ಥಾಣೆ, ಫೆ.6 (ಪಿಟಿಐ) – ಸೆಲ್ಫಿ ಕ್ರೇಜಿಗೆ ವ್ಯಕ್ತಿಯೊಬ್ಬರು ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಹಳಿಗಳ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 24 ವರ್ಷದ ವ್ಯಕ್ತಿಯೊಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಬರನಾಥ್ ಮತ್ತು ಬದ್ಲಾಪುರ್ ನಿಲ್ದಾಣಗಳ ನಡುವಿನ ಫ್ಲೈಓವರ್ ಅಡಿಯಲ್ಲಿ ಈ ಘಟನೆ ನಡೆದಿದೆ ಎಂದು ಕಲ್ಯಾಣ್‌ನಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೆಲ್ಫಿ ಕ್ರೇಜಿಗೆ ಬಲಿಯಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ಸಾಹಿರ್ ಅಲಿ ಎಂದು ಗುರುತಿಸಲಾಗಿದೆ. ಥಾಣೆಯ ಅಂಬರನಾಥ್ ಪ್ರದೇಶದಲ್ಲಿ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದಾಗ ಈ ಘಟನೆ ನಡೆದಿದೆ ಎಂದು ಜಿಆರ್‌ಪಿಯ ಹಿರಿಯ ಪೊಲೀಸ್ ಇನ್‌್ಸಪೆಕ್ಟರ್ ಪಂಢರಿ ಕಾಂಡೆ ತಿಳಿಸಿದ್ದಾರೆ.
ತಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸೆಲ್ಫಿ ಮತ್ತು ಗ್ರೂಪ್ ಫೋಟೋಗಳನ್ನು ತೆಗೆದುಕೊಳ್ಳಲು ಫ್ಲೈಓವರ್ ಅಡಿಯಲ್ಲಿ ರೈಲ್ವೆ ಹಳಿಗಳ ಬಳಿ ಹೋಗಿ ಸೆಲ್ಫಿ ಸೆರೆಹಿಡಿಯುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೊಯ್ನಾ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಾಹಿತಿ ಪಡೆದ ಕಲ್ಯಾಣ್ ಜಿಆರ್ ಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಪೊಲೀಸರು ಆಕಸಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ರೈಲ್ವೆ ಹಳಿಗಳ ಮೇಲೆ ಅತಿಕ್ರಮಣ ಮಾಡುವ ಅಪಾಯಗಳ ಬಗ್ಗೆ ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