ನವದೆಹಲಿ,-ಫೆ.6– ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ದೇಶಾದ್ಯಂತ ಜಾರಿ ಮಾಡಲು ಉದ್ದೇಶಿಸಿರುವ ಹೊಸ ಆದಾಯ ತೆರಿಗೆ ಮಸೂದೆಗೆ ನಾಳೆ ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಿದೆ.
ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆಗೆ ಅನುಮತಿ ದೊರೆಯಲಿದ್ದು, ಸೋಮವಾರ ಸಂಸತ್ನ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರವರು ಮಂಡನೆ ಮಾಡಲಿದ್ದಾರೆ.
ನೂತನ ಮಸೂದೆಯಲ್ಲಿ ತೆರಿಗೆ ವ್ಯವಸ್ಥೆಯನ್ನು ಸುಧಾರಿಸುವ ಹಾಗೂ ಹೆಚ್ಚು ಪಾರದರ್ಶಕವಾಗಲಿದ್ದು, ಇದು ತೆರಿಗೆದಾರರಿಗೆ ಸುಲಭ ಮತ್ತು ಸರಳೀಕರಣವೂ ಆಗಲಿದೆ ಎಂದು ತಿಳಿದುಬಂದಿದೆ.
ಕಳೆದ ಶನಿವಾರ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ಅವರು, ಆದಾಯ ತೆರಿಗೆಗೆ ಸಂಬಂ„ಸಿದ ಪ್ರಸ್ತುತ ಕಾನೂನುಗಳನ್ನು ಸರಳೀಕರಿಸಲು ಪ್ರಯತ್ನಿಸುವ ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಘೋಷಿಸಿದ್ದರು.
ಹೊಸ ಆದಾಯ ತೆರಿಗೆ ಮಸೂದೆಯು ಪ್ರಸ್ತುತ ಆದಾಯ ತೆರಿಗೆ ಕಾನೂನನ್ನು ಸರಳೀಕರಿಸುತ್ತದೆ, ಹೊಸ ಆದಾಯ ತೆರಿಗೆ ಮಸೂದೆಯು ಕಾನೂನುಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಮಾಡಲು ಮತ್ತು ಪುಟಗಳ ಸಂಖ್ಯೆಯನ್ನು ಸುಮಾರು ಶೇ.60ರಷ್ಟು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿರುವ ಹಿನ್ನೆಲೆಯಲ್ಲಿ ಹಳೆಯ ತೆರಿಗೆ ಪದ್ಧತಿಗೆ ವಿದಾಯ ಹೇಳಲಾಗುತ್ತದೆ ಎಂಬ ಊಹಾಪೊಗಳಿಗೆ ಸ್ಪಷ್ಟನೆ ನೀಡಿದ್ದ ಅವರು, ಹಳೆಯ ತೆರಿಗೆ ಪದ್ಧತಿಯನ್ನು ರದ್ದುಪಡಿಸುವ ಯಾವ ಪ್ರಸ್ತಾಪವೂ ಸರಕಾರದ ಮುಂದಿಲ್ಲ ಎಂದಿದ್ದರು.
ವಾರ್ಷಿಕ 12 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರ ಆದಾಯ ತೆರಿಗೆ ಹೊರೆಯು ಹೊಸ ತೆರಿಗೆ ಪದ್ಧತಿ ಅಡಿ 2025-26ನೇ ಆರ್ಥಿಕ ವರ್ಷದಿಂದ (ಏಪ್ರಿಲ್ 1) ಸೊನ್ನೆಗೆ ಇಳಿಯಲಿದೆ. ವೇತನದಾರ ವರ್ಗದವರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯವಿದೆ. ಹೀಗಾಗಿ ಈ ವರ್ಗದವರಿಗೆ ವಾರ್ಷಿಕ 12.75 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ಹೊರೆ ಇರುವುದಿಲ್ಲ.
2025-26ನೇ ಸಾಲಿನ ಬಜೆಟ್ನಲ್ಲಿ ಬಂಡವಾಳ ವೆಚ್ಚಕ್ಕೆ 11.21 ಲಕ್ಷ ಕೋಟಿ ರೂ. ನಿಗದಿಪಡಿಸಲಾಗಿದೆ. ಇದು ಒಟ್ಟು ಆಂತರಿಕ ಉತ್ಪನ್ನದ (ಜಿ ಡಿ ಪಿ) ಶೇ 4.3ರಷ್ಟಿದೆ. ಬಜೆಟ್ನಲ್ಲಿ ಬಂಡವಾಳ ವೆಚ್ಚವನ್ನು ಕಡಿತಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು.