ಬೆಂಗಳೂರು,ಫೆ.6-ನನ್ನ ನಾಯಕತ್ವದ ಬಗ್ಗೆ ಯಾರಿಗಾದರೂ ಅನುಮಾನಗಳಿದ್ದರೆ ನನ್ನ ಬಗ್ಗೆ ಮಾತನಾಡಲಿ. ಆದರೆ ನಮ ತಂದೆಯವರಾದ ಯಡಿಯೂರಪ್ಪನವರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡುವುದು ಇಲ್ಲವೇ ಕೀಳು ಪದ ಪ್ರಯೋಗ ಮಾಡಿದರೆ ಸುಮನಿರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಿನ್ನಮತಿಯರಿಗೆ ನೇರ ಮಾತುಗಳಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ಇತ್ತೀಚೆಗೆ ಕೆಲವರು ಯಡಿಯೂರಪ್ಪನವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಯಡಿಯೂರಪ್ಪನವರು. ನನ್ನ ಬಗ್ಗೆ ಅಸಮಾಧಾನ ವಿದ್ದರೆ ಮಾತನಾಡಿ. ಆದರೆ ತಂದೆಯವರ ಬಗ್ಗೆ ಮಾತನಾಡಿದರೆ ಸುಮನಿರುವುದಿಲ್ಲ.
ನಮ ತಾಳೆಗೂ ಇತಿಮಿತಿ ಇದೆ ಎಂದು ಗುಡುಗಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಾರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದೇನೆ. ಹಾಗಂತ ಮೌನ ವಹಿಸಿದ್ದೇನೆ ಎಂದರೆ ಅದು ನನ್ನ ದೌರ್ಭಾಗ್ಯವಲ್ಲ. ನನಗೂ ಸ್ವಾಭಿಮಾನವಿದೆ. ಸೂಕ್ತ ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದು ಅಸಮಾಧಾನ ಹೊರ ಹಾಕಿದರು.
ನನ್ನ ಬಗ್ಗೆ ನೀವು ಎಷ್ಟೇ ಮಾತನಾಡಿದರೂ ತೊಂದರೆ ಇಲ್ಲ. ಸಹಿಸಿಕೊಳ್ಳುತ್ತೇನೆ. ಯಡಿಯೂರಪ್ಪನವರನ್ನು ತೇಜೋವಧೆ ಮಾಡಿ ಅವಮಾನ ಮಾಡಲಾಗುತ್ತಿದೆ. ನಮ ಕಾರ್ಯಕರ್ತರು ತಲೆ ಎತ್ತಿ ತಿರುಗಾಡದಂತಹ ಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವರು ಎಲ್ಲವನ್ನು ನೋಡಿ ನಡೆದದ್ದು ನಡೆಯಲಿ ಎಂದು ಮೌನವಾಗಿದ್ದಾರೆ. ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತನೆ ಮಾಡುತ್ತಿದ್ದಾರೆ. ಯಡಿಯೂರಪ್ಪನವರ ಬಗ್ಗೆ ತೇಜೋವಧೆ ಮಾಡುತ್ತಿರುವವರನ್ನು ತಡೆಯುವ ಕೆಲಸ ಹಿರಿಯರು ಮಾಡಬೇಕಿತ್ತು. ಇದನ್ನು ವರಿಷ್ಠರ ಗಮನಕ್ಕೆ ಏಕೆ ತರುತ್ತಿಲ್ಲ ಎಂದು ತಟಸ್ಥ ಬಣದವರ ವಿರುದ್ಧವೂ ಪರೋಕ್ಷವಾಗಿ ಕೆಂಡ ಕಾರಿದರು.
