ನವದೆಹಲಿ,ಫೆ.04- ದೇಶದಲ್ಲಿ ಕೆಲಸದ ಅವಧಿಯನ್ನು ವಾರಕ್ಕೆ 70 ಹಾಗೂ 90 ಗಂಟೆಗೆ ಹೆಚ್ಚಿಸುವಂತ ಯಾವ ಪ್ರಸ್ತಾವನೆಗಳೂ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಕೆಲ ಉದಿಮೆಗಳ ಮಾಲೀಕರಿಂದ ವ್ಯಕ್ತವಾಗುತ್ತಿರುವ ಪರ-ವಿರೋಧ ಚರ್ಚೆ ನಡುವೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ. ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ,ಕೆಲಸದ ಅವಧಿಯನ್ನು ವಾರದಲ್ಲಿ 70 ಅಥವಾ 90 ಗಂಟೆಗೆ ಏರಿಕೆ ಮಾಡುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇಲ್ಲ.
ನೌಕರರು ಸಮವರ್ತಿ ಪಟ್ಟಿಯ ಅಡಿ ಬರುವುದರಿಂದ ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.
ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಸಲ್ಲಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ, ವಾರದಲ್ಲಿ 60 ಗಂಟೆ ಕೆಲಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
12 ಗಂಟೆಗಿಂತಲೂ ಅಧಿಕ ಕುಳಿತು ಕೆಲಸ ಮಾಡುವವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ. ಇದರಿಂದ ಆರ್ಥಿಕವಾಗಿಯೂ ನಷ್ಟವಾಗುತ್ತದೆ ಎಂದು ತಿಳಿಸಲಾಗಿದೆ. ಪ್ರಸ್ತುತ ಇರುವ ಕಾರ್ಮಿಕ ಕಾನೂನುಗಳ ಪ್ರಕಾರ ನೌಕರರ ದುಡಿಮೆ ಸಮಯ ಸೇರಿದಂತೆ ಹಲವು ವಿಷಯಗಳನ್ನು ಕಾರ್ಖಾನೆ ಕಾಯ್ದೆ 1948, ಅಂಗಡಿ ಮತ್ತು ಸಂಸ್ಥೆಗಳ ಕಾಯ್ದೆ ಅಡಿಯಲ್ಲಿ ನಿರ್ಧಾರಿತವಾಗುತ್ತಿವೆ.