ನವದೆಹಲಿ, ಫೆ 5 (ಪಿಟಿಐ) ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವರಾದ ಎಸ್ ಜೈಶಂಕರ್ ಮತ್ತು ಹರ್ದೀಪ್ ಸಿಂಗ್ ಪುರಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತಿತರ ಗಣ್ಯರು ಇಂದು ತಮ ಮತದಾನದ ಹಕ್ಕು ಚಲಾಯಿಸಿದರು.
ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಎಎಪಿ ನಾಯಕ ಮತ್ತು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ, ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಮತ್ತು ದೆಹಲಿ ಮುಖ್ಯ ಚುನಾವಣಾಧಿಕಾರಿ ಆರ್ ಆಲಿಸ್ ವಾಜ್ ಮತ್ತಿತರರು ಮತದಾನದಲ್ಲಿ ಪಾಲ್ಗೊಂಡಿದ್ದರು.
ಎಎಪಿಯ ಗ್ರೇಟರ್ ಕೈಲಾಶ್ ಅಭ್ಯರ್ಥಿ ಸೌರಭ್ ಭಾರದ್ವಾಜ್, ಬಿಜೆಪಿಯ ಕರವಾಲ್ ನಗರ ಅಭ್ಯರ್ಥಿ ಕಪಿಲ್ ಮಿಶ್ರಾ, ಕಾಂಗ್ರೆಸ್‌ನ ನವದೆಹಲಿ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಮತ್ತು ಕಲ್ಕಾಜಿ ಅಭ್ಯರ್ಥಿ ಅಲ್ಕಾ ಲಂಬಾ ಕೂಡ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾದ ಕೂಡಲೇ ತಮ ಹಕ್ಕು ಚಲಾಯಿಸಿದರು.
ಮತ ಚಲಾಯಿಸಿದ ಬಳಿಕ ಮಾತನಾಡಿದ ಎಲ್ ಜಿ ಸಕ್ಸೇನಾ, ಇದು ಪ್ರಜಾಪ್ರಭುತ್ವದ ಹಬ್ಬ, ಈ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಎಲ್ಲ ದೆಹಲಿಯ ಜನತೆಗೆ ನಾನು ಮನವಿ ಮಾಡುತ್ತೇನೆ, ಇಂದು ಕರ್ತವ್ಯದ ದಿನ, ರಜೆಯಲ್ಲ ಎಂದು ಹೇಳಿದರು.
ಜೈಶಂಕರ್ ಮಾತನಾಡಿ, ನಾನು ಯಾವಾಗಲೂ ಆರಂಭಿಕ ಮತದಾರ, ದೆಹಲಿ ಮತದಾರ. ಜನರು ಬದಲಾವಣೆಯ ಮನಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು. ದೆಹಲಿ ಸಿಎಂ ಮತ್ತು ಕಲ್ಕಾಜಿಯ ಎಎಪಿ ಅಭ್ಯರ್ಥಿ ಅತಿಶಿ ಅವರು ಮತ ಚಲಾಯಿಸುವ ಮೊದಲು ಕಲ್ಕಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಚುನಾವಣೆ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಯುದ್ಧವಾಗಿದೆ, ಇದು ಕೆಲಸ ಮತ್ತು ಗೂಂಡಾಗಿರಿಯ ನಡುವಿನ ಯುದ್ಧ ಎಂದು ಅವರು ಹೇಳಿದರು. ನಾನು ಉತ್ತಮ ದೆಹಲಿಗಾಗಿ ಮತ್ತು ಜನರ ಉತ್ತಮ ಜೀವನಕ್ಕಾಗಿ ನನ್ನ ಮತವನ್ನು ಚಲಾಯಿಸಿದ್ದೇನೆ. ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಮತ್ತು ಇತರ ಸೌಲಭ್ಯಗಳಿಗಾಗಿ ಮತ ಚಲಾಯಿಸುವಂತೆ ನಾನು ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದು ಜಂಗ್‌ಪುರ ಕ್ಷೇತ್ರದ ಎಎಪಿ ಅಭ್ಯರ್ಥಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.