ಒಂದು ವರ್ಷದಿಂದ ನಿರಂತರವಾಗಿ ಕೆಲವರು ಯಡಿಯೂರಪ್ಪನವರನ್ನು ತೇಜೋವಧಿ ಮಾಡುತ್ತಲೇ ಬಂದಿದ್ದಾರೆ. ದುರದ್ದೇಶಪೂರ್ವಕವಾಗಿ ಅವಮಾನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಹೈಕಮಾಂಡ್ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬೆಂಬಲವಿದೆ ಎಂದು ಕೆಲವರು ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯಾಧ್ಯಕ್ಷನಾಗಿ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಈ ಬೆಳವಣಿಗೆಗೂ ಹಾಗೂ ಬಿ.ಎಲ್.ಸಂತೋಷ್ಗೂ ಸಂಬಂಧವಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಭಿನ್ನಮುಖ ಶಮನಕ್ಕೆ ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕೆಂಬ ಮಾಜಿ ಸಿಎಂ ಬಸವರಾಜ ಬೊಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರು ಮಧ್ಯಸ್ಥಿಕೆ ವಹಿಸಬೇಕೆಂದಾದರೆ ಮೊದಲು ಭಿನ್ನಮತಿಯರ ಬಾಯಿಗೆ ಬೀಗ ಹಾಕಿಕೊಳ್ಳಲು ಹೇಳಬೇಕು. ಯಡಿಯೂರಪ್ಪನವರ ವಿರುದ್ಧ ಕೆಲವರು ತೇಜೋವಧೆ ಮಾಡುತ್ತಿರುವುದನ್ನು ನೋಡಿಕೊಂಡು ಸುಮನಿರುತ್ತೀರಿ ಎನ್ನುವುದಾದರೆ ರಾಜ್ಯಾಧ್ಯಕ್ಷನಾಗಿ ಏನು ಹೇಳಬೇಕೆಂಬ ಅರಿವು ನನಗಿದೆ ಎಂದು ತಿರುಗೇಟು ನೀಡಿದರು.
ನಾನು ರಾಜ್ಯಾಧ್ಯಕ್ಷನಾಗಿ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರು ಎಲ್ಲೇ ಹೋದರೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ನನಗೆ ಕಾರ್ಯಕರ್ತರ ಅಭಿಮಾನ ಸಾಕು ಎಂದರು.
ಸರ್ಕಾರದ ಜೊತೆ ನಾವು ಯಾವುದೇ ರೀತಿಯಲ್ಲೂ ಶಾಮೀಲಾಗಿಲ್ಲ. ಮುಡಾ, ವಾಲೀಕಿ ಸೇರಿದಂತೆ ಸರ್ಕಾರದ ಹಗರಣಗಳ ವಿರುದ್ಧ ಜನಾಂದೋಲನ ರೂಪಿಸಿದ್ದು ನಾವು. ನಾವು ಏನೇನೂ ಮಾಡಿಲ್ಲ ಎಂದು ಹಾದಿಬೀದಿಯಲ್ಲಿ ಮಾತನಾಡುವವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟ ವೇಳೆ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನೆ ಮಾಡಿದರು.
ಹೊಂದಾಣಿಕೆ ರಾಜಕೀಯ ಎನ್ನುವುದಾದರೆ ಮೈಸೂರು ಪಾದಯಾತ್ರೆ ನಡೆಯುತ್ತಿತ್ತಾ? ಈ ರೀತಿ ಹೇಳಿಕೆಯಿಂದ ಕಾರ್ಯಕರ್ತರಿಗೆ ಅವಮಾನ ಮಾಡಲಾಗುತ್ತಿದೆ. ವಿಜಯೇಂದ್ರಗೆ ಅಪಮಾನ ಮಾಡಲಿ, ಆದರೆ ಕಾರ್ಯಕರ್ತರಿಗೆ ಅಪಮಾನ ಮಾಡುವುದು ಬೇಡ. ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.
ನಾನು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬ ಆಪಾದನೆ ಸರಿಯಲ್ಲ. ಮೊದಲ ಬಾರಿಗೆ ಶಾಸಕನಾಗಿ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇನೆ. ಯಾವುದೋ ಎರಡು ಹೋರಾಟಕ್ಕೆ ಗೈರಾದರೆ ಅದು ಹೊಂದಾಣಿಕೆ ರಾಜಕೀಯ ಅಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಬಳಿಕ ಅದಕ್ಕೆಲ್ಲಾ ಒಂದೊಂದಾಗಿ ಉತ್ತರ ಕೊಡುತ್ತೇನೆ. ಈಗ ಮಾತಾಡಲು ಹೋದರೆ ನನಗೂ ಅವರಿಗೂ ವ್ಯತ್ಯಾಸ ಇಲ್ಲ ಎಂದು ಹೇಳಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಲ್ಲರೂ ಒಪ್ಪುವಂತಹ ರಾಜ್ಯಾಧ್ಯಕ್ಷ ಬೇಕು ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಶಾಸಕರ ಸಭೆ ಕರೆದಾಗ ಇದನ್ನು ಚರ್ಚೆ ಮಾಡುತ್ತೇನೆ. ಯಡಿಯೂರಪ್ಪನವರ ತೇಜೋವಧೆ ನಡೆಯುತ್ತಿರುವಾಗ ಅದನ್ನು ಹಿರಿಯರು ನಿಲ್ಲಿಸುತ್ತಿಲ್ಲ ಎಂಬ ನೋವು ಯಡಿಯೂರಪ್ಪನವರ ಮಗನಾಗಿ, ರಾಜ್ಯಾಧ್ಯಕ್ಷನಾಗಿ ನನಗೆ ಇದೆ ಎಂದರು.
