತೆ..!

ಬಡ್ಡಿ ದರ ಇಳಿಕೆ ಸಾಧ್ಯತೆ..!

RBI expected to cut interest rates for first time in nearly five years

ನವದೆಹಲಿ,ಫೆ.3- ಕಳೆದ ನಾಲ್ಕೈದು ವರ್ಷಗಳಿಂದ ಬಡ್ಡಿ ದರ ಇಳಿಸಲು ಮನಸ್ಸು ಮಾಡದ ಆರ್ಬಿಐ ಈ ಬಾರಿ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಫೆ.5 ರಿಂದ ಆರ್ಬಿಐನ ಎಂಪಿಸಿ ಸಭೆ ನಡೆಯಲಿದೆ. ಅಲ್ಲಿ ಬಡ್ಡಿ ದರ ಕಡಿತಗೊಳಿಸುವ ನಿರ್ಧಾರ ಪ್ರಕಟವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ವಿವಿಧ ಸಂಸ್ಥೆಗಳು ನಡೆಸಿದ ಪೋಲಿಂಗ್ನಲ್ಲಿ ಬಡ್ಡಿದರ 25 ಮೂಲಾಂಕಗಳಷ್ಟು ಕಡಿಮೆಗೊಳಿಸಬಹುದು ಎನ್ನುವ ಅಭಿಪ್ರಾಯವೇ ಬಂದಿದೆ. ಶೇ. 6.50 ಇರುವ ಬಡ್ಡಿದರ ಶೇ. 6.25ಕ್ಕೆ ಇಳಿಯಬಹುದು ಎನ್ನಲಾಗಿದೆ.

ಫೆ. 7 ರ ಬೆಳಗ್ಗೆ 10 ಗಂಟೆಗೆ ಆರ್ಬಿಐನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ಹಿಂದಿನ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಹಣದುಬ್ಬರ ಮತ್ತು ಬಡ್ಡಿದರ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಹೊಸ ಗವರ್ನರ್ ಅವರು ನಿರ್ಧಾರಗಳ ವಿಚಾರದಲ್ಲಿ ತುಸು ಉದಾರವಾಗಿರುತ್ತಾರೆ ಎನ್ನಲಾಗಿದೆ.

ಹೀಗಾಗಿ, ಈ ಎಂಪಿಸಿ ಸಭೆಯಲ್ಲಿ ಬಡ್ಡಿದರ ಕಡಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ, ಮುಂದಿನ ಕ್ವಾರ್ಟರ್ನಲ್ಲಿ ಮತ್ತೊಂದು ಸುತ್ತಿನ ದರಕಡಿತ ಆಗುವ ಸಾಧ್ಯತೆಯೂ ಇದೆ ಎಂದು ರಾಯ್ಟರ್ಸ್ ಪೋಲ್ನಲ್ಲಿ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರೆಪೋ ದರ ಕಡಿಮೆ ಮಾಡಲು ಇರುವ ಮತ್ತೊಂದು ಕಾರಣ ಎಂದರೆ ಆರ್ಥಿಕತೆಯ ಮಂದ ಬೆಳವಣಿಗೆ. ಮೂರನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 5.4ರಷ್ಟು ಮಾತ್ರವೇ ಬೆಳವಣಿಗೆ ಕಂಡಿದೆ. ಇದು ವದ್ಧಿಯಾಗಬೇಕಾದರೆ ಬಡ್ಡಿದರ ಕಡಿತ ಇತ್ಯಾದಿ ಪೂರಕ ಕ್ರಮಗಳ ಅವಶ್ಯಕತೆ ಇದೆ ಎನ್ನಲಾಗಿದೆ.

ಬಡ್ಡಿದರ ಕಡಿತ ಮಾಡುವ ನಿರ್ಧಾರಕ್ಕೆ ಅಡ್ಡಿಯಾಗಿರುವುದು ಹಣದುಬ್ಬರ. ಈ ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ಆರ್ಬಿಐ ಗುರಿ ಸದ್ಯಕ್ಕೆ ಸಾಕಾರಗೊಂಡಿಲ್ಲ. ಹಣದುಬ್ಬರ ಶೇ. 5ರ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಆದರೆ, ಮುಂಬರುವ ದಿನಗಳಲ್ಲಿ ಬೆಲೆ ಏರಿಕೆ ಪ್ರಮಾಣ ತಗ್ಗುವ ಸಾಧ್ಯತೆ ಇದ್ದು, ಹಣದುಬ್ಬರವೂ ತಹಬದಿಗೆ ಬರಬಹುದು ಎನ್ನುವ ಆಶಾಭಾವನೆ ಇದೆ.

RELATED ARTICLES

Latest News