ಬೆಂಗಳೂರು,ಫೆ.3- ಸ್ಥಳೀಯ ಪ್ರಾಧಿಕಾರಗಳಲ್ಲಿ ಮಾಧ್ಯಮದವರಿಗೆ ನಿವೇಶನವನ್ನು ಆದ್ಯತೆ ಮೇಲೆ ನೀಡಲು ಮೀಸಲು ಸೌಲಭ್ಯ ಕಲ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಸಗಿ ಬಡಾವಣೆಗಳನ್ನು ಮಂಜೂರು ಮಾಡುವ ಸಂದರ್ಭದಲ್ಲೂ ಮಾಧ್ಯಮದವರಿಗೆ ಮೀಸಲು ಕಲ್ಪಿಸುವ ಚಿಂತನೆಯಿದೆ ಎಂದರು.
ಮಾಧ್ಯಮದವರಿಗೂ ನಿವೇಶನ ನೀಡುವ ಬಗ್ಗೆ ಶೀಘ್ರದಲ್ಲೇ ರೂಪುರೇಷೆ ಸಿದ್ಧಪಡಿಸಲಾಗುವುದು. ಕೊನೆ ಘಳಿಗೆಯಲ್ಲಿ ಪತ್ರಕರ್ತರು ತಮದೇ ಆದ ಗೂಡನ್ನು ಕಟ್ಟಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಪತ್ರಿಕೋದ್ಯಮದ ಗುರಿ ಜನಸೇವೆ ಮತ್ತು ದೇಶಸೇವೆ ಮಾಡಬೇಕೆಂಬುದೇ ಆಗಿದೆ ಎಂಬುದನ್ನು ಮಹಾತಗಾಂಧೀಜಿಯವರು ಹೇಳಿದ್ದಾರೆ ಎಂದು ಹೇಳಿದರು.ಕರ್ನಾಟಕದಲ್ಲಿ ಪತ್ರಿಕರ್ತರಿಗೆ ಇರುವ ಸ್ವಾತಂತ್ರ್ಯ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ನಮನ್ನು ಟೀಕೆ ಮಾಡುತ್ತೀರಿ. ಮೇಲಕ್ಕೇರಿಸುತ್ತೀರಿ. ಹಳ್ಳಕ್ಕೂ ತಳ್ಳುತ್ತೀರಿ ಎಂದರು.
ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮವಾಗಿದ್ದು, ಟೀಕೆ ಮಾಡಿ ತಪ್ಪುಗಳಾದಾಗ ತಿದ್ದಿತೀಡಿ ಜನರ ಭಾವನೆಯನ್ನು ಅರಿತು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿ ಅಂತಹ ಜವಾಬ್ದಾರಿ ಮಾಧ್ಯಮದ ಮೇಲೆ ಇದೆ ಎಂದು ಅವರು ತಿಳಿಸಿದರು.
ಸತ್ಯ ಬರೆಯುವ, ಸತ್ಯ ನುಡಿಯುವ, ಸತ್ಯಕ್ಕೆ ಗೌರವ ಕೊಡುವ ಕರ್ತವ್ಯ ಪತ್ರಕರ್ತರು ಹಾಗೂ ರಾಜಕಾರಣಿಗಳಲ್ಲಿ ಇರಬೇಕು. ನಮಲ್ಲಿರುವ ತಪ್ಪುಗಳನ್ನು ತಿದ್ದುವ ದೊಡ್ಡ ಹಕ್ಕು ಮಾಧ್ಯಮದ ಮೇಲಿದೆ. ಸಮಾಜ, ಅಧಿಕಾರಿ ಹಾಗೂ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುವ ಶಕ್ತಿಯೂ ಮಾಧ್ಯಮಕ್ಕಿದೆ ಎಂದರು.
