ಬೆಂಗಳೂರು,ಫೆ.5- ಪ್ರಯಾಣಿಕರಿಗೆ ಬಿಎಂಟಿಸಿ ಬಸ್ಗಳಲ್ಲಿ ಟಿಕೆಟ್ ನೀಡಲು ಉಪಯೋಗಿಸುವ ಪೇಪರ್ ರೋಲ್ಗಳನ್ನು ತರಕಾರಿ ಮತ್ತು ಹಣ್ಣು ವ್ಯಾಪಾರಿ ಮಳಿಗೆಯಲ್ಲಿ ಉಪಯೋಗಿಸುತ್ತಿದ್ದ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲಹಂಕ ಉಪನಗರದ ಅಟ್ಟೂರು ಲೇಔಟ್, ಸಾಯಿಬಾಬ ದೇವಸ್ಥಾನ ಎದುರುಗಡೆ ಇರುವ ಎಸ್ಆರ್ಎಸ್ ತರಕಾರಿ ಮತ್ತು ಹಣ್ಣು ವ್ಯಾಪಾರ ಮಳಿಗೆಯಲ್ಲಿ ಈ ಪೇಪರ್ ರೋಲ್ಗಳನ್ನು ಉಪಯೋಗಿಸುತ್ತಿರುವ ಬಗ್ಗೆ ಗಮನಿಸಿದ ಸಾರ್ವಜನಿಕರೊಬ್ಬರು ತಮ ವಾಟ್ಸಪ್ ಮೂಲಕ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅವರಿಗೆ ಮಾಹಿತಿ ನೀಡಿರುತ್ತಾರೆ.
ಬಿಎಂಟಿಸಿ ಸಂಸ್ಥೆಯ ಶಾಂತಿನಗರ ಕೇಂದ್ರ ಕಚೇರಿಯಲ್ಲಿ ವಿಭಾಗಿಯ ಭದ್ರತಾ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಲರಾಮ್ ಲಮಾಣಿ ಅವರು ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಸಂಸ್ಥೆಯ ಭದ್ರತಾ ಮತ್ತು ಜಾಗೃತ ವಿಭಾಗದ ಕೆಎಸ್ಟಿ ಹವಲ್ದಾರ್ ಗಿರಿಬಾಬು ಅವರ ಮೂಲಕ ಹಣ್ಣು ಮತ್ತು ತರಕಾರಿ ಮಳಿಗೆಗೆ ಹೋಗಿ ಗೌಪ್ಯವಾಗಿ ಪರಿಶೀಲನೆ ಮಾಡಿಸಿದಾಗ, ಬಿಎಂಟಿಸಿ ಸಂಸ್ಥೆಯ ಹೆಸರಿನ ಎರಡು ಟಿಕೇಟ್ ರೋಲ್ಗಳು ಪತ್ತೆಯಾಗಿದ್ದು ಆ ರೋಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಂಸ್ಥೆಯ ಉಪಯೋಗಕ್ಕೆ ಬಳಸುವ ಈ ಪೇಪರ್ ರೋಲ್ಗಳನ್ನು ಕಳ್ಳತನ ಮಾಡಿ ತರಕಾರಿ ಮಳಿಗೆಯಲ್ಲಿ ಬಿಲ್ ನೀಡಲು ಮುರುಳಿ ಕೃಷ್ಣ ಎಂಬುವವರು ಉಪಯೋಗಿಸುತ್ತಿದ್ದು ಈ ರೋಲ್ಗಳನ್ನು ಕಳ್ಳತನ ಮಾಡಿದವರ ವಿರುದ್ಧ ಪ್ರಕರಣ ಕೈಗೊಳ್ಳಬೇಕೆಂದು ಬಲರಾಮ್ ಲಮಾಣಿ ಅವರು ದೂರು ನೀಡಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.