ಜೈಪುರ, ಜ. 27 (ಪಿಟಿಐ) ರಾಜಸ್ಥಾನದ ದೌಸಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಇಂದು ಮುಂಜಾನೆ ವೇಗವಾಗಿ ಬಂದ ಕಾರು ಹಿಂದಿನಿಂದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಪರ್ಡಾ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ.ಕಾರು ಟ್ರಕ್‌ನ ಕೆಳಗೆ ಸಿಲುಕಿಕೊಂಡು ಕೆಲವು ಕಿಲೋಮೀಟರ್‌ಗಳವರೆಗೆ ಎಳೆಯಲ್ಪಟ್ಟಿತು ಎಂದು ಅವರು ಹೇಳಿದರು.ಐವರು ಯಾತ್ರಿಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ದೀಪಕ್ ಮೀನಾ ತಿಳಿಸಿದ್ದಾರೆ. ಅವರು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ನೋಯ್ಡಾಗೆ ಹಿಂತಿರುಗುತ್ತಿದ್ದರು.
ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರು ಲಾಲ್ಸೋಟ್‌ನಿಂದ ದೆಹಲಿಯ ಕಡೆಗೆ ಹೋಗುತ್ತಿದ್ದಾಗ, ಅದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅತಿ ವೇಗದಿಂದಾಗಿ, ಕಾರು ಟ್ರಕ್‌ನ ಹಿಂಭಾಗದಲ್ಲಿ ಸಿಲುಕಿಕೊಂಡು ಕೆಲವು ಕಿಲೋಮೀಟರ್‌ಗಳವರೆಗೆ ಎಳೆಯಲ್ಪಟ್ಟಿತು ಎಂದು ಮೀನಾ ಹೇಳಿದರು.
ನಾಲ್ವರು ಪ್ರಯಾಣಿಕರು – ರಾಹುಲ್ ಗುಪ್ತಾ (35), ಪರಾಸ್ ಅಗರ್‌ವಾಲ್ (35), ಪ್ರಿನ್‌್ಸ ಗುಪ್ತಾ (23) ಮತ್ತು ವಿಕ್ರಮ್ ಸಿಂಗ್ (30) ಸ್ಥಳದಲ್ಲೇ ಸಾವನ್ನಪ್ಪಿದರೆ, ಹಿಂದೆ ಕುಳಿತಿದ್ದ ಐದನೇ ಪ್ರಯಾಣಿಕ ಬ್ರಿಜ್‌ಮೋಹನ್ ಗುಪ್ತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ದೌಸಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.
