ಬೆಂಗಳೂರು,ಫೆ.5- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 160 ನಿವೇಶನಗಳನ್ನು ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಪುನಃ 812 ನಿವೇಶನಗಳನ್ನು ಜಪ್ತಿ ಮಾಡಲು ಇ.ಡಿ. ಮುಂದಾಗಿದೆ.
ಮುಡಾದ ಮಾಜಿ ಆಯುಕ್ತ ನಟೇಶ್ ಅಧಿಕಾರಾವಧಿಯಲ್ಲಿ ನಿವೇಶನಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಎಲ್ಲ ನಿವೇಶನಗಳನ್ನು ಜಪ್ತಿ ಮಾಡಿಕೊಳ್ಳಲು ತೀರ್ಮಾನಿಸಿದೆ.
ಈಗಾಗಲೇ ಈ ನಿವೇಶನಗಳನ್ನು ಯಾರೊಬ್ಬರ ಹೆಸರಿಗೆ ಬದಲಾವಣೆ ಇಲವೇ ನೋಂದಣಿ ಮಾಡದಂತೆ ಮೈಸೂರಿನಲ್ಲಿರುವ ಎಲ್ಲಾ ನೋಂದಣಿ ಕಚೇರಿ (ಸಬ್ ರಿಜಿಸ್ಟ್ರಾರ್) ಕಚೇರಿಗೆ ಪತ್ರ ಬರೆದಿದೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಒಂದು ನಿವೇಶನ ಮೌಲ್ಯ 81 ಕೋಟಿ ರೂ. ಇದೆ. ಮಾರುಕಟ್ಟೆ ದರ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯವಿದೆ. ರವಿ ಎಂಬುವರ ಹೆಸರಲ್ಲಿ 31 ನಿವೇಶನ, ಅಬ್ದುಲ್ ವಾಹಿದ್ ಎಂಬುವರ ಹೆಸರಲ್ಲಿ 41 ನಿವೇಶನ, ಕ್ಯಾಥಡ್ರಾಲ್ ಸೊಸೈಟಿ ಹೆಸರಿನಲ್ಲಿ 40 ನಿವೇಶನ, ಇತರರಿಗೆ ಸೇರಿದ 48 ನಿವೇಶನಗಳು ಸೇರಿದಂತೆ ಒಟ್ಟು 812 ನಿವೇಶನಗಳನ್ನು ಜಪ್ತಿ ಮಾಡಲು ಇ.ಡಿ. ಮುಂದಾಗಿದೆ.
2023ರ ಸೆಪ್ಟೆಂಬರ್ 11ರಂದು ರವಿ ಹೆಸರಲ್ಲಿ 31 ನಿವೇಶನಗಳು ನೋಂದಣಿಯಾಗಿವೆ. ಮೈಸೂರು ನಗರದ ಹೃದಯಭಾಗ ಕುವೆಂಪುನಗರದಲ್ಲಿನ 12 ನಿವೇಶನಗಳು, ದಟ್ಟಗಳ್ಳಿ, ವಿಜಯನಗರದಲ್ಲಿ 19 ನಿವೇಶನಗಳು ರವಿ ಹೆಸರಿಗೆ ನೋಂದಣಿಯಾಗಿವೆ.
ಇನ್ನು ಅಬ್ದುಲ್ ವಾಹಿದ್ ಎಂಬುವರ ಹೆಸರಿಗೆ 2023ರ ಮಾರ್ಚ್ 8ರಂದು ಒಂದೇ ದಿನದಲ್ಲಿ 28 ನಿವೇಶನಗಳು ನೋಂದಣಿಯಾಗಿವೆ. ಮತ್ತೆ 2023ರ ಸೆಪ್ಟೆಂಬರ್ 1ರಂದು ಅಬ್ದುಲ್ ವಾಹಿದ್ ಹೆಸರಿಗೆ 13 ವಿಜಯನಗರ, ಜೆ.ಪಿ.ನಗರ, ನಾಚನಹಳ್ಳಿಪಾಳ್ಯದಲ್ಲಿನ ನಿವೇಶನಗಳು ನೋಂದಣಿಯಾಗಿವೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ಡಿ.16ರಂದು ಮುಡಾದ 631 ನಿವೇಶನಗಳ ಮಾಹಿತಿ ಕೋರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದರು.
