ಬೆಂಗಳೂರು,ಫೆ.5- ಪತ್ನಿಯ ಶೀಲ ಶಂಕಿಸಿ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಪತಿಯೇ ಕೊಲೆ ಮಾಡಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಶ್ರೀಗಂಗಾ(28)ಎಂಬಾಕೆಯೇ ಪತಿ ಮೋಹನ್ರಾಜ್ ಎಂಬಾತನಿಂದ ಕೊಲೆಯಾದ ಮಹಿಳೆ.
ಶ್ರೀಗಂಗಾ ಮತ್ತು ಮೋಹನ್ರಾಜ್ 7 ವರ್ಷದ ಹಿಂದೆ ಮದುವೆಯಾಗಿದ್ದು, ಒಂದು ಮಗುವಿದೆ. ಮೋಹನ್ ರಾಜ್ ಈ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಇತ್ತೀಚಿಗೆ ಯಾವ ಕೆಲಸಕ್ಕೂ ಹೋಗುತ್ತಿರಲಿಲ್ಲ.
ಈ ನಡುವೆ ದಂಪತಿ ಮಧ್ಯೆ ಜಗಳವಾಗುತಿತ್ತು. ಮೋಹನ್ ರಾಜ್ ಪತ್ನಿಯ ಶೀಲ ಶಂಕಿಸಿ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರಿಂದ ಪತಿಯಿಂದ ದೂರವಾಗಿ ಬೇರೆ ವಾಸವಾಗಿದ್ದುಕೊಂಡು ಡಿ-ಮಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ನನ್ನಿಂದ ದೂರವಾಗಿದ್ದಾಳೆಂದು ಮೋಹನ್ರಾಜ್ ಕೋಪಗೊಂಡು ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.
ಅದರಂತೆ ಇಂದು ಬೆಳಗ್ಗೆ 8.45ರ ಸುಮಾರಿನಲ್ಲಿ ಶ್ರೀಗಂಗಾ ಕೆಲಸಕ್ಕೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ವಿನಾಯಕ್ ನಗರದ ಬೆಸ್ಟ್ ಇಂಟರ್ನ್ಯಾಷನಲ್ ಶಾಲೆ ಗೇಟ್ ಬಳಿ ಪತ್ನಿಯನ್ನು ಅಡ್ಡ ಹಾಕಿ ಏಕಾಏಕಿ ಚಾಕುವಿನಿಂದ ದಾಳಿ ಮಾಡಿ ಮನಬಂದಂತೆ ದೇಹದ ವಿವಿಧ ಕಡೆಗಳಿಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಹೆಬ್ಬಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯನ್ನು ಇರಿದು ಕೊಲೆಮಾಡಿರುವುದನ್ನು ಕಂಡು ದಾರಿಹೋಕರು ಆತಂಕಗೊಂಡಿದ್ದಾರೆ.ಆರೋಪಿ ವಶಕ್ಕೆ: ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಮೋಹನ್ರಾಜ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.