ಬೆಂಗಳೂರು,ಫೆ. 5– ಕುಡಿ ಯುವ ನೀರಿಗೆ ಕಲುಷಿತ ನೀರು ಸೇರಿದ ಪರಿಣಾಮ ಹಲವರು ಅನಾರೋಗ್ಯಕ್ಕೆ ತುತ್ತಾಗಿರುವ ಘಟನೆ ಪುಲಿಕೇಶಿ ನಗರದಲ್ಲಿ ನಡೆದಿದೆ.ಇಲ್ಲಿನ ಪೊಮೆನೇಡ್ ರಸ್ತೆ ಹಾಗೂ ಅಸ್ಸಾಯೆ ರಸ್ತೆಯಲ್ಲಿ ಕಲುಷಿತ ನೀರು ಸೇವಿಸಿದ ಹಲವಾರು ಮಂದಿಗೆ ಅತಿಸಾರ, ವಾಂತಿ ಮತ್ತು ನಿರ್ಜಲೀಕರಣದಿಂದ ಬಳಲುವಂತಾಗಿದೆ.
ಈ ರಸ್ತೆಗಳಲ್ಲಿರವು ಬಹುತೇಕ ಮನೆಗಳ ನಿವಾಸಿಗಳ ಆರೋಗ್ಯ ಹದಗೆಟ್ಟಿರುವುದರಿಂದ ಅಲ್ಲಿನ ಜನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿದೆ.ಇಲ್ಲಿನ ನೀರನ್ನು ಪ್ರಯೋಗಲಯ ಪರೀಕ್ಷೆ ನಡೆಸಿದಾಗ ನೀರಿನಲ್ಲಿ ಇ. ಕೋಲಿ ಮತ್ತು ಕ್ಲೆಬ್ಸಿಲ್ಲಾ ನ್ಯುಮೋನಿಯಾದಂತಹ ಅಂಶಗಳು ಪತ್ತೆಯಾಗಿರುವುದು ಗಾಬರಿ ಹುಟ್ಟಿಸಿದೆ.
ಜಲಮಂಡಳಿಯಿಂದ ಸರಬರಾಜಾಗುತ್ತಿರುವ ನೀರು ಕುಡಿಯಲು ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ಹಲವು ದಿನಗಳ ಹಿಂದೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಜಲಮಂಡಳಿ ಅಧಿಕಾರಿಗಳ ಬೇಜವಬ್ದಾರಿತನದಿಂದಾಗಿ ಇಂದು ಹಲವು ಮಂದಿ ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ.
ಜಲಮಂಡಳಿ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ಜನ ನಿನ್ನೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರನ್ನು ಭೇಟಿ ಮಾಡಿ ದೂರು ಕೊಟ್ಟ ಪರಿಣಾಮ ಕಲುಷಿತ ನೀರು ಕುಡಿಯುವ ನೀರಿಗೆ ಎಲ್ಲಿ ಸೇರ್ಪಡೆಯಾಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ಧಾರೆ.
ಆದರೆ, ಕುಡಿಯುವ ನೀರಿಗೆ ಎಲ್ಲಿ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ ಎನ್ನುವುದು ಪತ್ತೆಯಾಗಿಲ್ಲ. ಹೀಗಾಗಿ ಜನರಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿರುವ 30 ಕ್ಕೂ ಹೆಚ್ಚು ಜನರ ಆರೋಗ್ಯದ ಮೇಲೆ ನಿಗಾ ಇಡಲಾಗಿದ್ದು, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.