Wednesday, February 5, 2025
Homeರಾಜ್ಯಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ನಿಯಮ ಪಾಲನೆಗೆ ಸಿಎಸ್ ಸೂಚನೆ

ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ನಿಯಮ ಪಾಲನೆಗೆ ಸಿಎಸ್ ಸೂಚನೆ

ಬೆಂಗಳೂರು,ಫೆ.5– ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಜೊತೆಗೆ ಕಿರುಕುಳ ತಪ್ಪಿಸಲು ಇರುವ ನಿಯಮಗಳ ಪಾಲನೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.

ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು, ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ ಕೈ ಸಾಲ ಪಡೆಯುವ ಪದ್ಧತಿ ರೂಢಿಯಲ್ಲಿದೆ. ಬಹುತೇಕರು ಪಡೆದ ಸಾಲವನ್ನು ವಾಪಸ್ನೀಡುತ್ತಾರೆ. ಆದರೆ, ಕೆಲವು ವ್ಯಕ್ತಿಗಳು ಸಾಮಾಜಿಕ, ವೈಯಕ್ತಿಕ ಅಥವಾ ಉತ್ಪಾದಕವಲ್ಲದ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವುದರಿಂದ, ಮರುಪಾವತಿ ಕ್ಷಮತೆ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಲ ನೀಡಿದವರು ಮರು ವಸೂಲಿಗಾಗಿ ಒತ್ತಾಯಿಸುತ್ತಾರೆ. ಕೆಲವೆಡೆ ಇದು ಕಿರುಕುಳವಾಗಿ ಬೆಳೆಯುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಸ್ ತಿಳಿಸಿದ್ದಾರೆ.

ಜನವರಿ 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಿತ್ತು. ಮೈಕ್ರೋ ಫೈನಾನ್‌್ಸ ಸಂಸ್ಥೆಗಳ ಕರ್ನಾಟಕ ವಲಯದ ಅಧ್ಯಕ್ಷರು, ಭಾರತೀಯ ರಿಸರ್ವ್ ಬ್ಯಾಂಕ್ನ ಪ್ರಾಂತೀಯ ನಿರ್ದೇಶಕರು ಹಾಗೂ ಸಾ-ಧನ್, ಎಕೆಎಂಐ, ಎಂಎಫ್ಐಎನ್ ಮತ್ತು ಪ್ರಮುಖ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು, ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ ಸಂಚಾಲಕರು, ಅಧಿಕಾರಿಗಳು, ಪೊಲೀಸ್, ಕಂದಾಯ, ಸಹಕಾರ ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿ, ಕಿರುಕುಳ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೆಶನ ನೀಡಿದ್ದಾರೆ ಎಂದಿದ್ದಾರೆ.

ಕರ್ನಾಟಕದ ಅಧಿನಿಯಮಗಳು: ಕರ್ನಾಟಕ ಲೇವಾದೇವಿದಾರರ ಅಧಿನಿಯಮ-1961 ಅಡಿಯಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಈ ಅಧಿನಿಯಮದಡಿಯಲ್ಲಿ 2024ರ ಡಿಸೆಂಬರ್ 31ರವರೆಗೆ 20,425 ಸಂಸ್ಥೆಗಳು ನೋಂದಣಿಯಾಗಿವೆ. ಅದರಲ್ಲಿ 6,590 ಲೇವಾದೇವಿದಾರರು, 6,772 ಪಾನ್ ಬ್ರೋಕರ್ಗಳು, 7,063 ಹಣಕಾಸಿನ ಸಂಸ್ಥೆಗಳು ಇವೆ ಎಂದು ಸಿಎಸ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯಿದೆ-2004 ಪ್ರಕಾರ ಭದ್ರತಾ ಸಾಲಗಳಿಗೆ ವರ್ಷಕ್ಕೆ ಶೇ.14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ವರ್ಷಕ್ಕೆ ಗರಿಷ್ಠ ಶೇ.16 ಗರಿಷ್ಠ ಬಡ್ಡಿ ದರವನ್ನು ಲೇವಾದೇವಿದಾರರಿಗೆ ನಿಗದಿಪಡಿಸಲಾಗಿದೆ. ಇಂತಹ ಮಾಹಿತಿಗಳನ್ನು ಸಾರ್ವಜನಿಕವಾಗಿ ಫಲಕಗಳ ಮೂಲಕ ಪ್ರದರ್ಶಿಸಲು ಸಂಸ್ಥೆಗಳು ಹಾಗೂ ಸಂಬಂಧಿಸಿದ ಕಚೇರಿಗಳಿಗೆ ತಿಳಿಸಲಾಗಿದೆ.

