ಬೆಂಗಳೂರು, ಫೆ.5– ಶ್ರೀ ಕಾಳಿದಾಸ ಸಹಕಾರ ಬ್ಯಾಂಕ್ ನಿಯಮಿತಕ್ಕೆ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಸಿ.ಕೃಷ್ಣಪ್ಪ ಹಾಗೂ ಉಪಾಧ್ಯಕ್ಷರಾಗಿ ವೈ.ಸರೋಜಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಪ್ರಮುಖ ಸಹಕಾರ ಬ್ಯಾಂಕ್‌ಗಳಲ್ಲಿ ಒಂದಾದ ಶ್ರೀ ಕಾಳಿದಾಸ ಸಹಕಾರ ಬ್ಯಾಂಕ್ ಗ್ರಾಹಕರಿಗಾಗಿ ಹಲವಾರು ಸಾಲ ಸೌಲಭ್ಯ ಯೋಜನೆ ಜಾರಿಗೆ ತಂದು ನೀಡುತ್ತಾ ಬಂದಿದೆ. ಜತೆಗೆ ಸಮುದಾಯದ ಅಭಿವೃದ್ಧಿಗೂ ಸಹ ಶ್ರಮಿಸುತ್ತಿದ್ದು, ಬ್ಯಾಂಕ್ ಉತ್ತಮ ಕಾರ್ಯನಿರ್ವಹಣೆ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಿನ್ನೆ ನಡೆದ ಚುನಾವಣೆಯಲ್ಲಿ ಕೃಷ್ಣಪ್ಪ ಹಾಗೂ ಸರೋಜಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ನಿರ್ದೇಶಕರಾಗಿ ಸಿ.ಎನ್. ಗೋವಿಂದಪ್ಪ, ಬಿ.ಡಿ.ರಾಜು, ಎಂ.ಸಿ.ಮುದ್ದಯ್ಯ, ಆರ್. ರಾಮಕೃಷ್ಣಪ್ಪ, ಎಂ.ಗಂಗಾಧರ್, ಆರ್.ಲಿಂಗಣ್ಣ, ಎಂ.ಕೆ.ಗುರುಮೂರ್ತಿ, ಎಸ್.ಚಂದ್ರಣ್ಣ, ಎಂ.ಎಸ್. ಪ್ರೇಮಲತಾ, ಡಾ.ಪದ ಪ್ರಕಾಶ್, ಬಿ.ಎಲ್.ಸುರೇಶ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ವಿ.ಹರೀಶ್‌ಕುಮಾರ್ ಘೋಷಿಸಿದ್ದಾರೆ.
ಗಾಂಧಿನಗರ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ 1977ರಿಂದಲೂ ಗ್ರಾಹಕರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡುತ್ತ ಬಂದಿದ್ದು, ಬ್ಯಾಂಕ್‌ನ ಅಭಿವೃದ್ಧಿ ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತ ಬಂದಿದೆ. ಇದರಿಂದ ಹಲವಾರು ಜನರು ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ.ಸಿ.ಕೃಷ್ಣಪ್ಪ ಮಾತನಾಡಿ, ಸಂಘಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸರ್ವ ಸದಸ್ಯರುಗಳಿಗೆ, ನಿರ್ದೇಶಕರುಗಳಿಗೆ ಹಾಗೂ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಿದ್ದು, ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಹೊಸ ಹೊಸ ಯೋಜನೆ, ಸಾಲ ಸೌಲಭ್ಯಗಳನ್ನು ಬ್ಯಾಂಕ್‌ನಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ ಸೇವಾ ಜಾಲವನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.
ಪ್ರಸ್ತುತ ಕುರುಬರ ಸಂಘದ ಕಟ್ಟಡದಲ್ಲಿ ಶಾಖೆ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ನೂತನ ಕಟ್ಟಡ ನಿರ್ಮಾಣಕ್ಕೆ ಚಿಂತಿಸಲಾಗಿದೆ ಜೊತೆಗೆ ಮತ್ತೊಂದು ನೂತನ ಶಾಖೆಯನ್ನು ಸಹ ಪ್ರಾರಂಭಿಸಲಾಗುವುದು ವಾರ್ಷಿಕ 200 ಕೋಟಿ ವಹಿವಾಟು ನಡೆಸುತ್ತಿದ್ದು ಕಳೆದ ಆರ್ಥಿಕ ವರ್ಷಗಳಲ್ಲಿ ಬ್ಯಾಂಕ್ ಉತ್ತಮ ಲಾಭಗಳಿಸಿತ್ತು.
ಈ ಬಾರಿ ಮತ್ತಷ್ಟು ಲಾಭದ ನಿರೀಕ್ಷೆಯಲ್ಲಿದ್ದೇವೆ. ಬ್ಯಾಂಕಿನ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು 1977ರಂದು ಇಲ್ಲಿಯವರೆಗೂ ಉತ್ತಮ ಸೇವೆ ನೀಡುತ್ತಾ ಬಂದಿದೆ.ಮುಂದೆ ಸಹ ಮತ್ತಷ್ಟು ಸೇವೆಯನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಿದರು.