ಹಾಸನ,ಫೆ.5- ಇತ್ತೀಚೆಗೆ ನಗರದ ಹೊರವಲಯದಲ್ಲಿ ಕಳ್ಳತನವಾಗಿದ್ದ ಎಟಿಎಂ ಯಂತ್ರ ನಾಲೆಯಲ್ಲಿ ಪತ್ತೆಯಾಗಿದೆ.ಶಂಕರನಹಳ್ಳಿ ಗ್ರಾಮದ ಬಳಿಯಿರುವ ನಾಲೆಯಲ್ಲಿ ಎಟಿಎಂ ಮೆಷಿನ್ ಪತ್ತೆಯಾಗಿದ್ದು, ಹಣ ತೆಗೆದುಕೊಂಡು ಕಳ್ಳರು ಯಂತ್ರವನ್ನು ನಾಲೆಗೆ ಎಸೆದು ಹೋಗಿದ್ದಾರೆ.
ಕಳೆದ ಜ.29 ರಂದು ಹನುಮಂತಪುರದಲ್ಲಿನ ಇಂಡಿಯ-1 ಎಟಿಎಂ ಯಂತ್ರವನ್ನು ಕಳ್ಳರು ಹೊತ್ತೊಯ್ದಿದ್ದರು.ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಾಸನ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ವಿವಿಧೆಡೆ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಕೂಡ ಪತ್ತೆಯಾಗಿರಲಿಲ್ಲ. ನಗರದ ಹೊರವಲಯದ ಶಂಕರನಹಳ್ಳಿ ಗ್ರಾಮದ ಬಳಿ ಇರುವ ನಾಲೆಯಲ್ಲಿ ಯಂತ್ರ ಪತ್ತೆಯಾಗಿದ್ದು, ಹಣವನ್ನು ಕಳ್ಳರು ಹೊತ್ತೊಯ್ದಿರುವುದು ಬೆಳಕಿಗೆ ಬಂದಿದೆ.
ಆದರೆ ಯಂತ್ರದಲ್ಲಿ ಎಷ್ಟು ದುಡ್ಡಿತ್ತು ಎಂಬುದು ತಿಳಿದುಬಂದಿಲ್ಲ.