ಸಾಲಗಾರರು ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಾಲ ಪಡೆಯುವ ಮುನ್ನ ಲೇವಾದೇವಿ ಸಂಸ್ಥೆಗಳ ಅಧಿಕೃತ ನೋಂದಣಿ ಪತ್ರ, ಬಡ್ಡಿದರ, ವಸೂಲಿ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆಗಳಿಂದ ಸಾಲ ಮರುಪಾವತಿ ಸಂದರ್ಭದಲ್ಲಿನ ಕಿರುಕುಳ ತಪ್ಪಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಸೂಕ್ಷ್ಮ ಹಣಕಾಸು ಸಂಸ್ಥೆಗಳು ಎಂದರೇನು? :
3 ಲಕ್ಷ ರೂ.ವರೆಗೂ ಆದಾಯ ಇರುವ ಸಾರ್ವಜನಿಕರಿಗೆ ಸಾಲವನ್ನು ಒದಗಿಸುವ ವ್ಯವಸ್ಥೆಯನ್ನು ಮೈಕ್ರೋ ಫೈನಾನ್ಸ್ ಎಂದು ಘೋಷಿಸಲಾಗಿದೆ. ಬ್ಯಾಂಕ್ಗಳಲ್ಲದ ಸಹಕಾರ ಸಂಘಗಳು, ಎನ್ಬಿಎಫ್ಸಿಗಳು, ಸರ್ಕಾರೇತರ ಸಂಸ್ಥೆಗಳು, ಟ್ರಸ್ಟ್ಗಳು, ಸಣ್ಣ ಅಂಗಡಿ ಮಾಲೀಕರು, ಇನ್ನಿತರರು ಸಾಲ ನೀಡುತ್ತಾರೆ. ಸಹಕಾರಿ ಸಂಸ್ಥೆಗಳ ಮೇಲ್ವಿಚಾರಣೆಯನ್ನು ಸಹಕಾರ ಇಲಾಖೆ ಹಾಗೂ ಬ್ಯಾಂಕ್ ಅಲ್ಲದ ಆರ್ಥಿಕ ಸಂಸ್ಥೆಗಳ (ಎನ್ಬಿಎಫ್ಸಿ) ಮೇಲ್ವಿಚಾರಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮೂಲಕ ನೋಂದಣಿ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಸಾ-ಧನ್ ಮತ್ತು ಮೈಕ್ರೋ ಫೈನಾನ್ಸ್ ಇಂಡಸ್ಟ್ರಿ ನೆಟ್ವರ್ಕ್ ಸಂಸ್ಥೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸ್ವಯಂ ನಿಯಂತ್ರಣಾ ಸಂಸ್ಥೆಗಳನ್ನಾಗಿ ನೇಮಿಸಿದೆ. ನಿಗದಿತ ಉತ್ತಮ ಲೇವಾದೇವಿ ಪದ್ದತಿಗಳನ್ನು ಅನುಷ್ಠಾನಗೊಳಿಸಲು ಈ ಸಂಸ್ಥೆಗಳನ್ನು ರಚಿಸಲಾಗಿದೆ ಎಂದು ವಿವರಿಸಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ಕೇವಲ 31 ಮೈಕ್ರೋ ಫೈನಾನ್ಸ್ ಇಂಡಸ್ಟ್ರಿಗಳು ಅಸ್ತಿತ್ವದಲ್ಲಿವೆ.

ಈ 31 ಸಂಸ್ಥೆಗಳು ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಇನಸ್ಟಿಟ್ಯೂಷನ್ ಸದಸ್ಯತ್ವ ಪಡೆದಿವೆ. ರಾಜ್ಯದಲ್ಲಿ ಈ ಸಂಸ್ಥೆಗಳ 3090 ಶಾಖೆಗಳಿದ್ದು, 37,967 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 1,09,88,332 ಖಾತೆಗಳಲ್ಲಿ 59,367.76 ಕೋಟಿ ರೂ. ಬಾಕಿ ಉಳಿದಿದೆ. ನಿಯಮಗಳನ್ನು ಪಾಲಿಸದ ಹಣಕಾಸು ಸಂಸ್ಥೆಗಳ ಬಗ್ಗೆ ಮೇಲ್ವಿಚಾರಣಾ ಸಂಸ್ಥೆಗಳ ಮೂಲಕ ಭಾರತೀಯ ರಿಸರ್ವ್ ಬ್ಯಾಂಕಿಗೆ ವರದಿ ನೀಡಲಾಗುತ್ತದೆ. ಆರ್ಬಿಐ ಒಪ್ಪಿಗೆಯೊಂದಿಗೆ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳು:
ಎಲ್ಲಾ ಎನ್ಬಿಎಫ್ಸಿ-ಎಂಎಫ್ಐಗಳು ಬಡ್ಡಿಯ ದರ, ಮರುಪಾವತಿಯ ಕಂತು ಮತ್ತು ಅಸಲು ಸಾಲ ಮುಂತಾದವುಗಳ ಬಗ್ಗೆ ಫ್ಯಾಕ್ಟ್ ಶೀಟ್ನಲ್ಲಿ ಸಾಲ ವಿತರಣೆಯ ಸಮಯದಲ್ಲಿ ಪ್ರತಿಯೊಬ್ಬ ಸಾಲಗಾರನಿಗೆ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದ್ದಾರೆ. ಮೈಕ್ರೋ ಫೈನಾನ್‌್ಸ ಇನ್ಸ್ಟಿಟ್ಯೂಷನ್ (ಎಂಎಫ್ಐ), ಮನಿ ಲೆಂಡಿಂಗ್ ಏಜೆನ್ಸಿ ಅಥವಾ ಸಂಸ್ಥೆಯಿಂದ ನೀಡುವ ಎಲ್ಲ ಸಾಲಗಳ ಮಂಜೂರಾತಿ, ವಿತರಣೆಯ ಪ್ರಕ್ರಿಯೆಯಲ್ಲಿ ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕು.