ಮುಡಾ ವ್ಯಾಪ್ತಿಯಲ್ಲಿನ 631 ನಿವೇಶನಗಳ ಪಟ್ಟಿಯನ್ನು ಸರ್ವೆ ಸಂಖ್ಯೆ ಸಮೇತ ಇ.ಡಿ. ನೀಡಿದೆ. ದಟ್ಟಗಳ್ಳಿ, ಕೆಸರೆ 1ರಿಂದ ಮೂರನೇ ಹಂತ, ಜೆ.ಪಿ.ನಗರ, ವಿಜಯನಗರ, ಹಂಚ್ಯಾ-ಸಾತಗಳ್ಳಿ, ಹೆಬ್ಬಾಳ, ಶ್ರೀರಾಂಪುರ, ವಸಂತನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿಹಂಚಿಕೆ ಆಗಿರುವ ನಿವೇಶನಗಳ ಮಾಲೀಕರು, ಅವರ ವಿಳಾಸ, ನಿವೇಶನ ಮಂಜೂರಾದ ದಿನ, ನಿವೇಶನದ ವಿಸ್ತೀರ್ಣದ ಮಾಹಿತಿಯನ್ನು ಅಧಿಕಾರಿಗಳು ಕೋರಿದ್ದರು.
ಇ.ಡಿ. ಪತ್ರದ ಹಿನ್ನೆಲೆಯಲ್ಲಿ ಅಷ್ಟು ನಿವೇಶನಗಳ ಮಾಹಿತಿ ಕಲೆ ಹಾಕಿದ ಮುಡಾ ಅಧಿಕಾರಿಗಳು ಕೆಲ ದಿನಗಳ ಹಿಂದೆಯಷ್ಟೇ 631 ನಿವೇಶನಗಳ ಮಾಹಿತಿಯನ್ನು ಇ.ಡಿ. ಅಧಿಕಾರಿಗಳಿಗೆ ರವಾನೆ ಮಾಡಿದ್ದರು. ಇಷ್ಟು ನಿವೇಶನಗಳ ಮಾಹಿತಿ ಬರುತ್ತಿದ್ದಂತೆ ಇ.ಡಿ ಅಧಿಕಾರಿಗಳು, ಅಷ್ಟು ನಿವೇಶನಗಳ ಮುಟ್ಟುಗೋಲಿಗೆ ಕ್ರಮ ವಹಿಸಿದ್ದಾರೆ ಎನ್ನಲಾಗಿದೆ.
ಈ ನಿವೇಶನಗಳಲ್ಲಿ ಕೆಲವು 50:50 ಅನುಪಾತದಲ್ಲಿ ಹಂಚಿಕೆ ಆಗಿದ್ದರೆ, ಇನ್ನು ಕೆಲವು ನಿವೇಶನಗಳ ವಿಸ್ತೀರ್ಣ ಮಾರ್ಪಾಡು ಮಾಡಿ ಹಂಚಲಾಗಿದೆ ಎನ್ನಲಾಗಿದೆ.ಎರಡನೇ ಪಟ್ಟಿಯಲ್ಲಿ 631 ನಿವೇಶನಗಳ ಮಾಹಿತಿ ಬರುತ್ತಿದ್ದಂತೆ ಇಡಿ ಅಧಿಕಾರಿಗಳು ಮತ್ತೆ 550 ನಿವೇಶನಗಳ ಮಾಹಿತಿಯನ್ನು ಕೇಳಿ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿರುವ 141 ನಿವೇಶನಗಳ ಮಾಹಿತಿಯನ್ನು ಉಪ ನೋಂದಣಾಧಿಕಾರಿಗಳ ಕಚೇರಿಗೆ ಕಳುಹಿಸಿರುವ ಇ.ಡಿ. ಅಧಿಕಾರಿಗಳು, ಈ ನಿವೇಶನಗಳ ನೋಂದಣಿ ಮಾಡದಂತೆ ಸೂಚನೆ ನೀಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ದಿನೇಶ್ ಹಾಗೂ ನಟೇಶ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ನಟೇಶ್ ಮುಡಾ ಆಯುಕ್ತರಾಗಿದ್ದಾಗ ಸಿಎಂ ಪತ್ನಿಗೆ ಸೈಟ್ ಹಂಚಿಕೆಯಾಗಿತ್ತು. ನಟೇಶ್ ವಿರುದ್ಧ ಮುಡಾದಿಂದ 50:50 ಅನುಪಾತದಲ್ಲಿ 928 ನಿವೇಶನಗಳನ್ನು ಅಕ್ರಮ ಹಂಚಿಕೆ ಮಾಡಿದ ಆರೋಪವಿದೆ. ವಿಚಾರಣೆ ವೇಳೆ ನಾನು ಯಾವುದೇ ತಪ್ಪು ಮಾಡಿಲ್ಲ. ಸರ್ಕಾರದ ಆದೇಶ ಚಾಚೂ ತಪ್ಪದೇ ಪರಿಪಾಲಿಸಿದ್ದೇನೆ ಎಂದು ಹೇಳಿದ್ದರು.
ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯಿದೆ (ಪಿಎಂಎಲ್ ಎ)-2002 ರ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಬೆಂಗಳೂರು ವಲಯದಲ್ಲಿ ಈ ಮುಟ್ಟುಗೋಲು ಹಾಕಿಕೊಂಡಿದೆ. ಮೈಸೂರು ಲೋಕಾಯುಕ್ತ ಪೊಲೀಸರು ಭಾರತೀಯ ದಂಡ ಸಂಹಿತೆ 1860 ಹಾಗೂ 1988ರ ಭ್ರಷ್ಟಾಚಾರ ನಿಗ್ರಹ ಕಾಯಿದೆ 17ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ನಂತರ ಜಾರಿ ನಿರ್ದೇಶನಾಲಯ ತನಿಖೆಯನ್ನು ಆರಂಭಿಸಿತ್ತು.