ಪತ್ರಕರ್ತರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವ ಪ್ರಯತ್ನ ಆಗುತ್ತಿದೆ ಎಂದ ಅವರು, ಸರ್ಕಾರವನ್ನೇ ಬದಲಾವಣೆ ಮಾಡಿದ, ಒಬ್ಬರನ್ನು ನಾಯಕರನ್ನು ಮಾಡಿದ ಶಕ್ತಿ ಮಾಧ್ಯಮಕ್ಕಿದೆ. ಸುಳ್ಳು ಸುದ್ದಿ ಹರಡುವುದಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದರು.ನಮ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕೋದ್ಯಮ ಕೋರ್ಸ್ ಅನ್ನು ಪ್ರಾರಂಭಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಾಧ್ಯಮ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆರೆತು ಹೋಗಿದೆ. ಜಾಹೀರಾತು ಇಲ್ಲದೆ ಏನು ಮಾಡಲೂ ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆಗಳು ಏರಿಕೆಯಾಗುತ್ತಿವೆ. ಗ್ಯಾರಂಟಿ ಘೋಷಣೆ ಮಾಡಿದಾಗ ಆರ್ಥಿಕ ಪರಿಸ್ಥಿತಿಯ ಅರಿವು ಇತ್ತು ಎಂದು ಅವರು ಹೇಳಿದರು. ನಿಮ ಆಶೀರ್ವಾದ ನನ್ನ ಮೇಲೆ ಹಾಗೂ ಸರ್ಕಾರದ ಮೇಲಿರಲಿ ಎಂದು ಅವರು ಕೋರಿದರು.
ಗ್ರಾಮೀಣ ಭಾಗದಲ್ಲೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ವೃತ್ತಿಯಲ್ಲಿ ಬೆಳೆದು ನಾಯಕರಾಗುವ ಅವಕಾಶವೂ ಇದೆ, ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಅವರು ಕರೆ ನೀಡಿದರು. ಅಭಿಮಾನಿ ದತ್ತಿ ಪ್ರಶಸ್ತಿಯನ್ನು ಕನ್ನಡಮ ಪತ್ರಿಕೆಯ ರವಿಕುಮಾರ ಚನ್ನಬಸಪ್ಪ ಕಗ್ಗಣ್ಣವರ, ವಿಜಯಕರ್ನಾಟಕ ಪತ್ರಿಕೆಯ ವಿಜಯ್ ಕೋಟಾನ್ ಪಡು, ಪ್ರಜಾವಾಣಿ ಪತ್ರಿಕೆಯ ಕೆ.ಓಂಕಾರಮೂರ್ತಿ ಮತ್ತು ಡಿ.ಎಂ.ಕುರ್ಕೆ ಪ್ರಶಾಂತ್ ಅವರಿಗೆ ಹಾಗೂ ಅರಗಿಣಿ ಪ್ರಶಸ್ತಿಯನ್ನು ಶ್ಯಾಮ್ಪ್ರಸಾದ್ ಅವರಿಗೆ ನೀಡಲಾಯಿತು.
ಅಕಾಡೆಮಿಯ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಹಾಗೂ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರಶಸ್ತಿ ಪುರಸ್ಕೃತರಿಗೆ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಬಿ.ಬಿ.ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ಲಿಂಬಾಳ್ಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆಯೇಶಾ ಖಾನಂ, ಕಾರ್ಯದರ್ಶಿ ಸಹನಾ ಹಾಗೂ ಅಕಾಡೆಮಿಯ ಸದಸ್ಯರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಮೌಲ್ಯ ಕಾಪಾಡುವುದು ಅಗತ್ಯ:ಪ್ರಭಾಕರ್
ಬೆಂಗಳೂರು,ಫೆ.3- ಪತ್ರಿಕೋದ್ಯಮ ಜನರ ಪ್ರಾಣವಾಯು ಎನ್ನುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು ಮತ್ತು ಮೌಲ್ಯವನ್ನು ಕಾಪಾಡಲು ಮತ್ತು ವಿಸ್ತರಿಸಲು ಪೂರಕವಾದ ಕಾರ್ಯಕ್ರಮಗಳನ್ನು ಮಾಧ್ಯಮ ಅಕಾಡೆಮಿ ರೂಪಿಸಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ನುಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪುರಸ್ಕೃತರಿಗೆ ಅಭಿನಂದಿಸಿ ಮಾತನಾಡಿದರು.