ಸಾಲಗಾರನಿಗೆ ಸಾಲದ ನಿಯಮಗಳ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಅಥವಾ ಆತನಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು. ಸಾಲದ ಅರ್ಜಿಯಲ್ಲಿ ಷರತ್ತುಗಳ ಬಗ್ಗೆ ಮಾಹಿತಿ ನೀಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಬೇಕು. ಯಾವ ದಾಖಲೆಗಳನ್ನು ನೀಡುವ ಅವಶ್ಯಕತೆ ಇದೆ ಎನ್ನುವ ಸೂಕ್ತ ಮಾಹಿತಿ ನೀಡಬೇಕು. ನಗದು ಪುಸ್ತಕ, ಲೆಡ್ಜರ್ ಮತ್ತು ಇತರ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.

ಸಾಲ ನೀಡಿದ ದಿನಾಂಕದಿಂದ 7 ದಿನಗಳ ಒಳಗೆ ಸಾಲಗಾರನಿಗೆ ನಿಗದಿತ ನಮೂನೆಯಲ್ಲಿ ಸಾಲದ ಮೊತ್ತ, ನೀಡಿದ ದಿನಾಂಕ ಮತ್ತು ಅವಧಿಯ ಮುಕ್ತಾಯ, ಸಂಸ್ಥೆಯ ಕಾರ್ಯನಿರ್ವಾಹಕರ ಹೆಸರು ಮತ್ತು ವಿಳಾಸ, ನಿಯಮಾನುಸಾರ ವಿಧಿಸಲಾಗುವ ಬಡ್ಡಿದರ ಸ್ಪಷ್ಟವಾಗಿರುವ ಲಿಖಿತ ದಾಖಲೆಯನ್ನು ತಲುಪಿಸಬೇಕು. ಸಾಲಗಾರನು ಮಾಡುವ ಪಾವತಿಗೆ ಪ್ರತಿಯಾಗಿ ಸಹಿ ಮಾಡಿದ ರಶೀದಿ ನೀಡಬೇಕು ಎಂದಿದ್ದಾರೆ.

ಸಾಲಗಾರನ ಲಿಖಿತ ಬೇಡಿಕೆಯ ಮೇರೆಗೆ ಸಾಲಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯ ನಕಲನ್ನು ನೀಡಬೇಕು. ಸಾಲಗಾರರಿಂದ ಪಡೆದ ಭದ್ರತೆಯನ್ನು ಸ್ಪಷ್ಟವಾಗಿ ತಿಳಿಸಬೇಕು. ಜನಸಾಮಾನ್ಯರು ಈ ವಿಧಾನಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು. ತಮ ಅಧಿಕೃತ ಹಕ್ಕುಗಳು, ಬಾಧ್ಯತೆಗಳ ಬಗ್ಗೆ ಖಚಿತಪಡಿಸಿಕೊಂಡ ನಂತರ ಸಾಲ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಬಡಜನರ ಅವಶ್ಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಕೆಲವು ವ್ಯಕ್ತಿಗಳು, ಅನಧಿಕೃತ ಲೇವಾದೇವಿದಾರರು ಜನರ ತುರ್ತು ಅವಶ್ಯಕತೆಗೆ ಹಣ ನೀಡಿ, ಹೆಚ್ಚು ಬಡ್ಡಿ ವಿಧಿಸಿ ಶೋಷಣೆ ಮಾಡುತ್ತಾರೆ. ಅಂತಹ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗಳಿಗೆ ದೂರು ನೀಡಬಹುದು. ಸೂಕ್ಷ್ಮ ಹಣಕಾಸು ಸಂಸ್ಥೆ , ಮನಿ ಲೆಂಡಿಂಗ್ ಸಂಸ್ಥೆಗಳ ನಿಯಮ ಉಲ್ಲಂಘನೆಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯವಾಣಿ ಸಂಖ್ಯೆ 14448ಕ್ಕೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಮೈಕ್ರೋ ಫೈನಾನ್‌್ಸ ಸಾಲಗಾರರಿಗೆ ಎಲ್ಲ ರೀತಿಯ ಕಾನೂನು ರಕ್ಷಣೆ ನೀಡಲು ಕ್ರಮ ವಹಿಸಿದೆ. ನೊಂದ ವ್ಯಕ್ತಿಗಳು ರಾಜ್ಯದ ಏಕೀಕೃತ ಸಹಾಯವಾಣಿ ಸಂಖ್ಯೆ: 112 ಅಥವಾ 1902 ಸಂಪರ್ಕಿಸಬಹುದು ಎಂದು ಸಿಎಸ್ ಮಾಹಿತಿ ನೀಡಿದ್ದಾರೆ.

RELATED ARTICLES

Latest News