ಬೆಂಗಳೂರು,ಫೆ.3- ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ಕೋಟ್ಯಂತರ ರೂ. ಹಣ ಲಪಟಾಯಿಸಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಈ ಕುರಿತಂತೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ಬಹತ್ ಬೆಂಗಳೂರು ಮಹಾನಗರ ಪಾಲಿಕೆಯ 27 ವಿಧಾನಸಭಾ ಕ್ಷೇತ್ರಗಳ ಪೈಕಿ ಗಾಂಧಿನಗರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಇನ್ನುಳಿದ 26 ವಿಧಾನಸಭಾ ಕ್ಷೇತ್ರಗಳ ವಾರ್ಡ್ ಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಪ್ರತೀ ವಾರ್ಡಿನಲ್ಲಿ ಸರಾಸರಿ 15 ರಿಂದ 16 ಲಕ್ಷ ರೂಪಾಯಿಗಳಷ್ಟು ಹಣ ವೆಚ್ಛವಾಗುತ್ತಿದ್ದರೆ, ಈ ಕ್ಷೇತ್ರದಲ್ಲಿ ಮಾತ್ರ ಪ್ರತೀ ವಾರ್ಡಿಗೆ ಸರಾಸರಿ 36,73,320 ರೂ.ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ಧಾರೆ.
ಹೀಗಾಗಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 07 ವಾರ್ಡ್ ಗಳ ತ್ಯಾಜ್ಯ ವಿಲೇವಾರಿ ಕಾರ್ಯಗಳಿಗೆ ಪ್ರತೀ ತಿಂಗಳಿಗೆ 2,57,13,239 ರೂಪಾಯಿಗಳಷ್ಟು ಹಣವನ್ನು ವೆಚ್ಛ ಮಾಡಲಾಗುತ್ತಿದೆ. ಅಂದರೆ ಒಂದು ವರ್ಷದಲ್ಲಿ 30,85,58,875 ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಗಳಲ್ಲಿ ಮೂರು ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ಮಾಡುತ್ತಿರುವವರು ಬಹುತೇಕ ಗಾಂಧಿನಗರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಬಿಎಂಪಿ ನೌಕರರ ರಕ್ತ ಸಂಬಂಧಿಗಳೇ ಆಗಿರುವುದರಿಂದ ಈ ವಿಷಯವನ್ನುಗಂಭೀರವಾಗಿ ಪರಿಗಣಿಸುವಂತೆ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ಪತ್ರ ಬರೆದಿದ್ದಾರೆ.
ಕಿರಿಯ ಆರೋಗ್ಯ ಪರಿವೀಕ್ಷಕ ಕಷ್ಣ ಎಂಬ ನೌಕರನ ಪತ್ನಿ ಸುನಿತಾ ಎಂಬುವವರಿಗೆ ತ್ಯಾಜ್ಯ ವಿಲೇವಾರಿ ಕಾರ್ಯಾದೇಶ ನೀಡಲಾಗಿದೆ. ಕಳೆದ ಒಂದು ವರ್ಷದಲ್ಲಿ 25,19,481/- ರೂಪಾಯಿಗಳಷ್ಟು ಮೊತ್ತವನ್ನು ಮತ್ತು ಆತನ ಬಾಮೈದುನ ಚಂದ್ರಶೇಖರ್ ಎಂಬುವರು ಮಧ್ಯಾಹ್ನದ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಕಾರ್ಯಾದೇಶ ಪತ್ರವನ್ನು ಪಡೆದು ಕಳೆದ ಒಂದು ವರ್ಷದಲ್ಲಿ 25,01,340/- ರೂಪಾಯಿಗಳಷ್ಟು ಮೊತ್ತವನ್ನು ಪಡೆದು ಮಹಾ ವಂಚನೆ ಮಾಡಲಾಗಿದೆ.
ಅದೇ ರೀತಿ ಪಶ್ಚಿಮ ವಲಯದ ಉಪ ಹಣಕಾಸು ನಿಯಂತ್ರಕರ ಕಛೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿರುವ ಲೋಕೇಶ್ವರಿ ಎಂಬುವರ ಪತಿ ರಾಮಚಂದ್ರ ಮಾವ ಮುನಿಯಪ್ಪ ವಿ, ನಾದಿನಿ ವರಲಕ್ಷಿ ಮತ್ತು ರಕ್ತಸಂಬಂಧಿ ನಿತ್ಯ ಸಿ ಎಂಬುವವರ ಹೆಸರುಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ 67,15,033/- ರೂಪಾಯಿಗಳಷ್ಟು ಬಹತ್ ಮೊತ್ತವನ್ನು ಪಾಲಿಕೆಯಿಂದ ಪಡೆದಿದ್ದಾರೆ.
ಖಾಯಂ ಪೌರಕಾರ್ಮಿಕನಾಗಿ ಗಾಂಧಿನಗರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾರಾಯಣ್ ಎಂಬಾತ ತನ್ನ ಪತ್ನಿಯ ಮಾಲೀಕತ್ವದ ಐಶ್ವರ್ಯ ಎಂಟರ್ ಪ್ರೈಸಸ್ ಹೆಸರಿನಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ 2,62,32,260/- ರೂಪಾಯಿಗಳಷ್ಟು ಮೊತ್ತವನ್ನು ಪಾಲಿಕೆಯಿಂದ ಪಡೆದಿದ್ದಾರೆ.
ಈ ಕೂಡಲೇ ಗಾಂಧಿನಗರ ವಿಧಾನಸಭಾ ಕ್ಷೇತ್ರವನ್ನೂ ಸಹ ಇನ್ನುಳಿದ 26 ವಿಧಾನಸಭಾ ಕ್ಷೇತ್ರಗಳಂತೆಯೇ ನಿಯಮಾನುಸಾರ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಾರ್ಯಾದೇಶ ಪತ್ರ ಪಡೆದಿರುವ ಗುತ್ತಿಗೆದಾರರಿಗೆ ಮಾತ್ರ ಬೆಳಗಿನ ಪಾಳಿಯಲ್ಲಿ ಮಾತ್ರವೇ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟು, ಇನ್ನುಳಿದಂತೆ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮಧ್ಯಾಹ್ನದ ಪಾಳಿ ಮತ್ತು ರಾತ್ರಿಯ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಾದೇಶ ಪತ್ರಗಳನ್ನು ಪಡೆದುಕೊಂಡಿರುವ ಎಲ್ಲಾ ಕಾರ್ಯಾದೇಶ ಪತ್ರಗಳನ್ನು ರದ್ದುಗೊಳಿಸಿ, ಈವರೆವಿಗೆ ಈ ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವ ಹೆಸರಿನಲ್ಲಿ ಲೂಟಿ ಮಾಡಿರುವ ಹಣವನ್ನು ಆಯಾ ವಂಚಕ ಗುತ್ತಿಗೆದಾರರು ಮತ್ತು ಅವರೊಂದಿಗೆ ಶಾಮೀಲಾಗಿರುವ ಎಇಇ ಲಕ್ಷ್ಮಣ್ ನಾಯಕ್ ಮತ್ತಿತರ ಅಧಿಕಾರಿಗಳಿಂದ ವಸೂಲಿ ಮಾಡುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಆಯಾ ಗುತ್ತಿಗೆದಾರರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.