ರಾಜ್ಯದ ಅಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರಿಯೆ ಯಾವುದೇ ಸಮಯದಲ್ಲಿ ಬೇಕಾದರೂ ನಡೆಯಬಹುದು. 20ನೇ ತಾರೀಖಿನ ಒಳಗೆ ಎಲ್ಲವೂ ಮುಗಿಯುತ್ತದೆ ಎಂಬ ಮಾಹಿತಿ ಇದೆ. ಪಕ್ಷದ ಆಂತರಿಕ ಭಿನ್ನಮತ 20ನೇ ತಾರೀಖಿನ ಒಳಗೆ ಮುಗಿದು ಹೋಗುತ್ತದೆ. ಹಲವರು ನನ್ನ ಬಗ್ಗೆ ಪಕ್ಷದ ಬಗ್ಗೆ ನಾನಾ ಹೇಳಿಕೆ ಕೊಡುತ್ತಿದ್ದಾರೆ ರಾಜ್ಯದ ಅಧ್ಯಕ್ಷನಾಗಿ ನಾನು ಹೇಳಿಕೆ ಕ್ಟೊಟ್ಟರೆ ಸರಿಯಲ್ಲ, ಕಾರ್ಯಕರ್ತರಿಗೂ ನೋವಾಗುತ್ತೆ ಅದಕ್ಕೆ ಮಾತಾಡುತ್ತಿಲ್ಲ ಎಂದು ಹೇಳಿದರು.
ಮಾಜಿ ಸಚಿವರಾದ ಶ್ರೀರಾಮುಲು, ನನಗೆ ಅನುಭವದ ಕೊರತೆ ಇದೆ ಎಂದು ಹೇಳಿದ್ದಾರೆ. ರಾಜ್ಯದ ಅಧ್ಯಕ್ಷನಾಗಿ ನನಗೆ ಅನುಭವ ಇಲ್ಲದೆ ಇರಬಹುದು. ಪಕ್ಷದ ಕಾರ್ಯಕರ್ತನಾಗಿ, ಕಾರ್ಯದರ್ಶಿಯಾಗಿ, ಯುವಮೋರ್ಚಾ ಅಧ್ಯಕ್ಷನಾಗಿ, ಪಕ್ಷದ ಉಪಾಧ್ಯಕ್ಷನಾಗಿ ಅನುಭವ ಇದೆ ಎಂದು ತಿರುಗೇಟು ನೀಡಿದರು.
ಕಳೆದ ಕೆಲ ದಿನಗಳಿಂದ ಮೈಕ್ರೋ ಫೈನಾನ್ಸ್ ಹಾವಳಿ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರವೇ ದೌರ್ಜನ್ಯ ಎಸಗುತ್ತಿರುವ ಮೈಕ್ರೋ ಫೈನಾನ್ಸ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಬೆಳಿಗ್ಗೆ ಯಿಂದ ಸಂಜೆ 5 ಗಂಟೆವರೆಗೆ ಹೋಗಿ, ರಾತ್ರಿ ಹೋಗಬೇಡಿ ಎಂದು ಇವರೇ ಹೇಳಿದ್ದಾರೆ.
ರಾಜ್ಯದಲ್ಲಿ ವಸೂಲಾತಿ, ದೌರ್ಜನ್ಯ ನಡೆಯುತ್ತಿದೆ. ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ವ್ಯೂಹಕ್ಕೆ ಜನ ಸಿಕ್ಕಿ ಹಾಕಿಕೊಂಡಿದ್ದಾರೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಅವು ಒತ್ತಾಯಿಸಿದರು.
ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿ ಇದ್ದಾರಾ ಇಲ್ಲವೋ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.