ಜನರ, ಸಮಾಜದ ಪ್ರಾಣವಾಯು ಆಗಿರುವ ಪತ್ರಿಕಾ ವೃತ್ತಿಯ ಉಸಿರನ್ನು ಕಾಪಾಡಲು ನಮ ಸಂವಿಧಾನ ಇದೆ. ನಮ ಸಂವಿಧಾನ ಕತೃ ಆದ ಅಂಬೇಡ್ಕರ್ ಅವರೇ ಹೇಳಿರುವ ರೀತಿ ಪತ್ರಿಕಾ ವೃತ್ತಿ ನಿಜವಾದ ಪ್ರಾಣವಾಯು ಆಗಿ ಉಳಿಯಬೇಕು. ಈ ದಿಕ್ಕಿನಲ್ಲಿ ನಮ ಮಾಧ್ಯಮ ಅಕಾಡೆಮಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಅಚ್ಚು ಮೊಳೆ ಅವಧಿಯಿಂದ ಕೃತಕ ಬುದ್ದಿಮತ್ತೆವರೆಗೂ ಪತ್ರಿಕಾ ವೃತ್ತಿ ಬೆಳೆದಿದೆ. ತಂತ್ರಜ್ಞಾನದಲ್ಲಿ ನಮ ವೃತ್ತಿ ಎಷ್ಟೇ ಮುಂದುವರೆದಿದ್ದರೂ ಸತ್ಯ ಮತ್ತು ನಿಷ್ಠುರ ಮೌಲ್ಯಗಳು ಮಾತ್ರ ಬದಲಾಗಬಾರದು. ಆದರೆ ಇಂದು ಊಹಾ ಪತ್ರಿಕೋದ್ಯಮ, ಕಾಲ್ಪನಿಕ ಪತ್ರಿಕೋದ್ಯಮ ಮತ್ತು ಸುಳ್ಳು ಸುದ್ದಿಗಳ ಹಾವಳಿ ಇಂದು ಹೆಚ್ಚಾಗಿದೆ. ಈ ವಿಚಾರದಲ್ಲಿ ನ್ಯೂಸ್ ರೂಮ್‌ಗಳು ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಅಗತ್ಯವಿದೆ ಎಂದರು.
ಎರಡು ವರ್ಷಗಳಿಂದ ಪ್ರಶಸ್ತಿಗಳನ್ನು ನೀಡಿರಲಿಲ್ಲ. ನಮ ಇಲಾಖೆಯ ನಾನಾ ವಿಭಾಗಗಳ ಪ್ರಶಸ್ತಿಗಳು ಐದು ವರ್ಷಗಳಿಂದ ಬಾಕಿ ಇದ್ದವು. ನಮ ಅವಧಿಯಲ್ಲಿ ಎಲ್ಲವನ್ನೂ ವಿತರಿಸುವ ಕೆಲಸ ಮಾಡಿದ್ದೇವೆ ಎಂದರು. ಪತ್ರಕರ್ತ ಕುಟುಂಬಗಳ ಆರೋಗ್ಯ, ಆರೋಗ್ಯ ವಿಮೆ, ಉಚಿತ ಬಸ್ ಪಾಸ್, ನಿವೃತ್ತಿ ವೇತನ ಹೆಚ್ಚಳ ಸೇರಿದಂತೆ ಹತ್ತಾರು ವರ್ಷಗಳಿಂದ ಬಾಕಿ ಇದ್ದ ನಮ ಸಮುದಾಯದ ಬೇಡಿಕೆಗಳೆಲ್ಲವನ್ನೂ ಈಡೇರಿಸುತ್ತಿದ್ದೇವೆ ಎಂದು ವಿವರಿಸಿದರು.