Thursday, February 6, 2025
Homeರಾಜ್ಯಕರ್ನಾಟಕ ಬಿಜೆಪಿ ಭಿನ್ನಮತ ದೆಹಲಿ ಅಂಗಳಕ್ಕೆ

ಕರ್ನಾಟಕ ಬಿಜೆಪಿ ಭಿನ್ನಮತ ದೆಹಲಿ ಅಂಗಳಕ್ಕೆ

Karnataka BJP : Leaders to meet High Command

ಬೆಂಗಳೂರು, ಫೆ.3- ರಾಜ್ಯ ಬಿಜೆಪಿ ಬಣ ಗುದ್ದಾಟ, ಒಳಜಗಳ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ವಿರೋಧಿ ಸುತ್ತಿರುವ ಖಾಯಂ ಭಿನ್ನಮತೀಯರು ವರಿಷ್ಠರ ಭೇಟಿಗೆ ದೆಹಲಿಗೆ ತೆರಳಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ಕುಮಾರಬಂಗಾರಪ್ಪ, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಜಿ.ಎಂ.ಸಿದ್ದೇಶ್ವರ, ಚಂದ್ರಪ್ಪ, ಸಂಸದ ಕೆ.ಸುಧಾಕರ್ ಸೇರಿದಂತೆ ಮತ್ತಿತರರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.

ವರಿಷ್ಠರ ಭೇಟಿಗೆ ಸಮಯಾವಕಾಶ ಕೋರಿರುವ ಭಿನ್ನಮತೀಯ ಬಣದ ನಾಯಕ ಅರವಿಂದ ಲಿಂಬಾವಳಿ ಈಗಾಗಲೇ ನಡ್ಡಾ ಅವರಿಗೆ ಕರ್ನಾಟಕದ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ. ವಿಜಯೇಂದ್ರ ಅವರನ್ನು ಶತಾಯಗತಾಯ ಬದಲಾಯಿಸಲೇಬೇಕೆಂದು ಪಟ್ಟು ಹಿಡಿದಿರುವ ಭಿನ್ನಮತೀಯರು ಪಕ್ಷದಲ್ಲಿನ ಕೆಲವು ಧೋರಣೆಗಳನ್ನು ಬದಲಾವಣೆ ಮಾಡಿಕೊಳ್ಳಲು ವಿಜಯೇಂದ್ರರಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಲಿದ್ದಾರೆ.

ದೆಹಲಿಯಲ್ಲಿ ಕೆಲವು ದಿನ ವಾಸ್ತವ್ಯ ಹೂಡಲಿರುವ ಭಿನ್ನಮತೀಯರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ. ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಲು ಇಚ್ಛಿಸಿದ್ದಾರೆ.

ಈಗಾಗಲೇ ಜೆ.ಪಿ.ನಡ್ಡಾ ಅವರಿಗೆ ಪತ್ರದ ಮೂಲಕ ವಿಜಯೇಂದ್ರ ಅವರ ಬಗ್ಗೆ ದೂರು ನೀಡಿರುವ ಯತ್ನಾಳ್ ಹಾಗೂ ಹಲವು ನಾಯಕರು ದೆಹಲಿಯಲ್ಲೇ ತಮ ಬಣದಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹೆಸರು ಘೋಷಣೆ ಮಾಡಲು ಸಜ್ಜಾಗಿದ್ದಾರೆ. ನಿನ್ನೆ ಯತ್ನಾಳ್ ಬಣದ ನಾಯಕರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ.

ತಮ ಬಣದಿಂದ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೆ ಯಾರನ್ನು ಸ್ಪರ್ಧೆಗೆ ಇಳಿಸಬೇಕು ಎಂಬುದು ದೆಹಲಿಯಲ್ಲೇ ನಿರ್ಧಾರವಾಗಲಿದೆ. ಸದ್ಯ ಈ ಬಣದಿಂದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕುಮಾರ್ ಬಂಗಾರಪ್ಪ ಅವರ ಹೆಸರು ಮುನ್ನೆಲೆಯಲ್ಲಿದೆ. ಯತ್ನಾಳ್ ಬಣವು ಜೆ.ಪಿ.ನಡ್ಡಾ ಅವರ ಭೇಟಿಗೆ ಸಮಯ ಕೇಳಿದ್ದು, ಇನ್ನೂ ಅಲ್ಲಿಂದ ಒಪ್ಪಿಗೆ ಸಿಕ್ಕಿಲ್ಲ. ಹಾಗಾಗಿ ಎಲ್ಲ ನಾಯಕರು ದೆಹಲಿಯಲ್ಲೇ ಉಳಿದುಕೊಂಡು, ಯಾವ ಕಾರಣಕ್ಕೂ ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಬಾರದು ಎಂದು ಪಟ್ಟುಹಿಡಿಯಲಿದ್ದಾರೆ.

ಈಗಾಗಲೇ ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ವಿಜಯೇಂದ್ರ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಖುದ್ದಾಗಿ ಭೇಟಿ ಮಾಡಿ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೂಡಲೇ ಕೆಳಗಿಳಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮನವಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಜೆ.ಪಿ.ನಡ್ಡಾ ಕೂಡ ಹೇಳಿದ್ದಾರಂತೆ. ಈಗ ಯತ್ನಾಳ್ ಬಣ ಕೂಡ ದೆಹಲಿಗೆ ಹೋಗುತ್ತಿದ್ದು, ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ. ಹೈಮಾಂಡ್ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದೇ ಸದ್ಯದ ಕುತೂಹಲ.

ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಕಾಣಿಸುತ್ತಿಲ್ಲ. ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಮತ್ತೊಂದು ಬಣ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ತಮ ಬೇಡಿಕೆಗಳನ್ನು ಸಲ್ಲಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.ಹಲವು ಹಿರಿಯ ನಾಯಕರನ್ನು ಬದಿಗೊತ್ತಲು ಯತ್ನಿಸಿದ ಆರೋಪದ ಮೇಲೆ ವಿಜಯೇಂದ್ರ ವಿರುದ್ಧ ಬಣ ಅಸಮಾಧಾನ ಉಂಟಾಗಿದೆ.

RELATED ARTICLES

Latest News