ಸಿದ್ದರಾಮಯ್ಯ ಅವರು ತಮ ಪತ್ನಿಗೆ ಮುಡಾದಿಂದ 14 ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಲೋಕಾಯುಕ್ತ ಹಾಗೂ ಇ.ಡಿ. ತನಿಖೆ ಎದುರಿಸುತ್ತಿದ್ದಾರೆ. ಮುಡಾ ಸ್ವಾಧೀನಪಡಿಸಿಕೊಂಡ 3 ಎಕರೆ 16 ಗುಂಟೆ ಭೂಮಿಗೆ ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ ಪ್ರಭಾವ ಬಳಸಿ ಪತ್ನಿ ಬಿ.ಎಂ.ಪಾರ್ವತಿ ಅವರ ಹೆಸರಿಗೆ ಪ್ರತಿಷ್ಠಿತ ಬಡಾವಣೆಯಲ್ಲಿ 14 ನಿವೇಶನಗಳ ಪರಿಹಾರವನ್ನು ಮಂಜೂರು ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುಡಾ ಸ್ವಾಧೀನಪಡಿಸಿಕೊಂಡ ಭೂಮಿಯ ಬೆಲೆ 3,24,700 ರೂ. ಮಾತ್ರ! ಆದರೆ ಅಂದಾಜು 60 ಕೋಟಿ ರೂ. ಬೆಲೆ ಬಾಳುವ 14 ನಿವೇಶನಗಳನ್ನು ಪರಿಹಾರವಾಗಿ ನೀಡಲಾಗಿದೆ. ಈ ನಿವೇಶನ ಹಂಚಿಕೆಯಲ್ಲಿ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಪಾತ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಮುಡಾ ಸೈಟು ಹಂಚಿಕೆ ಅಕ್ರಮ ದೊಡ್ಡ ಮಟ್ಟದ್ದು : ತನಿಖೆಯ ಸಂದರ್ಭದಲ್ಲಿ ಈ 14 ನಿವೇಶನಗಳಷ್ಟೇ ಅಲ್ಲದೆ ಇನ್ನೂ ಅನೇಕ ನಿವೇಶನಗಳನ್ನು ಪರಿಹಾರ ರೂಪದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಂಜೂರು ಮಾಡಲಾಗಿದೆ. ಈ ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಉದ್ಯಮಿಗಳು ಕಾನೂನು ಬದ್ಧವಾಗಿ ಕೋಟ್ಯಂತರ ರೂ. ಹಣ ಸಂಪಾದನೆ ಮಾಡಿದ್ದಾರೆ. ಇದು ಅಕ್ರಮ ಹಣ ವರ್ಗಾವಣೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಇ.ಡಿ. ಹೇಳಿದೆ. ಪ್ರಭಾವಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಪರವಾಗಿ ಬೇನಾಮಿ ವ್ಯಕ್ತಿಗಳಿಗೂ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ತನಿಖೆಯ ಸಂದರ್ಭದಲ್ಲಿ ಇ.ಡಿ. ಈ ಎಲ್ಲ ಅಕ್ರಮಗಳನ್ನು ಪತ್ತೆ ಹಚ್ಚಿದೆ.
2021ರಲ್ಲಿ ಮುಡಾದಿಂದ ಅಕ್ರಮವಾಗಿ 14 ನಿವೇಶನಗಳನ್ನು ಪಡೆದುಕೊಂಡಿರುವ ಹಗರಣಕ್ಕೆ ಸಬಂಧಿಸಿದಂತೆ ಸೆಪ್ಟೆಂಬರ್ 27ರಂದು ಲೋಕಾಯುಕ್ತ ಎಫ್ ಐ ಆರ್ ದಾಖಲಿಸಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ ಪ್ರಭಾವ ಬಳಸಿ ತಮ ಪತ್ನಿಗೆ ಬೆಲೆ ಬಾಳುವ 14 ನಿವೇಶನಗಳನ್ನು ಹಂಚಿಕೆ ಮಾಡಿಸುವಲ್ಲಿ ಪ್ರಭಾವ ಬೀರಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕು ಎಂದು ಪ್ರದೀಪ್ ಕುಮಾರ್, ಟಿ.ಜೆ.ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಮೈಸೂರು ಮುಡಾ ಕಚೇರಿ ಸೇರಿ, ಅಧಿಕಾರಿಗಳ ಮೇಲೆ ಇ.ಡಿ. ದಾಳಿ ನಡೆಸಿತ್ತು.