ಬೆಂಗಳೂರು,ಫೆ.4– ಬಾಂಗ್ಲಾದೇಶದ ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ವೆಸಗಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ವಾಟರ್ ಟ್ಯಾಂಕರ್ ಚಾಲಕನನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬಾಗಲಕೋಟೆಯ ಮುದಕಣ್ಣ ಅಲಿಯಾಸ್ ಉಪೇಂದ್ರ ಅಲಿಯಾಸ್ ದಸ್ತಗೀರ್(30) ಬಂಧಿತ ಆರೋಪಿ. ಈತ ಸರಾಯಿಪಾಳ್ಯದಲ್ಲಿ ವಾಸವಾಗಿದ್ದನು. ಬಾಂಗ್ಲಾದೇಶದ ಕುಟುಂಬವೊಂದು ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕೆರೆಯಲ್ಲಿ ವಾಸವಾಗಿದ್ದು, ಮಹಿಳೆ ನಜಾ (28) ಅಪಾರ್ಟ್ಮೆಂಟ್ ವೊಂದರಲ್ಲಿ ಮನೆಗೆಲಸ ಮಾಡುತ್ತಿದ್ದರು.
ಇದೇ ಏರಿಯಾದಲ್ಲಿ ಆರೋಪಿ ಮದಕಣ್ಣ ಟ್ಯಾಂಕರ್ನಲ್ಲಿ ವಾಟರ್ ಸಪ್ಲೈ ಮಾಡುತ್ತಿದ್ದನು. ಆ ವೇಳೆ ಆ ಮಹಿಳೆಯನ್ನು ನೋಡಿದ್ದಾನೆ. ತದ ನಂತರ ಆಕೆಯನ್ನು ಮಾತನಾಡಿಸಿದ್ದನು.ಜ.22ರಂದು ಮಹಿಳೆ ಮನೆಗೆಲಸಕ್ಕೆ ಹೋಗಿ ಮಧ್ಯಾಹ್ನ ಮನೆಗೆ ವಾಪಸಾಗುತ್ತಿದ್ದಾಗ ಆರೋಪಿ ವಾಟರ್ ಟ್ಯಾಂಕ್ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಹಿಂಬಾಲಿಸಿಕೊಂಡು ಹೋಗಿ ಕಲ್ಕೆರೆ ಲೇಕ್ನ ನಿರ್ಜನ ಪ್ರದೇಶದ ಬಳಿ ಆಕೆಯ ಬಾಯಿ ಮುಚ್ಚಿ ಬಲವಂತವಾಗಿ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ.
ನಂತರ ಆಕೆ ಧರಿಸಿದ್ದ ವೇಲ್ನಿಂದಲೇ ಕತ್ತು ಬಿಗಿದು ಕೊಲೆ ಮಾಡಿ ಶವವನ್ನು ಪೊದೆಗೆ ಎಸೆದು ತಲೆ ಮೇಲೆ ಕಲ್ಲುಎತ್ತಿ ಹಾಕಿ ಸ್ಥಳದಿಂದ ಪರಾರಿಯಾಗಿ, ತನ್ನ ಪಾಡಿಗೆ ತನ್ನ ಕೆಲಸದಲ್ಲಿ ತೊಡಗಿದ್ದಾನೆ.ಇತ್ತ ಮನೆಗೆಲಸಕ್ಕೆ ಹೋಗಿದ್ದ ಪತ್ನಿ ಮನೆಗೆ ಹಿಂದಿರುಗದಿದ್ದಾಗ ಪತಿ ಹುಡುಕಾಡಿ ನಂತರ ರಾಮಮೂರ್ತಿನಗರ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಆದರೆ ಬೆಳಗಾಗುವಷ್ಟರಲ್ಲಿ ಈ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆ ಶವ ಕಂಡು ಪೊಲೀಸರಿಗೆ ದಾರಿ ಹೋಕರು ವಿಷಯ ತಿಳಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಈ ಮಹಿಳೆಯನ್ನು ಅತ್ಯಾಚಾರ ವೆಸಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಂತರ ಶವವನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದರು.
ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪತಿ ಹಾಗೂ ಆಕೆಯ ಸಹೋದರನನ್ನು ವಿಚಾರಣೆ ನಡೆಸಿ ವಿವರಗಳನ್ನು ಪಡೆದು ಆಕೆಯ ಮೊಬೈಲ್ ಪರಿಶೀಲಿಸಿದರೂ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ.
ಆರೋಪಿ ಪತ್ತೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳು ಹಾಗೂ ತಾಂತ್ರಿಕ ಸಾಕ್ಷಾಧಾರಗಳನ್ನು ಆಧರಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.